ಬೀದರ್ ಜಿಲ್ಲೆಯಲ್ಲಿ 3 ದಿನಗಳ ಕಾಲ ಅನಿರೀಕ್ಷಿತ ಪ್ರವಾಸ ಕೈಗೊಂಡಿರುವ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಎಚ್.ಕೃಷ್ಣ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲೆಯಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ದುರ್ಬಲರಿಗೆ, ಹಿರಿಯರಿಗೆ ಆಹಾರ ವಿತರಣೆಯಲ್ಲಿ ಯಾವುದೇ ರೀತಿಯ ಅವ್ಯವಸ್ಥೆ ಕಂಡು ಬಂದಲ್ಲಿ ಆಯಾ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುಲಾಗುವುದೆಂದು ಎಚ್ಚರಿಸಿದ್ದಾಗಿ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಎಚ್.ಕೃಷ್ಣ ತಿಳಿಸಿದರು.ಬೀದರ್ ಜಿಲ್ಲೆಯಲ್ಲಿ 3 ದಿನಗಳ ಕಾಲ ಅನಿರೀಕ್ಷಿತ ಪ್ರವಾಸ ಕೈಗೊಂಡಿರುವ ಅವರು ಜುಲೈ 15ರಂದು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಜು. 16ರಂದು ಗುರುವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಆಯೋಗವು ನಾಲ್ಕು ಜನ ಸದಸ್ಯರ ತಂಡದೊಂದಿಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಂಡಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅನ್ವಯ ಆಹಾರ ಪ್ರತಿಯೊಬ್ಬ ಬಡವರಿಗೆ ನಿರ್ಗತಿಕರಿಗೆ ಸರ್ಕಾರವು ದುರ್ಬಲರಿಗೆ, ಮಕ್ಕಳಿಗೆ ಮಹಿಳೆಯರಿಗೆ ಆಹಾರ ಒದಗಿಸುವುದು ಮೂಲಭೂತ ಕರ್ತವ್ಯ, ಪ್ರತಿಯೊಬ್ಬರಿಗೂ ಆಹಾರದ ಹಕ್ಕು ಇದೆ ಎಂದರು.ಜಿಲ್ಲೆಯ ವಿವಿಧ ತಾಲೂಕುಗಳ ನ್ಯಾಯಬೆಲೆ ಅಂಗಡಿ, ಆಹಾರಧಾನ್ಯ ಸಗಟು ಮಳಿಗೆ, ಅಂಗನವಾಡಿ ಕೇಂದ್ರಗಳು, ಎಂಎಸ್‌ಪಿಟಿಸಿ ಶಾಲೆಗಳಲ್ಲಿ ಮಧ್ಯಾಹ್ನದ ಊಟ, ಆಸ್ಪತ್ರೆಗಳಲ್ಲಿ ಎಸ್‌ಆರ್‌ಸಿ ಘಟಕ, ವಿವಿಧ ಇಲಾಖೆಗಳ ಹಾಸ್ಟೆಲ್‌ಗಳಲ್ಲಿ ಆಹಾರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಡಾ.ಕೃಷ್ಣ ಹೇಳಿದರು.ಆಹಾರ ಸಂಬಂಧ ಎಲ್ಲ ಯೋಜನೆಗಳು ಸರಿಯಾಗಿ ಅನುಷ್ಠಾನ ಆಗುತ್ತಿವೆಯೇ? ಎಂಬುದನ್ನು ಪರಿಶೀಲಿಸಲು ಈ ಅನಿರೀಕ್ಷಿತ ಪ್ರವಾಸ ಹಮ್ಮಿಕೊಳ್ಳಲಾಗಿದೆ. ತಾವು ಜು.17ರವರೆಗೆ ಜಿಲ್ಲೆಯಲ್ಲಿದ್ದು, ಸಾರ್ವಜನಿಕರು ಆಹಾರ ಸಂಬಂಧಿತ ಯಾವುದಾದರೂ ಅಹವಾಲುಗಳು ಇದ್ದಲ್ಲಿ ಸಾರ್ವಜನಿಕರು ನೇರವಾಗಿ ಮೊಬೈಲ್ ನಂಬರ 9448466099 ಹಾಗೂ 9945037681ಗೆ ಸಂಪರ್ಕಿಸಬಹುದಾಗಿದೆ ಎಂದರು.ಜಿಲ್ಲೆಯಲ್ಲಿ ಒಟ್ಟು 150 ಪೆಟ್ರೋಲ್ ಬಂಕ್‌ಗಳಿವೆ ಎಲ್ಲ ಕಡೆ ನೀರು, ಗಾಳಿ ಹಾಗೂ ಶೌಚಾಲಯ ಕಡ್ಡಾಯವಾಗಿ ಉಚಿತವಾಗಿ ಲಭ್ಯವಾಗಬೇಕು. ಅಳತೆ ಮಾಪನ ಇಲಾಖೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಸೂಚಿಸಿದರು. ಒಟ್ಟು 14 ಇಲಾಖೆಗಳು ಆಯೋಗದ ವ್ಯಾಪ್ತಿಗೆ ಒಳಪಡುತ್ತವೆ. ಗೋದಾಮು ಗಳಿಂದ ಅಕ್ಕಿ ಕಳ್ಳ ಸಾಗಣೆ, ನ್ಯಾಯಬೆಲೆ ಅಂಗಡಿಗಳಲ್ಲಿ ಅಸಮರ್ಪಕ ಆಹಾರ ವಿತರಣೆ, ಅಂಗನವಾಡಿ ಅಥವಾ ಹಾಸ್ಟೆಲ್‌ಗಳಲ್ಲಿ ಅಸಮರ್ಪಕ ಆಹಾರ ವಿತರಣೆಯಂತಹ ದೂರುಗಳು ಇದ್ದಲ್ಲಿ ಸಾರ್ವಜನಿಕರು ನಮ್ಮ ಮೊಬೈಲ್‌ಗೆ ಕರೆ ಮಾಡಬಹುದು. ಗೌಪ್ಯವಾಗಿ ಅಹವಾಲು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು. ಆಯೋಗದ ಸದಸ್ಯರಾದ ಮಾರುತಿ ದೊಡ್ಡಲಿಂಗಣ್ಣವರ, ಲಿಂಗರಾಜ ಕೋಟೆ, ಸುಮಂತ ರಾವ್, ಕೆ.ಎಸ್.ವಿಜಯಲಕ್ಷ್ಮೀ ಇದ್ದರು.