ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕಾನೂನಿನಡಿ ಶಿಕ್ಷಿಸುವ ಕೆಲಸವಾಗಬೇಕೆಂದು ಶಾಸಕ ಸಿ.ಎನ್. ಬಾಲಕೃಷ್ಣ ಆಗ್ರಹಿಸಿದರು.ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಚನ್ನರಾಯಪಟ್ಟಣ ಯೋಜನಾ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ ಸುಜ್ಞಾನ ನಿಧಿ ಶಿಷ್ಯವೇತನದ ಮಂಜೂರಾತಿ ಪತ್ರ ವಿತರಣೆ ಮತ್ತು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಧರ್ಮಸ್ಥಳ, ಡಾ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬದವರ ಹೆಸರಿಗೆ ಕಳಂಕ ತರುವ ಹಾಗೂ ಕೋಟ್ಯಂತರ ಭಕ್ತರ ಭಾವನೆಗೆ ಧಕ್ಕೆ ತರುವ ಕಾರ್ಯ ಮಾಡುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಕಲಾಪದ ವೇಳೆ ಧ್ವನಿಯೆತ್ತಿದ್ದು, ಹಿಂದೂಗಳ ಪವಿತ್ರ ಕ್ಷೇತ್ರವಾಗಿರುವ ಶ್ರೀ ಧರ್ಮಸ್ಥಳ ಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ಹಿಂದೂ ವಿರೋಧಿಗಳು ಪಿತೂರಿ ನಡೆಸುತ್ತಿವೆ.
ರಾಜ್ಯ ಸರ್ಕಾರವು ಕೂಡಲೇ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಎಸ್‌ಐಟಿ ಅಧಿಕಾರಿಗಳು ಗುಂಡಿ ಅಗೆಯುವ ಕೆಲಸ ಬಿಟ್ಟು ಪಡ್ಯಂತ್ರಕ್ಕೆ ಕಾರಣರಾಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಈ ಮೂಲಕ ಶ್ರೀ ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಬೇಕು. ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಅನಾಮಿಕನ ಮಾತು ಕೇಳಿ ಕಂಡಕಂಡಲ್ಲಿ ಅಗೆದು ಶ್ರೀ ಧರ್ಮಸ್ಥಳ ಕ್ಷೇತ್ರವನ್ನು ಮಲಿನ ಮಾಡಲು ಪ್ರಯತ್ನಿಸಲಾಗುತ್ತಿದೆ. ಇದು ಸುಳ್ಳು ಎಂದು ಸಾಬೀತಾಗಿದೆ. ಹಾಗಾಗಿ ಅನಾಮಿಕ ದೂರುದಾರ ಮತ್ತು ಆತನ ಹಿಂದೆ ಇರುವವರಿಗೆ ಯಾರಿಂದ ಧನ ಸಹಾಯವಾಗುತ್ತಿದೆ ಹಾಗೂ ಸುಳ್ಳು ಆರೋಪ ಮಾಡಲು ಅವರಿಗೆ ಪ್ರಚೋದನೆ ಮಾಡುತ್ತಿರುವ ಕಿಡಿಗೇಡಿಗಳು ಹಾಗೂ ಯೂಟ್ಯೂಬರ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿದೆ. ಸರ್ಕಾರ ನಿರ್ವಹಿಸಬೇಕಾದ ಕೆಲಸಕ್ಕಿಂತ ಹೆಚ್ಚಿನ ಕಾರ್ಯಕ್ರಮಗಳನ್ನು ಯೋಜನೆಯಿಂದ ಹಮ್ಮಿಕೊಳ್ಳುತ್ತಿರುವುದರಿಂದ ಸಾರ್ವಜನಿಕರು ಹೆಚ್ಚು ಸವಲತ್ತುಗಳನ್ನು ಪಡೆದು ಸಬಲರಾಗುತ್ತಿದ್ದಾರೆ. ಮಹಿಳೆಯರನ್ನು ಜಾಗೃತಿಗೊಳಿಸಿ ಆರ್ಥಿಕ ಪ್ರಜ್ಞಾವಂತಿಕೆಯನ್ನು ಬೆಳೆಸುವ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ, ಸಮಾಜ ಮತ್ತು ಕುಟುಂಬ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ.
ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವೆಂದು ನಂಬಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೆನ್ನೆಲುಬಾಗಿ ನಿಂತಿದೆ. ಸದಸ್ಯರಿಗೆ ಆರ್ಥಿಕ ಸಹಕಾರ ನೀಡುವುದರ ಜೊತೆಗೆ ವ್ಯವಹಾರದ ಶಿಸ್ತು, ಸಂಸಾರ ನಿರ್ವಹಣೆ ಹಾಗೂ ಸಂಸ್ಕಾರಯುತ ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತಿರುವ ಸಂಸ್ಥೆಯಲ್ಲಿ ಗ್ರಾಮಾಭ್ಯುದಯ, ಆರ್ಥಿಕ ಸಬಲತೆ, ಕೃಷಿ, ಸಾಮಾಜಿಕ ಕ್ಷೇತ್ರ, ಜನರ ಜೀವನಮಟ್ಟ ಸುಧಾರಣೆ ಸೇರಿದಂತೆ ಹಲವು ಸಮಾಜಮುಖ ಚಿಂತನೆಗಳೊಂದಿಗೆ ಹಲವಾರು ಕಾರ್ಯಕ್ರಮಗಳು ಸಮಾಜದ ದುರ್ಬಲ ವರ್ಗದವರಿಗೆ ಆಶಾಕಿರಣವಾಗಿದೆ. ರಾಜ್ಯದಲ್ಲಿ ೨೫ ಲಕ್ಷ ರು. ವಿದ್ಯಾರ್ಥಿಗಳಿಗೆ ಇದುವರೆಗೆ ಒಟ್ಟು ೧೫೦ ಕೋಟಿ ಮೊತ್ತದ ತನ್ನ ವೇತನ ವಿನಿಯೋಗವಾಗಿದೆ. ತಾಲೂಕಿನಲ್ಲಿ ೨೩೧ ವಿದ್ಯಾರ್ಥಿಗಳಿಗೆ ಶಿಷ್ಯ ವೇತನದ ದೊರೆಕಿದೆ. ಉತ್ತಮ ಶಿಕ್ಷಣ ಪಡೆದರೆ ಸಮಾಜದ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯ ಆರ್ಥಿಕ ಸಮಸ್ಯೆ ಇತರೆ ಕಾರಣಗಳಿಗೆ ಸಂಸ್ಥೆ ವತಿಯಿಂದ ಯೋಜನೆಯ ಪಾಲುದಾರ ಕುಟುಂಬದ ಮಕ್ಕಳ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ಅನುಕೂಲವಾಗುವಂತೆ ಸುಜ್ಞಾನನಿಧಿ ಶಿಷ್ಯವೇತನ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಸೌಲಭ್ಯದ ಸದುಪಯೋಗ ಪಡೆದು ನೌಕರಿ ಪಡೆದು, ನಂತರದಲ್ಲಿ ತಮ್ಮಂತೆ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಡಿವೈಎಸ್ಪಿ ಎನ್. ಕುಮಾರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಪ್ರಸ್ತುತ ವರ್ಷ ಸುಜ್ಞಾನ ನಿಧಿ ಮಂಜೂರಾಗಿದ್ದ ೧೧೦ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ನಿರ್ದೇಶಕ ಯೋಗೀಶ್, ಜನಜಾಗೃತಿ ಸಮಿತಿಯ ಸದಸ್ಯರಾದ ಸಿ.ಎನ್.ಅಶೋಕ್, ಮನೋಹರ್ ಉಮೇಶ್, ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.