ಸಾರಾಂಶ
ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇರುವ ಬಗ್ಗೆ ಜಿಲ್ಲೆಯ ಯಾವುದೇ ಸರ್ಕಾರಿ ಕಚೇರಿಯಲ್ಲಿ ಅಧಿಕಾರಿ ವಿರುದ್ಧ ದೂರು ಬಂದಲ್ಲಿ ಅಂತಹ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.
ಕುಮಟಾ: ಜಿಲ್ಲೆಯಲ್ಲಿ ಇದುವರೆಗೆ ನಡೆದಿರುವ ಜಿಲ್ಲಾ ಮಟ್ಟದ ೨ ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿರುವ ೩೨೩ ಅರ್ಜಿಗಳಲ್ಲಿ ಎಲ್ಲ ೩೨೩ ಅರ್ಜಿಗಳನ್ನೂ ಸಮರ್ಪಕವಾಗಿ ವಿಲೇವಾರಿ ಮಾಡಿ ಶೇ. ೧೦೦ರಷ್ಟು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲಾಗಿದೆ. ಅಲ್ಲದೇ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.
ತಾಲೂಕಿನ ದೀವಗಿಯ ಹಾಲಕ್ಕಿ ಒಕ್ಕಲಿಗರ ಭವನದಲ್ಲಿ ಮಂಗಳವಾರ ಕುಮಟಾ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗುವ ಎಲ್ಲ ಅರ್ಜಿಗಳೂ ಸೂಕ್ತ ಪರಿಹಾರ ದೊರೆಯುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕು ಎಂದರು.ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇರುವ ಬಗ್ಗೆ ಜಿಲ್ಲೆಯ ಯಾವುದೇ ಸರ್ಕಾರಿ ಕಚೇರಿಯಲ್ಲಿ ಅಧಿಕಾರಿ ವಿರುದ್ಧ ದೂರು ಬಂದಲ್ಲಿ ಅಂತಹ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಜನಸಾಮಾನ್ಯರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು, ಅವರು ಇರುವ ಕಡೆಗಳಿಗೆ ಎಲ್ಲ ಅಧಿಕಾರಿಗಳೊಂದಿಗೆ ತೆರಳಿ ಅವುಗಳನ್ನು ಪರಿಹರಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕಾಲಮಿತಿಯೊಳಗೆ ಬಗೆಹರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾತನಾಡಿ, ಜನಸ್ಪಂದನ ಸಭೆಯಲ್ಲಿ ಸ್ವೀಕರಿಸಲಾಗುವ ಪ್ರತಿಯೊಂದು ಅರ್ಜಿಗಳನ್ನೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಸಾರ್ವಜನಿಕರಿಗೆ ಅಗತ್ಯ ನೆರವು ಒದಗಿಸಬೇಕು. ಈ ಅರ್ಜಿಗಳ ವಿಲೇವಾರಿಯಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ನಂತರ ಸಾರ್ವಜನಿಕ ಅರ್ಜಿಗಳ ಪರಿಶೀಲನೆ ವೇಳೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಮಗಾರಿಗಳ ವಿರುದ್ದ ಸಾರ್ವಜನಿಕರು ಹಲವು ದೂರುಗಳನ್ನು ಸಲ್ಲಿಸಿದ್ದು, ಇತ್ತೀಚೆಗೆ ಶಿರೂರು ಬಳಿ ಸಂಭವಿಸಿದ ಗುಡ್ಡ ಕುಸಿತದಿಂದ ನೀರುಪಾಲಾಗಿದ್ದ ಗ್ಯಾಸ್ ಟ್ಯಾಂಕರ್ ಇದ್ದ ಸೇತುವೆ ಬಳಿ ಸೂಕ್ತ ರಕ್ಷಣಾ ತಡೆಗೋಡೆ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಅತ್ಯಂತ ಅಗತ್ಯವಿರುವಡೆ ಡಿವೈಡರ್ ಒಪನ್ ಮಾಡುವಂತೆ, ರಸ್ತೆ ಕಾಮಗಾರಿಯಿಂದ ಮನೆಗೆ ಮಳೆ ನೀರು ನುಗ್ಗುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದರು. ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ, ರಸ್ತೆಗಳ ಅಗಲೀಕರಣ, ರಸ್ತೆಗಳಲ್ಲಿ ಗುಂಡಿಗಳನ್ನು ಸರಿಪಡಿಸುವುದು, ಕುಮಟಾ ತಾಲೂಕು ಆಡಳಿತ ಸೌಧದಲ್ಲಿ ಸ್ವಚ್ಛತೆ ಕಾಪಾಡುವುದು, ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಇದೇ ಕಟ್ಟಡಕ್ಕೆ ಸ್ಥಳಾಂತರಿಸುವುದು, ತಹಸೀಲ್ದಾರ್ ನೇಮಕ, ಮಿರ್ಜಾನ್ ಬಳಿ ಕಾಂಕ್ರೀಟ್ ರಸ್ತೆ ನಿರ್ಮಾಣ, ಯಾಣ ರಸ್ತೆ ದುರಸ್ತಿ, ಹೋಮ್ ಸ್ಟೇಗಳ ಲೈಸೆನ್ಸ್ ನವೀಕರಣ, ಸಂತೆಗುಳಿ ಶಾಲೆಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಬಗ್ಗೆ, ಮೇದಿನಿ ರಸ್ತೆ ದುರಸ್ತಿ, ಚಂಡಿಕಾ ನದಿಗೆ ಸೇತುವೆ ನಿರ್ಮಾಣ ಮತ್ತಿತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಿದರು. ಜನಸ್ಪಂದನದಡಿ ಸಾರ್ವಜನಿಕರಿಂದ ೧೩೦ಕ್ಕೂ ಹೆಚ್ಚು ಅಹವಾಲುಗಳನ್ನು ಸ್ವೀಕರಿಸಲಾಯಿತು.ಶಾಸಕ ಭೀಮಣ್ಣ ನಾಯ್ಕ, ಶಾಂತಾರಾಮ ಸಿದ್ದಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಇತರ ಅಧಿಕಾರಿಗಳು ಇದ್ದರು. ಸಭೆಯ ಆರಂಭದಲ್ಲಿ ಸದ್ಭಾವನಾ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.