ಸಾರಾಂಶ
ಆನೂರ ಗ್ರಾಮದಲ್ಲಿನ ಕೊಳವೆ ಬಾವಿ, ತೆರೆದ ಬಾವಿಗಳನ್ನು ವಿಕ್ಷಣೆ ಮಾಡಿ ಮಾತನಾಡಿದ ಅವರು, ಅನೇಕ ಕಡೆಗಳಲ್ಲಿ ನೀರಿಲ್ಲದೆ ಖಾಸಗಿಯವರಿಂದ ನೀರು ಖರೀದಿ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ತಾಲೂಕಿನ ಆನೂರ ಗ್ರಾಮದಲ್ಲಿ ಅಂತರ್ಜಲ ಮಟ್ಟ ಸರಿಯಾಗಿದ್ದರೂ ಕೂಡ ಗ್ರಾಮ ಪಂಚಾಯಿತಿಯ ನೀರು ನಿರ್ವಹಣೆ ಮಾಡುವವರು ಸರಿಯಾಗಿ ಸರಬರಾಜು ಮಾಡದ್ದರಿಂದ ಗ್ರಾಮಸ್ಥರಿಗೆ ಸಮಸ್ಯೆ ಆಗುತ್ತಿರುವುದನ್ನು ತಿಳಿದು ಗ್ರಾಮಕ್ಕೆ ಆಗಮಿಸಿದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಬಾಬುರಾವ್ ಜ್ಯೋತಿ ಆನೂರ ಗ್ರಾಮಕ್ಕೆ ಸಮರ್ಪಕ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಆನೂರ ಗ್ರಾಮದಲ್ಲಿನ ಕೊಳವೆ ಬಾವಿ, ತೆರೆದ ಬಾವಿಗಳನ್ನು ವಿಕ್ಷಣೆ ಮಾಡಿ ಮಾತನಾಡಿದ ಅವರು, ಅನೇಕ ಕಡೆಗಳಲ್ಲಿ ನೀರಿಲ್ಲದೆ ಖಾಸಗಿಯವರಿಂದ ನೀರು ಖರೀದಿ ಮಾಡಲಾಗಿದೆ, ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಇಂತಹ ಕಷ್ಟದ ದಿನಗಳಲ್ಲಿ ಆನೂರ ಗ್ರಾಮದಲ್ಲಿ ನೀರಿನ ಲಭ್ಯತೆ ಬಹಳ ಉತ್ತಮವಾಗಿದೆ. ಆದರೆ ಸರಬರಾಜು ಮಾಡುವವರು ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡದೇ ಇರುವುದರಿಂದ ಗ್ರಾಮಸ್ಥರು ನೀರಿನ ಸಮಸ್ಯೆ ಎದುರಿಸುವಂತಾಗಿದ್ದು ಸರಿಯಾದ ಬೆಳವಣಿಗೆಯಲ್ಲ. ಕೂಡಲೇ ನಿಮ್ಮ ಧೋರಣೆಯನ್ನು ಬದಲಿಸಿಕೊಂಡು ಊರಿನ ಜನರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕು. ಕುಂಟು ನೆಪಗಳನ್ನು ಹೇಳಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಶ್ರೀಶೈಲ್ ಕಲಶೆಟ್ಟಿ ಇದ್ದರು.