ಬಳ್ಳಾರಿ ಸರ್ಕಾರಿ ಆಸ್ಪತ್ರೆಗೆ ಔಷಧಿ ಪೂರೈಸಿದ ಕಂಪನಿ ವಿರುದ್ಧ ಕ್ರಮ: ದಿನೇಶ್‌ ಗುಂಡೂರಾವ್‌

| Published : Dec 07 2024, 12:30 AM IST

ಬಳ್ಳಾರಿ ಸರ್ಕಾರಿ ಆಸ್ಪತ್ರೆಗೆ ಔಷಧಿ ಪೂರೈಸಿದ ಕಂಪನಿ ವಿರುದ್ಧ ಕ್ರಮ: ದಿನೇಶ್‌ ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 327 ಮಹಿಳೆಯರು ಮೃತಪಟ್ಟಿದ್ದಾರೆ. ಮಹಿಳೆಯರ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಚಿವರು ಹೇಳಿದ್ದಾರೆ,.

ಕನ್ನಡಪ್ರಭ ವಾರ್ತೆ ಕೋಲಾರಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಔಷಧ ನಿಯಂತ್ರಣ ಇಲಾಖೆಯ ಒಬ್ಬ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ನಮ್ಮ ವ್ಯವಸ್ಥೆಯ ವೈಫಲ್ಯಗಳಿಂದ ಆಗಿರುವ ಘಟನೆ ಎನ್ನಬಹುದಾಗಿದೆ. ಈಗಾಗಲೇ ಒಬ್ಬರನ್ನು ಅಮಾನತು ಮಾಡಿ, ನೋಟಿಸ್ ಜಾರಿ ಮಾಡಲಾಗಿದೆ. ಔಷಧಿ ಪೂರೈಸಿದ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಮುಳಬಾಗಿಲು ತಾಲೂಕಿನ ನಂಗಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಮುದಾಯದ ಆರೋಗ್ಯ ಕೇಂದ್ರ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಶ್ಚಿಮ ಬಂಗಾಳದ ತಯಾರಿಕಾ ಘಟಕಕ್ಕೆ ನಮ್ಮ ಅಧಿಕಾರಿಗಳು ಭೇಟಿ ನೀಡಿದ್ದು, ಈಗಾಗಲೇ ಹಲವು ಕ್ರಮ ಜರುಗಿಸಿದ್ದೇವೆ. ವ್ಯವಸ್ಥೆ ಸರಿಪಡಿಸಲು ಪುಡ್ ಅಂಡ್ ಡ್ರಗ್ ಕಂಟ್ರೋಲ್‌ಗೆ ಐಎಎಸ್ ಅಧಿಕಾರಿ ನೇಮಿಸಲಾಗುವುದು ಎಂದು ತಿಳಿಸಿದರು.ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿರುವಂತೆ ನಾವು ಯಾವುದೇ ಔಷಧಿ ಖರೀದಿ ಮಾಡಿಲ್ಲ. ಆರ್. ಅಶೋಕ್‌ಗೆ ಔಷಧಿ ಖರೀದಿಯ ಬಗ್ಗೆ ಮಾಹಿತಿ ಇಲ್ಲದಂತಾಗಿದೆ. ರಾಜ್ಯದ ಪ್ರಯೋಗಾಲಯಗಳಲ್ಲಿ 22 ವಿವಿಧ ಮಾದರಿಯ ಔಷಧಿಗಳ ತಪಾಸಣೆ ನಡೆಸಿದಾಗ ರಾಜ್ಯದಲ್ಲಿ ಗುಣಮಟ್ಟ ಖಾತ್ರಿಯಾಗಲಿಲ್ಲ. ಆದರೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ರಯೋಗಳಲ್ಲಿ ರಾಜ್ಯದಲ್ಲಿ ಗುಣಮಟ್ಟ ಕಳೆದುಕೊಂಡಿದ್ದ ಔಷಧಿಗಳು ಗುಣಮಟ್ಟದಿಂದ ಕೂಡಿದೆ ಎಂದು ವರದಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ನೇರವಾಗಿ ಬೊಟ್ಟು ಮಾಡಿ ತೋರಿಸಿದರು.

ರಾಜ್ಯಾದ್ಯಂತ ಎಲ್ಲಾ ತಾಲೂಕು ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸುವ ಗುರಿ ಹೊಂದಿದ್ದೇವೆ. ಸುಮಾರು 32.5 ಕೋಟಿಗಳ ವೆಚ್ಚದಲ್ಲಿ ಮುಳಬಾಗಿಲು ತಾಲೂಕಿನ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ನೂತನವಾಗಿ 50 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಭಾಗದಲ್ಲಿ ಹೆರಿಗೆ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದ್ದು, ಸುಸಜ್ಜಿತ ಆಸ್ಪತ್ರೆಯ ಅಗತ್ಯವಿದೆ. ತಾಲೂಕಿನ ಜನತೆ ಇದರ ಸದುಪಯೋಗಪಡಿಸಿಕೊಳ್ಳಬೇಕು. ಆಗ ಮಾತ್ರ ಸ್ಥಳೀಯ ಶಾಸಕರ ಶ್ರಮ ಸಾರ್ಥಕತೆ ಪಡೆಯುತ್ತದೆ ಎಂದರು.

ಕೋಟ್......

ನಮ್ಮ ತಾಲೂಕು ರಾಜ್ಯದ ಗಡಿ ಭಾಗದಲ್ಲಿದ್ದು ಎಲ್ಲಾ ವಿಚಾರಗಳಲ್ಲಿ ಕಡೆಗಣಿಸಲಾಗಿದೆ. ಮುಳಬಾಗಿಲಿನಿಂದ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು ಅಪಘಾತ ಪ್ರಕರಣಗಳು ಹೆಚ್ಚು ದಾಖಲಾಗುತ್ತದೆ. ಇಲ್ಲಿ ಸುಸಜ್ಜಿತ ಆಸ್ಪತ್ರೆಯ ಅಗತ್ಯವಿದೆ. ಮಾನ್ಯ ಸಚಿವರು ಹಾಗೂ ಮಾನ್ಯ ಮುಖ್ಯಮಂತ್ರಿಗಳು ಶಾಸಕರ ಮನವಿಗೆ ಓಗೊಟ್ಟು ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. -ಸಮೃದ್ದಿ ಮಂಜುನಾಥ್, ಮುಳಬಾಗಿಲು ಶಾಸಕ.

ಬಾಕ್ಸ್.......

ಸಾವಿನ ತನಿಖೆಗಾಗಿ ಸಮಿತಿ ರಚನೆ

ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 327 ಮಹಿಳೆಯರು ಮೃತಪಟ್ಟಿದ್ದಾರೆ. ಮಹಿಳೆಯರ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಮಹಿಳೆಯರ ಸಾವಿನ ತನಿಖೆಗಾಗಿ ಆರೋಗ್ಯ ಇಲಾಖೆಯ ಸಮಿತಿ ರಚನೆ ಮಾಡುತ್ತೇವೆ. ನಿಷೇಧಿಸಿರುವ ಔಷಧಿಗಳನ್ನು ಖರೀದಿ ಮಾಡಲಾಗಿದೆ ಎಂಬ ಪ್ರತಿಪಕ್ಷದ ನಾಯಕ ಆರ್.ಆಶೊಕ್ ಅವರ ಹೇಳಿಕೆ ಗುಂಡೂರಾವ್ ನಿರಾಕರಿಸಿದ್ದಾರೆ.