ರಸ್ತೆ ಗುಂಡಿ ಮುಚ್ಚಲು ನಿರ್ಲಕ್ಷಿಸಿದರೆ ಅಧಿಕಾರಿ ವಿರುದ್ಧ ಕ್ರಮ: ತುಷಾರ್‌

| Published : Aug 18 2024, 01:51 AM IST

ರಸ್ತೆ ಗುಂಡಿ ಮುಚ್ಚಲು ನಿರ್ಲಕ್ಷಿಸಿದರೆ ಅಧಿಕಾರಿ ವಿರುದ್ಧ ಕ್ರಮ: ತುಷಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿ ಮಳೆಯಿಂದ ರಸ್ತೆ ಗುಂಡಿ ಹೆಚ್ಚುತ್ತಿದ್ದು, ಮುಚ್ಚಲು ನಿರ್ಲಕ್ಷ್ಯ ಮಾಡಿದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ದಿನದಿಂದ ದಿನಕ್ಕೆ ರಸ್ತೆ ಗುಂಡಿ ದೂರು ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಲಯ ಮುಖ್ಯ ಎಂಜಿನಿಯರ್‌ ಗುಂಡಿ ಮುಚ್ಚಿಸಲು ಕ್ರಮ ವಹಿಸುವಂತೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ರಸ್ತೆ ಗುಂಡಿಗೆ ಸಂಬಂಧಿಸಿದ ದೂರುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಎಂಟು ವಲಯದ ಮುಖ್ಯ ಎಂಜಿನಿಯರ್‌ ಗುಂಡಿಗೆ ಸಂಬಂಧಿಸಿದ ದೂರುಗಳು ದಾಖಲಾಗುತ್ತಿದ್ದಂತೆ ತ್ವರಿತವಾಗಿ ಗುಂಡಿ ಮುಚ್ಚಿಸಲು ಕ್ರಮ ವಹಿಸಬೇಕು. ರಸ್ತೆ ಗುಂಡಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಂದಿನ ದಿನಗಳಲ್ಲಿ ನಗರದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಬಂದಾಗ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ. ರಾಜಕಾಲುವೆ, ನೀರುಗಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳು ತೆಗೆಯಬೇಕೆಂದು ಸೂಚಿಸಿದರು.

ವಿಶೇಷ ಆಯುಕ್ತರಾದ ಡಾ। ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ರಮೇಶ್, ರಮ್ಯಾ, ವಿನೋತ್ ಪ್ರಿಯಾ, ಕರೀಗೌಡ, ಸ್ನೇಹಲ್, ಗಿರೀಶ್, ಪ್ರಧಾನ ಅಭಿಯಂತರ ಪ್ರಹ್ಲಾದ್, ವಲಯ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಇದ್ದರು.