ಸಾರಾಂಶ
ಹಗರಿಬೊಮ್ಮನಹಳ್ಳಿ: ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಪಟ್ಟಣದ ತಾಪಂ ಮಹಾತ್ಮಗಾಂಧಿ ಸಭಾಂಗಣದಲ್ಲಿ ನಡೆಯಿತು.
ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಮಾತನಾಡಿ, ವಿದ್ಯುತ್‌ನ್ನು ಅಕ್ರಮವಾಗಿ ಉಪಯೋಗಿಸುವ ಫಲಾನುಭವಿಗಳಿಗೆ, ಸರ್ಕಾರ ಉಚಿತ ವಿದ್ಯುತ್ ಪೂರೈಕೆಯ ಮಾಹಿತಿ ಒದಗಿಸಿ ಸಕ್ರಮಗೊಳಿಸಬೇಕು. ಶಕ್ತಿ ಯೋಜನೆಯಿಂದ ಕೆಎಸ್‌ಆರ್‌ಟಿಸಿ ಅತ್ಯಧಿಕ ಲಾಭವನ್ನು ಗಳಿಸಿದೆ. ಚಾಲಕರು ಮತ್ತು ನಿರ್ವಾಹಕರು ಖುಷಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇಲಾಖೆಯ ನೌಕರರು ವೇತನವನ್ನು ತಿಂಗಳ ಅಂತ್ಯದೊಳಗೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಡಿಪೋ ವ್ಯವಸ್ಥಾಪಕ ನೀಲಪ್ಪ ತಿಳಿಸಿದರು. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಗರಿಬೊಮ್ಮನಹಳ್ಳಿ ಡಿಪೋಗೆ ೧೦ ನೂತನ ಬಸ್‌ಗಳನ್ನು ಒದಗಿಸಬೇಕು ಎಂದು ವ್ಯವಸ್ಥಾಪಕರು ಒತ್ತಾಯಿಸಿದರು.ಅನ್ನಭಾಗ್ಯ ಯೋಜನೆ ತಾಲೂಕಿನಲ್ಲಿ ಸರಿಯಾಗಿ ನಡೆಯುತ್ತಿದೆ ಎಂದು ಆಹಾರ ಸರಬರಾಜು ನಿರೀಕ್ಷಕ ವೀರೇಶ್ ತಿಳಿಸಿದಾಗ, ಗ್ಯಾರಂಟಿ ಪ್ರಾಧಿಕಾರ ಜಿಲ್ಲಾಧ್ಯಕ್ಷ ಶಿವಮೂರ್ತಿ ಇಲಾಖೆಯ ಅನೇಕ ಲೋಪದೋಷಗಳನ್ನು ಬಿಚ್ಚಿಟ್ಟರು. ನ್ಯಾಯಬೆಲೆ ಅಂಗಡಿಯವರು ಅಕ್ಕಿ ನೀಡದೆ, ಮೊದಲಿಗೆ ಹೆಬ್ಬಟ್ಟು ಗುರಿತು ತೆಗೆದುಕೊಳ್ಳುವುದರಿಂದ ಅಕ್ಕಿ ವಿತರಣೆಯಲ್ಲಿ ಸಮಸ್ಯೆಯುಂಟಾಗಿ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಅನ್ನಬಾಗ್ಯದ ಅಕ್ಕಿಯನ್ನು ಫಲಾನುಭವಿಗಳಿಗೆ ತಿಂಗಳಪೂರ್ತಿ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಫಲಾನುಭವಿಗಳು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಬೇಕು ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯ ಪರುಶುರಾಮ ಒತ್ತಾಯಿಸಿದರು.
ಸರ್ಕಾರ ಉಚಿತ ಅಕ್ಕಿ ನೀಡುವುದೆಂದು ತೂಕದಲ್ಲಿ ವ್ಯತ್ಯಾಸ ಮತ್ತು ಫಲಾನುಭವಿಗಳನ್ನು ಅಸಡ್ಡೆಯಿಂದ ಕಾಣುವುದು ಸಮಂಜಸವಲ್ಲ. ಇಂತಹ ದೂರುಗಳು ಬಂದರೆ ಕೂಡಲೇ ಆಹಾರ ಇಲಾಖೆಯವರು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಕ್ರಮ ವಹಿಸಿ ಎಂದು ತಾಕೀತು ಮಾಡಿದರು.ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಲು, ಬಹಿರಂಗವಾಗಿ ವಾಹನಗಳಲ್ಲಿ ತೂಕದ ಮಾಪನಗಳನ್ನು ಹಿಡಿದುಕೊಂಡು ತಿರುಗುವವರ ವಿರುದ್ದ ಕಾನೂನು ಕ್ರಮಕೈಗೊಳ್ಳಿ ಎಂದು ಸದಸ್ಯ ಪರುಶುರಾಮ ಆಹಾರ ನಿರೀಕ್ಷಕರನ್ನು ಒತ್ತಾಯಿಸಿದರು.
ಹೊಸ ಪಡಿತರ ಮಾಡಲು ಸರಕಾರ ಉಚಿತವಾಗಿ ಅವಕಾಶ ನೀಡಿದರೂ ಸಹ, ಗ್ರಾಮೀಣ ಪ್ರದೇಶದಲ್ಲಿ ಮಧ್ಯವರ್ತಿಗಳು ಒಂದು ರೇಷನ್ ಕಾರ್ಡ್ ಮಾಡಲು ೨ಸಾವಿರರೂದಿಂದ ೪ಸಾವಿರರೂ ತೆಗೆದುಕೊಳ್ಳುತ್ತಾರೆ ಎಂದು ದೂರಿದರು. ಅಕ್ಕಿ ತೂಕದಲ್ಲಿ ಕೆಲ ನ್ಯಾಯಬೆಲೆ ಅಂಗಡಿಯವರು ವ್ಯತ್ಯಾಸ ಮಾಡುತ್ತಿರುವ ದೂರುಗಳಿವೆ ಇಲಾಖೆಯವರು ನ್ಯಾಯಬೆಲೆ ಅಂಗಡಿಗಳಿಗೆ ಬೇಟಿನೀಡಿ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಲು ಗ್ರಾಪಂಗಳ ಸಹಕಾರ ಪಡೆಯಿರಿ ಎಂದು ಇಒ ಜಿ.ಪರಮೇಶ್ವರಪ್ಪ ತಿಳಿಸಿದರು.ಶಕ್ತಿ ಯೋಜನೆಯಡಿ ಮಕ್ಕಳ ಶಾಲಾ ಕಾಲೇಜು ಸಮಯಕ್ಕೆ ಹೆಚ್ಚುವರಿ ಬಸ್ ಸೌಲಭ್ಯ ಸೇವೆ ಕಲ್ಪಿಸಿ. ಶಕ್ತಿ ಯೋಜನೆಯಡಿ ಓಡಾಡುವರಿಗೆ ಇಲಾಖೆಯವರು ಕಿರಿಕಿರಿ ಮಾಡುತ್ತಾರೆ ಎಂಬುವ ದೂರುಗಳಿವೆ. ಇಲಾಖೆಯವರು ಪ್ರಯಾಣಿಕರ ಬಗ್ಗೆ ಅಸಡ್ಡೆ ತೋರದೆ ಮಾನವೀಯತೆ ರೂಡಿಸಿಕೊಳ್ಳಿ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಗುರುಬಸವರಾಜ ಸೊನ್ನದ ವ್ಯವಸ್ಥಾಪಕರಿಗೆ ತಿಳಿಸಿದರು. ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆ ನಡೆಸಿ, ಅನ್ನಭಾಗ್ಯ ಯೋಜನೆಯಲ್ಲಿ ಲೋಪದೋಷಗಳಾಗದಂತೆ ನಿರ್ವಹಿಸೋಣ ಎಂದು ಸದಸ್ಯ ದೇವರಾಜ ಪೋತಲಕಟ್ಟಿ ತಿಳಿಸಿದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಐದು ಗ್ಯಾರಂಟಿ ಯೋಜನೆಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅರ್ಹರಿಗೆ ತಲುಪಿಸಿ ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಿ. ಗೃಹಲಕ್ಷ್ಮೀ ಯೋಜನೆಯ ಮೊತ್ತವನ್ನು ಬ್ಯಾಂಕ್‌ನವರು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಬ್ಯಾಂಕ್‌ನವರಿಗೆ ನೋಟಿಸ್ ಮೂಲಕ ತಿಳಿಸಿ ಎಂದು ಸಿಡಿಪಿಒಗೆ ಅಧ್ಯಕ್ಷರು ತಿಳಿಸಿದರು.ಈ ಸಂದರ್ಭದಲ್ಲಿ ಸಿಡಿಪಿಒ ಬೋರೆಗೌಡ, ಜೆಸ್ಕಾಂ ಅಧಿಕಾರಿಗಳಾದ ರಾಘವೇಂದ್ರ, ಜಗದೀಶ್, ತಾಪಂ ವ್ಯವಸ್ಥಾಪಕ ಗುರುಬಸವರಾಜ, ಮಹಾಂತೇಶ್, ಲಕ್ಷ್ಮೀ, ಕೊಟ್ರೇಶ ಇದ್ದರು.
ಹಗರಿಬೊಮ್ಮನಹಳ್ಳಿ ಪಟ್ಟಣದ ತಾಪಂ ಮಹಾತ್ಮಗಾಂಧಿ ಸಭಾಂಗಣದಲ್ಲಿ ಐದು ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.