ಅಕ್ರಮವಾಗಿ ನೀರು ಪಡೆದವರ ವಿರುದ್ಧ ಕ್ರಮ: ರಾಮಚಂದ್ರ

| Published : Feb 03 2024, 01:47 AM IST

ಸಾರಾಂಶ

ತಾಲೂಕಿನ ಮದಗದಕೆರೆಯಿಂದ ಚಿಕ್ಕಂಗಳ ಕೆರೆಗೆ ಬರುವ ನೀರಿಗೆ ಅಕ್ರಮವಾಗಿ ಮಡಬಾಯಿಗಳನ್ನು ತೆರೆದು ಮೋಟಾರ್ ಮತ್ತು ಪೈಪ್‍ಗಳನ್ನು ಆಳವಡಿಸಿ ಕೊಂಡವರ ವಿರುದ್ಧ ನೀರಾವರಿ ಇಲಾಖೆಯಿಂದ ಕಾನೂನಿನಂತೆ ಕ್ರಮ ಕೈಗೊಳ್ಳ ಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಹಾಸನ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಟಿ.ಎನ್.ರಾಮಚಂದ್ರ ಹೇಳಿದರು.

ಚಿಕ್ಕಂಗಳ ಸುತ್ತಲ ಗ್ರಾಮಗಳ ರೈತರು, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗಳ ಸಭೆಯಲ್ಲಿ ಭರವಸೆ

ಕನ್ನಡಪ್ರಭ ವಾರ್ತೆ, ಕಡೂರು

ತಾಲೂಕಿನ ಮದಗದಕೆರೆಯಿಂದ ಚಿಕ್ಕಂಗಳ ಕೆರೆಗೆ ಬರುವ ನೀರಿಗೆ ಅಕ್ರಮವಾಗಿ ಮಡಬಾಯಿಗಳನ್ನು ತೆರೆದು ಮೋಟಾರ್ ಮತ್ತು ಪೈಪ್‍ಗಳನ್ನು ಆಳವಡಿಸಿ ಕೊಂಡವರ ವಿರುದ್ಧ ನೀರಾವರಿ ಇಲಾಖೆಯಿಂದ ಕಾನೂನಿನಂತೆ ಕ್ರಮ ಕೈಗೊಳ್ಳ ಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಹಾಸನ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಟಿ.ಎನ್.ರಾಮಚಂದ್ರ ಹೇಳಿದರು.

ಶುಕ್ರವಾರ ತಾಲೂಕು ಕಚೇರಿಯಲ್ಲಿ ಚಿಕ್ಕಂಗಳ ಮತ್ತು ಸುತ್ತಲ ಗ್ರಾಮಗಳ ರೈತರು ಮತ್ತು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗಳ ಸಭೆಯಲ್ಲಿ ಕಾನೂನು ಕ್ರಮದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಈಗಾಗಲೇ ಬೇಸಿಗೆ ಆರಂಭ ವಾಗಿದ್ದು ಚಿಕ್ಕಂಗಳ ಕೆರೆಗೆ ನೀರು ಹರಿಯದಂತೆ ಮದಗಕೆರೆ ಕಾಲುವೆಗಳಲ್ಲಿ ಅನಧಿಕೃತ ಮೋಟಾರ್ ಗಳನ್ನು ಅಳವಡಿಸಿಕೊಂಡು ನೀರು ಹಾಯಿಸಿಕೊಳ್ಳುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ಪ್ರತಿಭಟಿಸಿ ಇಂಜಿನಿಯರ್ ಸ್ಥಳಕ್ಕೆ ಬರಬೇಕೆಂದು ಗುರುವಾರ ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ಆಗ್ರಹಿಸಿದ್ದರು. ಈ ನಿಟ್ಟಲ್ಲಿ ಶುಕ್ರವಾರ ಕಚೇರಿಯಲ್ಲಿ ವಾಗ್ವಾದಕ್ಕೆ ಆಸ್ಪದ ನೀಡದಂತೆ ತಹಸೀಲ್ದಾರ್ ಎಂ.ಪಿ.ಕವಿರಾಜ್ ನೀರಾವರಿ ಇಲಾಖೆ ಇಂಜಿನಿಯರ್ ಮತ್ತು ರೈತರ ನಡುವೆ ಸಂಧಾನ ನಡೆಸಿ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಯಶಸ್ವಿಯಾದರು.

ಇದೇ ಸಂದರ್ಭದಲ್ಲಿ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ ರೈತರೊಂದಿಗೆ ಮಾತನಾಡಿ ಕಾಲುವೆಗೆ ಅನಧಿಕೃತ ವಾಗಿ 15-20ಕ್ಕೂ ಹೆಚ್ಚಿನ ರೈತರು ಅಕ್ರಮವಾಗಿ ಮಡಬಾಯಿ ತೆರೆದು ಪೈಪ್ ಆಳವಡಿಸಿಕೊಂಡು ನೀರು ಹಾಯಿಸಿ ಕೊಳ್ಳುತ್ತಿರುವುದು ಇಲಾಖೆ ಗಮನಕ್ಕೆ ಬಂದಿದೆ. ಅಕ್ರಮ ಪೈಪ್, ಮೋಟರ್‌ ಗಳನ್ನು ತೆರವುಗೊಳಿಸಿ ಅವರಿಗೆ ಎಚ್ಚರಿಕೆ ನೀಡಲಾಗಿದೆ. ತೆರೆದಿದ್ದ ಮಡಬಾಯಿ ಪೈಪ್‍ಗಳ ಎರಡು ಬದಿಗೂ ಕಾಂಕ್ರೀಟ್‍ನಿಂದ ಮುಚ್ಚಲಾಗಿದೆ. ಮುಂದೆಯೂ ಇದೇ ರೀತಿ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಇಲಾಖೆ ಮುಂದಾಗುತ್ತದೆ ಎಂದು ರೈತರಿಗೆ ಮನವರಿಕೆ ಮಾಡಿದ್ದರ ಹಿನ್ನೆಲೆ ಯಲ್ಲಿ ರೈತರು ಇಂಜಿನಿಯರ್ ಮಾತಿಗೆ ಒಪ್ಪಿಗೆ ಸೂಚಿಸಿ ಪ್ರತಿಭಟನೆ ಹಿಂಪಡೆದರು.

ಸಭೆಯಲ್ಲಿ ಎಇಇ ದಯಾಶಂಕರ್, ಜೆ.ಇ. ಮಂಜುನಾಥ್, ಕೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಗುನಪ್ಪ, ತಾಲ್ಲೂಕು ಮಾದಿಗ ಸಮಾಜದ ಅಧ್ಯಕ್ಷ ಚಿಕ್ಕಂಗಳ ಲಕ್ಷ್ಮಣ್, ಅಂದೇನಹಳ್ಳಿ ಮಹದೇವಪ್ಪ, ಅಂದೇನಹಳ್ಳಿ ಚಂದ್ರಶೇಖರ್, ನವೀನ್,ಗುರುಮೂರ್ತಿ,ಮಹೇಶ್,ಪ್ರಕಾಶ್,ಆನಂದ್ ಮತ್ತು ವಿವಿಧ ಗ್ರಾಮಗಳ ರೈತರು ಗ್ರಾಮಸ್ಥರು ಇದ್ದರು.

2ಕೆಕೆಡಿಯು1.

ಕಡೂರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಎಂ.ಪಿ.ಕವಿರಾಜ್ ಅಧ್ಯಕ್ಷತೆಯಲ್ಲಿ ಮದಗದಕೆರೆಯಿಂದ ನೀರು ಹರಿಸುವ ಕುರಿತು ಚಿಕ್ಕಂಗಳ ರೈತರ ಮತ್ತು ಇಂಜಿನಿಯರ್ ಗಳ ಸಭೆ ನಡೆಯಿತು.