ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಅನ್ನಭಾಗ್ಯದ ಪಡಿತರ ಅಕ್ಕಿ ವಿತರಣೆಯಲ್ಲಿ ಉಂಟಾಗುತ್ತಿರುವ ಲೋಪದೋಷಗಳು ಮರುಕಳಿಸುವುದು ಕಂಡುಬಂದರೆ ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ವಿತರಕರನ್ನು ಹೊಣೆ ಮಾಡಿ ಕಾನೂನು ಕ್ರಮ ಜರುಗಿಸುವುದಾಗಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್ ಗೌಡ ಖಡಕ್ ಎಚ್ಚರಿಕೆ ನೀಡಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಅನ್ನಭಾಗ್ಯ ಗ್ಯಾರಂಟಿ ಯೋಜನೆಯ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಮತ್ತು ಪಡಿತರ ಹಂಚಿಕೆದಾರರ ಸಭೆ ನಡೆಸಿ ಮಾತನಾಡಿದ ಅವರು, ಹಲವಾರು ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ಪ್ರಮಾಣದಲ್ಲಿ ಅಕ್ಕಿ ವಿತರಿಸದೆ ಒಂದರಿಂದ ಎರಡು ಕೆ.ಜಿ. ಕಡಿಮೆ ವಿತರಿಸುತ್ತಿರುವುದು, ಪ್ರತಿ ಫಲಾನುಭವಿಯಿಂದ 10 ರು. ಹಣ ಸುಲಿಗೆ ಮಾಡುವುದು, ಹಣ ಹಾಕಲು ಡಬ್ಬ ಇಟ್ಟಿರುವುದು, ತೂಕದಲ್ಲಿ ಮೋಸ ಮಾಡುತ್ತಿರುವ ಕುರಿತು ದೂರುಗಳು ಬಂದಿವೆ. ಅನ್ಯಾಯಕ್ಕೆ ಒಳಗಾದ ಪಡಿತರದಾರರು ಅಂಗಡಿಗಳಲ್ಲಿ ನಡೆಯುವ ಅವ್ಯವಹಾರ ಕುರಿತು ವಿಡಿಯೋ ಚಿತ್ರೀಕರಿಸಿ ಕಳುಹಿಸಿದ್ದಾರೆ ಎಂದು ಸಭೆಯಲ್ಲಿ ಫೋಟೋ, ವಿಡಿಯೋ ಪ್ರದರ್ಶಿಸಿದರು. ಇನ್ನುಮುಂದೆ ಈ ರೀತಿಯ ಅಕ್ರಮಗಳನ್ನು ನಡೆಸುವ ಪ್ರಕರಣಗಳು ಕಂಡುಬಂದರೆ ವಿತರಕರ ಪರವಾನಗಿ ರದ್ದುಪಡಿಸಿ ಕಾನೂನು ಶಿಕ್ಷೆಗೆ ಗುರಿ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಗುಡುಗಿದರು.
ಸಮಯ ಪಾಲನೆ ಮಾಡಿ: ತಾಲೂಕಿನಲ್ಲಿ ಈತನಕ 1.90 ಕೋಟಿ ಕ್ವಿಂಟಲ್ ಪಡಿತರ ಅಕ್ಕಿ ವಿತರಿಸಲಾಗಿದೆ. ಅಲ್ಲದೆ 5 ಕೆ.ಜಿ. ಅಕ್ಕಿ ಬದಲಿಗೆ 37.87 ಕೋಟಿ ರು. ಹಣವನ್ನು ನೇರವಾಗಿ ಫಲಾನುಭವಿ ಖಾತೆಗೆ ಜಮಾ ಮಾಡಲಾಗಿದೆ. ಸಮರ್ಪಕ ಪಡಿತರ ವಿತರಣೆಗೆ ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು. ಮುಖ್ಯವಾಗಿ ಹಂಚಿಕೆದಾರರು ಸಮಯ ಪಾಲನೆ ಮಾಡಿ ಪಡಿತರದಾರರೊಂದಿಗೆ ಸೌಜನ್ಯದಿಂದ ವರ್ತಿಸಿ ನಡವಳಿಕೆ ಸರಿಪಡಿಸಿಕೊಳ್ಳಬೇಕು. ವಿತರಕರ ಸಭೆ ನಡೆಸಿದ್ದಕ್ಕೆ ಕೆಲವು ವಿರೋಧಿಗಳು ನಡೆಸುವ ಅಪಪ್ರಚಾರಕ್ಕೂ ಸಹ ಹೆದರುವವನು ನಾನಲ್ಲ. ಫಲಾನುಭವಿಗಳಿಗೆ ಅನ್ಯಾಯವಾದರೆ ಸಹಿಸುವುದಿಲ್ಲ. ಸರ್ಕಾರ ಜಾರಿಗೊಳಿಸಿರುವ ಮಹತ್ವದ ಅನ್ನಭಾಗ್ಯ ಗ್ಯಾರಂಟಿ ಯೋಜನೆಯ ಪ್ರಯೋಜನವನ್ನು ಜನರಿಗೆ ತಲುಪಿಸಿ ನ್ಯಾಯ ದೊರಕಿಸಿಕೊಡುವುದಷ್ಟೇ ನನ್ನ ಮುಖ್ಯ ಉದ್ದೇಶವಾಗಿದೆ ಎಂದರು.ಕ್ರಮ ಕೈಗೊಳ್ಳಿ: ಪಡಿತರ ವಿತರಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನೈಗೆರೆ ಚನ್ನಕೇಶವೇಗೌಡ ಮತನಾಡಿ, 2014ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ ಜನರ ಬಡತನ ಹಸಿವು ನೀಗಿಸಿದ್ದಾರೆ. ಯೋಜನೆಯಡಿ 8ರಿಂದ 30 ಕೆ.ಜಿ. ತನಕ ಪಡಿತರ ಅಕ್ಕಿ ವಿತರಿಸಲಾಗಿದೆ. ಪಡಿತರ ವಿತರಣೆಯಲ್ಲಿ ಕೆಲವು ಕಡೆ ಲೋಪದೋಷಗಳು ಆಗಿರುವುದು ನಿಜ, ಇನ್ನು ಮುಂದೆ ತಪ್ಪುಗಳು ಕಂಡುಬಂದರೆ ಹಂಚಿಕೆದಾರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿ ಸ್ಪಷ್ಟನೆ ನೀಡಿದರು.ಕಳಪೆ ಪಡಿತರ: ಗೋದಾಮಿನಿಂದ ಕಳಪೆ ಪಡಿತರ ವಿತರಿಸಲಾಗುತ್ತಿದೆ. ಕಲ್ಲುಮಣ್ಣು, ಧೂಳಿನಿಂದ ಕೂಡಿದ ರಾಗಿ ಸರಬರಾಜು ಮಾಡಲಾಗುತ್ತಿದೆ. ಆರ್‌ಎಂಸಿಯಲ್ಲಿ ಕೆಲವು ದಲ್ಲಾಳಿಗಳಿಂದ ಕಳಪೆ ರಾಗಿ ಖರೀದಿಸಿ ಗೋದಾಮಿಗೆ ದಾಸ್ತಾನು ಮಾಡಲಾಗಿದೆ. ಒಂದು ಚೀಲದಲ್ಲಿ 620 ಗ್ರಾಂ ಅಕ್ಕಿ ಕಡಿಮೆ ಸರಬರಾಜು ಮಾಡಲಾಗುತ್ತಿದೆ ಎಂದು ಪಡಿತರ ವಿತರಕರು ಸಭೆಗೆ ಮಾಹಿತಿ ನೀಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಶ್ರೀಧರ್ ಗೌಡ ಅವರು, ಗೋದಾಮಿಂದ ಗುಣಮಟ್ಟದ ಪಡಿತರ ನೀಡದಿದ್ದರೆ ಫಲಾನುಭವಿಗಳಿಗೆ ವಿತರಿಸದೆ ವಾಪಸ್ ಕಳುಹಿಸಬೇಕು ಎಂದರು. ಪಡಿತರ ವಿತರಣೆಗೆ ಸರ್ಕಾರ ರೂಪಿಸಿರುವ ಮಾನದಂಡಗಳು ಮತ್ತು ಹಂಚಿಕೆದಾರರಿಗೆ ಸಿಗುತ್ತಿರುವ ಸೌಲಭ್ಯಗಳು ಕುರಿತು ಸಭೆಗೆ ಮಾಹಿತಿ ನೀಡಲು ತಡಬಡಾಯಿಸಿದ ಆಹಾರ ಇಲಾಖೆ ನಿರೀಕ್ಷಕ ಮಂಜುನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು. ಮೂರು ತಿಂಗಳಿಗೊಮ್ಮೆ ನಡೆಯುವ ಸಭೆಗೆ ನ್ಯಾಯ ಬೆಲೆ ಅಂಗಡಿ ಮಾಲೀಕರು ಮತ್ತು ವಿತರಕರು ಗೈರಾದರೆ ನೊಟೀಸ್ ನೀಡಿ ನಿಯಮಾನುಸಾರ ಕ್ರಮ ಜರುಗಿಸಲಾಗಿಸುವುದು ಶತಃಸಿದ್ಧ ಎಂದು ತಾಕೀತು ಮಾಡಿದರು.
ಒಂದು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಕಾರ್ಡುಗಳಿದ್ದು, ಹಂಚಿಕೆಗೆ ತೊಂದರೆಯಾದರೆ ಸ್ತ್ರೀ ಶಕ್ತಿ ಸಂಘಕ್ಕೆ ವಹಿಸುವಂತೆ ಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದರು.ಉಗ್ರಾಣಾಧಿಕಾರಿ ಗಿರಿಯಪ್ಪ ಮಾತನಾಡಿ, ಗೋದಾಮಿನಿಂದ ಕಳುಹಿಸುವ ಒಂದು ಚೀಲದ ಪಡಿತರ ಅಕ್ಕಿಯಲ್ಲಿ ಕಡಿಮೆಯಾಗಿರುವ 580 ಗ್ರಾಂ ಅನ್ನು ವಿತರಕರಿಗೆ ಕ್ರಮಬದ್ಧವಾಗಿ ಸರಬರಾಜು ಮಾಡಲಾಗುವುದು. ಗೋದಾಮು ಬಳಿ ವೇ ಬ್ರಿಡ್ಜ್ ತೂಕದ ಯಂತ್ರ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ತಾಪಂ ಇಒ ಪ್ರಕಾಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಕೆ.ಟಿ. ಸೋಮಶೇಖರ್, ಬಿ.ಸಿ. ರಾಜೇಶ್, ಸತ್ಯರಾಜ್ ಇತರರಿದ್ದರು.