ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯಲ್ಲಿ ಗುರುವಾರ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದ ಅಧ್ಯಕ್ಷೆ ಜಾನಕಿ ಕೆ.ಎಂ. ತಿಳಿಸಿದ್ದಾರೆ.ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ವರದಿ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದು, ವರದಿ ಆಧಾರದ ಮೇಲೆ ಸೂಕ್ತ ಪರಿಹಾರ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮದ 17 ವರ್ಷದ ಕವಿತಾ ಬಸಪ್ಪ ಹರಳಿ ಸಿಡಿಲು ಬಡಿದು ಮಹಾಲಿಂಗಪುರದ ಕನಕರೆಡ್ಡಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಚಿಕಿತ್ಸೆ ಕೊಡಿಸಲು ರಬಕವಿ-ಬನಹಟ್ಟಿ ತಹಸೀಲ್ದಾರಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಾಗಲಕೋಟೆ ತಾಲೂಕಿನ ಹಿರೇಶೆಲ್ಲಿಕೇರಿ ಗ್ರಾಮದಲ್ಲಿ 2 ಎಮ್ಮೆಗಳು ಸಿಡಿಲಿಗೆ ಮೃತಪಟ್ಟಿದ್ದು, ತಲಾ ₹ 37500 ಪರಿಹಾರ ಕೂಡಲೇ ಪಾವತಿಗೆ ತಹಸೀಲ್ದಾರ್ ಅಮರೇಶ ಪಮ್ಮಾರಗೆ ಸೂಚಿಸಲಾಗಿದೆ. ಬಾಗಲಕೋಟೆ ತಾಲೂಕಿನ 3, ರಬಕವಿ-ಬನಹಟ್ಟಿಯಲ್ಲಿ 6, ಬಾದಾಮಿ 1, ಜಮಖಂಡಿ 2 ಸೇರಿ ಒಟ್ಟು 12 ಮನೆಗಳು ಭಾಗಶಃ ಹಾನಿಯಾಗಿವೆ. ಬಾಗಲಕೋಟೆ ತಾಲೂಕಿನಲ್ಲಿ 16 ಪತ್ರಾಸ್ ಶೆಡ್‌ಗಳು ಸಹ ಹಾನಿಯಾಗಿರುವ ಬಗ್ಗೆ ಬಂದಿದ್ದು, ಕಂದಾಯ, ಪಂಚಾಯತ್ ರಾಜ್ ಎಂಜಿನಿಯರ್‌ಗಳು ಜಂಟಿ ಸಮೀಕ್ಷೆ ಕೈಗೊಂಡು ನಿಯಮಾನುಸಾರ ಪರಿಹಾರಕ್ಕೆ ತಹಸೀಲ್ದಾರರಿಗೆ ಸೂಚಿಸಲಾಗಿದೆ.ತಾಲೂಕಿನ ಕಲಾದಗಿ ಗ್ರಾಮದಲ್ಲಿ 2.24 ಎಕರೆ ಪ್ರದೇಶದಲ್ಲಿ ಬೆಳೆದ ದಾಳಿಂಬೆ ಬೆಳೆ ಹಾನಿಯಾಗಿದ್ದು, ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಲು ಸೂಚಿಸಲಾಗಿದೆ. ಹಾನಿಯಾದ ಬೆಳೆಗೆ ಸೂಕ್ತ ಪರಿಹಾರಕ್ಕೆ ಕ್ರಮವಹಿಸಲಾಗುವುದೆಂದು ತಿಳಿಸಿದ್ದಾರೆ. ಬಾಗಲಕೋಟೆ ತಾಲೂಕಿನ ತುಳಸಿಗೇರಿ, ದೇವನಾಳ, ಕೆರಕಲಮಟ್ಟಿ ಸೇರಿದಂತೆ ಇತರೆ ಭಾಗದಲ್ಲಿ ಹಾನಿ ಸಂಭವಿಸಿದ್ದು, ಅಧಿಕಾರಿಗಳು ಭೇಟಿ ನೀಡಿ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಾಯವಾಣಿ/ಮೊಬೈಲ್ ಆ್ಯಪ್:ಮಳೆ, ಗಾಳಿ ಹಾಗೂ ಸಿಡಿಲು ಮಿಂಚಿನಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ವರುಣಮಿತ್ರ ಸಹಾಯವಾಣಿ 9243345433ಗೆ ಸಂಪರ್ಕಿಸಿ ಹವಾಮಾನ ಮಾಹಿತಿ ಪಡೆಯಬಹುದಾಗಿದೆ. ಗುಡುಗು, ಸಿಡಿಲಿನ ಮುನ್ನೆಚ್ಚರಿಕೆ ಕ್ರಮಗಳನ್ನು ಸಹ ಸಿಡಿಲು ಆ್ಯಪ್, ದಾಮಿನಿ ಆ್ಯಪ್ ಮತ್ತು ಸಚೇತ ಆ್ಯಪ್ ನಿಂದ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಆ್ಯಪ್ ನಲ್ಲಿ ಸಿಡಿಲು ಯಾವ ಪ್ರದೇಶದಲ್ಲಿ ಬರುವ ಸಾಧ್ಯತೆ ಇದೆ ಎಂಬುದನ್ನು 30 ನಿಮಿಷಗಳ ಮೊದಲು ಮುನ್ಸೂಚನೆ, ಅಪಾಯದಿಂದ ಪಾರಾಗಲು ಕೈಗೊಳ್ಳಬಹುದಾದ ಸಲಹೆ, ಸೂಚನೆ ಸಿಗಲಿದೆ. ಇದರಿಂದ ಸಂಭವಿಸಬಹುದಾದ ಹಾನಿ ತಪ್ಪಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.----
ಬರ ಪರಿಹಾರದ ವಿವರ :ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು 2023ರಲ್ಲಿ ಸರ್ಕಾರ ಘೋಷಿಸಿದೆ. ಜಿಲ್ಲೆಯ 1,60,260 ರೈತರಿಗೆ ಈಗಾಗಲೇ 1 ರಿಂದ 9ನೇ ಹಂತದಲ್ಲಿ ತಲಾ ₹ 2 ಸಾವಿರರಂತೆ ಒಟ್ಟು ₹ 31.78 ಕೋಟಿ ಪರಿಹಾರ ಜಮೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ 10ನೇ ಹಂತದಲ್ಲಿ 1,49,262 ರೈತರಿಗೆ ₹ 195.56 ಕೋಟಿ ಜಮೆ ಮಾಡಲಾಗಿದೆ. ಪರಿಹಾರ ಹಣ ಪಾವತಿಯಾದ ಬಗ್ಗೆ ವೆಬ್ ಸೈಟ್ ನಿಂದ ಗ್ರಾಮವಾರು ಫಲಾನುಭವಿಗಳ ಪಟ್ಟಿ ಪರಿಶೀಲಿಸಬಹುದಾಗಿದೆ. ಗ್ರಾಮ ಪಂಚಾಯತಿ ನೋಟಿಸ್ ಬೋರ್ಡ್‌ದಲ್ಲಿ ರೈತರ ಪಟ್ಟಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.