ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ವಿರುದ್ಧ ಕ್ರಮಕ್ಕೆ ಕೇಳಿಬಂದ ಒತ್ತಾಯಕ್ಕೆ ಇದೀಗ ಪಕ್ಷದ ಕೆಲವು ಹಿರಿಯ ಶಾಸಕರು, ಮಾಜಿ ಶಾಸಕರು ಮತ್ತು ಪಕ್ಷದ 32 ಸಂಘಟನಾ ಜಿಲ್ಲೆಗಳ ಅಧ್ಯಕ್ಷರೂ ಧ್ವನಿಗೂಡಿಸಿದ್ದಾರೆ. ಪಕ್ಷದ ನಾಯಕರ ವಿರುದ್ಧವೇ ಹೇಳಿಕೆ ನೀಡುತ್ತಿರುವ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಅವರೆಲ್ಲಾ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ಒತ್ತಾಯಿಸಿದ್ದಾರೆ.ಮಂಗಳವಾರ ಇಲ್ಲಿ ಆಯೋಜಿಸಿದ್ದ ಪಕ್ಷದ ‘ಸಂಘಟನಾ ಪರ್ವ’ ಕುರಿತ ಸರಣಿ ಸಭೆಗಳಲ್ಲಿ ಪಾಲ್ಗೊಳ್ಳುವ ಸಂಬಂಧ ಆಗಮಿಸಿದ್ದ ತರುಣ್ ಚುಗ್ ಅವರಿಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು, ಮುಖಂಡರು ಹಾಗೂ ಜಿಲ್ಲಾಧ್ಯಕ್ಷರು ಯತ್ನಾಳ್ ಅವರ ನಡೆಯನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ ಪಕ್ಷದ 32 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಸಹಿ ಒಳಗೊಂಡ ಮನವಿ ಪತ್ರವನ್ನೂ ತರುಣ್ ಅವರಿಗೆ ಸಲ್ಲಿಸಲಾಗಿದೆ. ಇದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಲ್ಲಿಸುವುದಾಗಿ ಅವರು ಭರವಸೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಯತ್ನಾಳ್ ಬಗ್ಗೆ ಕಿಡಿ:
‘ಸಂಘಟನಾ ಪರ್ವ’ ಸಭೆಯಲ್ಲಿ ಪಕ್ಷದ ಸಂಘಟನೆ ಬಗ್ಗೆ ತರುಣ್ ಅವರು ತಮ್ಮ ಮಾತು ಮುಗಿಸಿ ಇನ್ನೇನಾದರೂ ಇದ್ದರೆ ಹೇಳಿ ಎಂದು ಔಪಚಾರಿಕವಾಗಿ ಹೇಳಿದಾಗ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಸೇರಿ ಹಲವು ಮುಖಂಡರು ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದರು.ಶಿಸ್ತಿನ ಪಕ್ಷ ಎಂದು ಹೆಸರಾಗಿದ್ದ ಬಿಜೆಪಿಯಲ್ಲಿ ಈಗ ಅಶಿಸ್ತು ತಾಂಡವವಾಡುತ್ತಿದೆ. ಬಸನಗೌಡ ಪಾಟೀಲ ಯತ್ನಾಳ್ ಸೇರಿ ಕೆಲವರು ಬೀದಿಯಲ್ಲಿ ನಿಂತು ಬಾಯಿಗೆ ಬಂದಂತೆ ನಮ್ಮ ಪಕ್ಷ ಮತ್ತು ನಾಯಕರನ್ನು ಬಯ್ಯುತ್ತಿದ್ದಾರೆ. ಅವರ ಅಸಮಾಧಾನ ಏನೇ ಇದ್ದರೂ ಅದನ್ನು ಪಕ್ಷದ ವೇದಿಕೆಗಳಲ್ಲಿ ಪ್ರಸ್ತಾಪಿಸಬೇಕು. ನಾವು ಪಕ್ಷ ಸಂಘಟನೆಗಾಗಿ ಬೂತ್ ಮಟ್ಟದಲ್ಲಿ ಹೋದಾಗ ಕಾರ್ಯಕರ್ತರು ಮತ್ತು ಜನ ಇತ್ತೀಚಿನ ಭಿನ್ನಾಭಿಪ್ರಾಯಗಳ ಬಗ್ಗೆ ಕೇಳುತ್ತಿದ್ದಾರೆ. ನಮಗೆ ಮುಜುಗರವಾಗುತ್ತಿದೆ. ಇದನ್ನು ಸರಿ ಮಾಡಿ. ಇಲ್ಲವೇ ಅಂಥವರ ವಿರುದ್ಧ ಕ್ರಮ ಜರುಗಿಸಿ ಎಂದು ಹಲವರು ಒತ್ತಾಯಿಸಿದರು ಎಂದು ತಿಳಿದು ಬಂದಿದೆ.ಇದಕ್ಕೆ ಪ್ರತಿಕ್ರಿಯಿಸಿದ ತರುಣ್, ನಾನು ಸಂಘಟನೆ ವಿಷಯಕ್ಕೆ ಸಂಬಂಧಿಸಿ ಚರ್ಚೆ ನಡೆಸಲು ಆಗಮಿಸಿದ್ದೇನೆ. ನಿಮ್ಮ ಅಭಿಪ್ರಾಯವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ತಲುಪಿಸುತ್ತೇನೆ ಎಂದು ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಸಭೆ ಬಳಿಕ ಪಕ್ಷದ ಪ್ರಸಕ್ತ ಬೆಳವಣಿಗೆಗಳ ಕುರಿತು 32 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಸಹಿ ಒಳಗೊಂಡ ಪತ್ರ ನೀಡಲು ಕೆಲ ಜಿಲ್ಲಾಧ್ಯಕ್ಷರು ತೆರಳಿದಾಗ, ತರುಣ್ ಅವರು ಆ ಪತ್ರ ಸ್ವೀಕರಿಸಲು ಆರಂಭದಲ್ಲಿ ಹಿಂದೇಟು ಹಾಕಿದರು. ಕೊನೆಗೆ ಒತ್ತಾಯ ಮಾಡಿದ ಬಳಿಕ ಸ್ವೀಕರಿಸಿ ವರಿಷ್ಠರ ಗಮನಕ್ಕೆ ತಲುಪಿಸುವೆ ಎಂದು ಹೇಳಿದರು ಎನ್ನಲಾಗಿದೆ.==
ಡಿ.7ಕ್ಕೆ ಉಸ್ತುವಾರಿರಾಧಾಮೋಹನ್ ಭೇಟಿಬಿಜೆಪಿ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸದಸ್ಯರ ಸಭೆಯಲ್ಲೂ ಯತ್ನಾಳ ಅವರ ಕುರಿತ ವಿಷಯ ಪ್ರಸ್ತಾಪವಾಯಿತು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಯತ್ನಾಳ ಅವರ ವಿಷಯ ಪ್ರಸ್ತಾಪಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಆಗ ತರುಣ್ ಅವರು ಇದೇ ತಿಂಗಳ 7ರಂದು ಪಕ್ಷದ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್‌ವಾಲ್ ಅವರು ಬೆಂಗಳೂರಿಗೆ ಆಗಮಿಸಿ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ಆಗ ಈ ಬಗ್ಗೆ ಚರ್ಚಿಸಿ ಎಂದು ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.