ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದಲ್ಲಿ ಪಾಲಿಕೆಯ ಮಾರ್ಗಸೂಚಿಗಳನ್ನು ಪಾಲಿಸದ ಪಿಜಿಗಳ ಮಾಲೀಕರ ವಿರುದ್ಧ ಕಾನೂನು ರೀತ್ಯ ಕ್ರಮಕೈಗೊಳ್ಳುವುದಾಗಿ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಎಚ್ಚರಿಕೆ ನೀಡಿದ್ದಾರೆ.ಬುಧವಾರ ಅವರು, ಪಿ.ಜಿ.ಮಾಲೀಕರ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟ ನಗರದ ಹೊಸಹಳ್ಳಿ ಮೆಟ್ರೋ ನಿಲ್ದಾಣ ಸಮೀಪದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಆಯೋಜಿಸಿದ್ದ ಪಿ.ಜಿ.ಮಾಲೀಕರ ಜಾಗೃತಿ ಸಮಾವೇಶ 2024 ಉದ್ಘಾಟಿಸಿ ಮಾತನಾಡಿದರು.
ಪಿಜಿಗಳಲ್ಲಿ ಭದ್ರತೆ, ಸುರಕ್ಷತೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪೇಯಿಂಗ್ ಗೆಸ್ಟ್‌ಗಳ (ಪಿಜಿ) ಪ್ರವೇಶ, ನಿರ್ಗಮನ ಮತ್ತು ಆವರಣಗಳ ಸುತ್ತಮುತ್ತಲೂ ನಡೆಯುವ ಘಟನೆಗಳನ್ನು ಚಿತ್ರೀಕರಿಸುವ ಸಿಸಿ ಟಿವಿಗಳನ್ನು ಅಳವಡಿಸಿ. ಸಿಸಿ ಟಿವಿ ವಿಡಿಯೋ ಮತ್ತು ಫೋಟೇಜ್‌ಗಳನ್ನು 90 ದಿನಗಳ ಬದಲಿಗೆ 30 ದಿನಗಳ ಬ್ಯಾಕಪ್ ಇರುವಂತೆ ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ. ಎಲ್ಲ ಪಿಜಿಗಳಲ್ಲೂ ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡಿಕೊಳ್ಳುವುದರ ಜೊತೆಗೆ ಸಿಸಿ ಕ್ಯಾಮೆರಾಗಳನ್ನು ಕೂಡ ಅಳವಡಿಸಿಕೊಂಡು ಪರಿವೀಕ್ಷಣೆ ಮಾಡಬೇಕೆಂದು ಸೂಚನೆ ನೀಡಿದರು.ವಾಸಕ್ಕೆ ಸಂಬಂಧಿತ ಕಟ್ಟಡದ ನಿಯಮಗಳ ಪ್ರಕಾರ, ಪ್ರತಿಯೊಬ್ಬ ನಿವಾಸಿಯು ತಲಾ 70 ಚದರ ಅಡಿಗಳಿಗಿಂತ ಕನಿಷ್ಠ ಜಾಗವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕಟ್ಟಡದಲ್ಲಿ ಒದಗಿಸಲಾದ ಇಲ್ಲವೇ ಲಭ್ಯವಿರುವ ಸೌಕರ್ಯಕ್ಕನುಗುಣವಾಗಿ ನಿರ್ಧಿಷ್ಟ ಸಂಖ್ಯೆಯ ನಿವಾಸಿಗಳ ವಾಸಕ್ಕೆ ಮಾತ್ರ ಪರವಾನಿಗೆ ನೀಡಲಾಗುವುದು. ಹಾಗೆಯೇ ಪಿಜಿ ನಡೆಸುವ ಕಟ್ಟಡಗಳು 21 ಮೀಟರ್‌ಗಿಂತ ಎತ್ತರವಿದ್ದರೆ ಕಡ್ಡಾಯವಾಗಿ ಅಗ್ನಿಶಾಮಕ ದಳದಿಂದ ಪರವಾನಗಿ ಪಡೆದುಕೊಳ್ಳಬೇಕು. 21 ಮೀಟರ್‌ಗಿಂತ ಕಡಿಮೆಯಿರುವ ಕಟ್ಟಡಗಳಿಗೆ ಪರವಾನಗಿ ಅವಶ್ಯಕತೆ ಇಲ್ಲ. ಮುಖ್ಯವಾಗಿ ಪಿಜಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡಿಕೊಳ್ಳಬೇಕೆಂದು ಸಲಹೆ ಸೂಚನೆ ನೀಡಿದರು.ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಮಹಾಪೌರರಾದ ಗಂಗಾಂಬಿಕಾ ಮಲ್ಲಿಕಾರ್ಜುನ್, ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್ ಉಪಸ್ಥಿತರಿದ್ದರು. ಎಚ್.ಎಸ್.ಲಕ್ಷ್ಮೀ ನಿರೂಪಿಸಿದರು.
‘ಪಿಜಿಗಳಿಗೆ ಲೈಸೆನ್ಸ್ಸರಳೀಕರಣ ಮಾಡಿ’
ಇದೇ ಸಂದರ್ಭದಲ್ಲಿ ಪಿ.ಜಿ.ಮಾಲೀಕರ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟ ಅಧ್ಯಕ್ಷ ಟಿ.ಡಿ.ಅರುಣ್‌ಕುಮಾರ್ ನೇತೃತ್ವದಲ್ಲಿ ಪಿಜಿಗಳಿಗೆ ಸರಳವಾಗಿ ಪರವಾನಗಿ ಕೊಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಅಗ್ನಿ ಸುರಕ್ಷತೆಗೆ ಸಂಬಂಧಿಸಿದಂತೆ ನಾಲ್ಕು ಅಥವಾ ಆರು ಕೇಜಿ ಸಿಲಿಂಡರ್ ಅಳವಡಿಕೆಗೆ ರಿಯಾಯಿತಿ ನೀಡಬೇಕು. ಪಿಜಿ ಕಟ್ಟಡದ 70 ಚದರ ಅಡಿ ಬದಲಾಗಿ 60 ಚದರ ಅಡಿಗೆ ಒಬ್ಬರಂತೆ ಅವಕಾಶ ಕೊಡಬೇಕು ಎಂದುಬು ಸೇರಿದಂತೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರಿಗೆ ಸಲ್ಲಿಸಲಾಯಿತು.