ಸಾರಾಂಶ
ಬಾಗಲಕೋಟೆ : ತೋಟದಲ್ಲಿರುವ ಮನೆಗಳಿಗೂ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಭರವಸೆ ನೀಡಿದರು.
ನಗರದ ನೂತನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ನಡೆದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಮುಳುಗಡೆಗೊಂಡ ಸಂತ್ರಸ್ತರು ತಮ್ಮ ತಮ್ಮ ತೋಟಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಆ ಮನೆಗಳಿಗೂ ವಿದ್ಯುತ್ ಸಂಪರ್ಕ ಅಗತ್ಯವಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮವಹಿಸಲಾಗುವುದು ಎಂದರು.
ಈಗಾಗಲೇ ತೋಟದ ಮನೆಗಳಿಗೆ ನಿರಂತರ ವಿದ್ಯುತ್ ಒದಗಿಸಲು ಯಾವುದೇ ಯೋಜನೆಗಳು ಇಲ್ಲ. ಪ್ರಸ್ತುತ ಚಾಲನೆಯಲ್ಲಿ ಇಲ್ಲವಾದ್ದರಿಂದ ತೋಟದ ಮನೆಗಳಿಗೆ 7 ಗಂಟೆ ತ್ರೀ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಉಳಿದಂತೆ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಸಿಂಗಲ್ ಫೇಸ್ ಓಪನ್ ಡೆಲ್ಟಾ ಮಾದರಿಯಲ್ಲಿ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಇದ್ದರೂ ಯಾವುದೇ ರೀತಿ ತೊಂದರೆಯಾಗದಂತೆ ಸಮರ್ಪಕವಾಗಿ ವಿದ್ಯುತ್ ಪೂರೈಸಲಾಗಿದೆ. ಬರುವ ಬೇಸಿಗೆಯಲ್ಲೂ ಗ್ರಾಹಕರಿಗೆ ವಿದ್ಯುತ್ ಪೂರೈಸುವಲ್ಲಿ ಇಲಾಖೆ ಸನ್ನದ್ಧವಾಗಿದೆ. ಯಾವುದೇ ಸರ್ಕಾರಗಳು ಆಡಳಿತದಲ್ಲಿರಲಿ ವಿದ್ಯುತ್‌ಗೆ ಸಂಬಂಧಿಸಿದಂತೆ ತಾಂತ್ರಿಕ ದೋಷಗಳು ಬರುತ್ತಿರುವುದರಿಂದ ಕೆಲವು ಸಮಯ ಬೇಕಾಗುತ್ತದೆ. ಅಲ್ಲದೇ ಈ ಮೊದಲಿನ ವಿದ್ಯುತ್ ಪರಿಕರಗಳು ಬಹಳ ದಿನಗಳಿಂದ ಅಳವಡಿಸಿದ್ದು, ಮಳೆ, ಗಾಳಿ ಬಿಸಿಲಿಗೆ ತನ್ನ ಸಾಮರ್ಥ್ಯ ಕಳೆದುಕೊಂಡಿರುತ್ತವೆ ಎಂದರು.
ಹುನಗುಂದ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮರೋಳ-ರಾಮಥಾಳ, ನಂದವಾಡಗಿ ಏತ ನೀರಾವರಿ ಇರುವುದರಿಂದ ಈ ಭಾಗದಲ್ಲಿ 220 ಕೆವಿ ಸಬ್ ಸ್ಟೇಷನ್ ಅಗತ್ಯವಿದ್ದು, ಅನುಮೋದನೆ ದೊರೆತಿದ್ದರೂ ಕಾಮಗಾರಿ ಪ್ರಾರಂಭವಾಗಿಲ್ಲ. ಬೇಗನೆ ಪ್ರಾರಂಭಕ್ಕೆ ಕ್ರಮವಹಿಸುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು. ಅಲ್ಲದೇ ಇಳಕಲ್ಲ ನಗರದಲ್ಲಿ 6 ಎಕರೆ ಜಾಗೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುತ್ತಿದ್ದು, ಅದರ ಮೇಲೆ ಹೈ ವೋಲ್ಟೇಜ್ ಲೈನ್ ಹಾಯ್ದು ಹೋಗಿದ್ದರಿಂದ ಅದರ ತೆರವುಗೊಳಿಸಬೇಕಾಗಿದೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಸಭೆಗೆ ತಿಳಿಸಿದಾಗ ಸಚಿವ ಜಾರ್ಜ್ ಪ್ರಾರಂಭವಾಗದ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸುವುದರ ಜೊತೆಗೆ ಇತರೆ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಬಾದಾಮಿಯು ಐತಿಹಾಸಿಕ ಪ್ರವಾಸಿ ತಾಣವಾಗಿದೆ. ಕೈಗಾರಿಕೆ, ವಿಶೇಷವಾಗಿ ಗುಳೇದಗುಡ್ಡ, ಕೆರೂರ ಭಾಗದಲ್ಲಿ ಫವರ್ ಲೂಮ್ ಹೆಚ್ಚಿಗೆ ಇದೆ. 220 ಕೆವಿ ಅಗತ್ಯವಿರುವುದರಿಂದ ಅದಕ್ಕೆ ಅವಶ್ಯವಾಗಿರುವಷ್ಟು ಭೂಮಿ ನೀಡುವುದಾಗಿ ತಿಳಿಸಿದರು. ಈ ಭಾಗದ ಬೇಲೂರ, ನಂದಿಕೇಶ್ವರ 33/11 ಕೆವಿಯಿಂದ 110 ಕೆವಿ ಮೇಲ್ದರ್ಜೆಗೆ ಏರಿಸಬೇಕಾಗಿದೆ. ಅಲ್ಲದೇ ಬಾದಾಮಿ ಹಾಗೂ ಗುಳೇದಗುಡ್ಡ ಉಪ ವಿಭಾಗಗಳನ್ನು ಸೇರಿಸಿ ಬಾದಾಮಿಯಲ್ಲಿ ನೂತನ ವಿಭಾಗೀಯ ಕಚೇರಿ ಅಗತ್ಯವಾಗಿರುವ ಬಗ್ಗೆ ಸಭೆಗೆ ತಿಳಿಸಿದರು.
ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ, ಬೀಳಗಿಯ 220 ಕೆವಿ ಹಾಗೂ 110 ಕೆವಿ ಸುನಗ ವಿದ್ಯುತ್ ವಿತರಣಾ ಕೇಂದ್ರಗಳ ಕಾಮಗಾರಿಗಳು ಪ್ರಗತಿಯಲ್ಲಿದೆ. ಕೂಡಲೇ ಪೂರ್ಣಗೊಳಿಸಿ ಚಾಲನೆಗೊಳಿಸಲು ಕ್ರಮವಹಿಸುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು. ಅಲ್ಲದೇ ಸಿದ್ದಾಪೂರ, ಅರಕೇರಿ, ಚಿಕ್ಕಹಂಚಿನಾಳ ಮತ್ತು ಚಿಕ್ಕಾಲಗುಂಡಿಯಲ್ಲಿ ಹೊಸದಾಗಿ 110 ಕೆವಿ ವಿದ್ಯುತ್ ಕೇಂದ್ರ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸಿದರು. ಈ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸುವಂತೆ ಸಚಿವ ಜಾರ್ಜ ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಎಚ್.ಟಿ ಹಾಗೂ ಎಲ್ಟಿ ಮಾರ್ಗದ ವಾಹನ ಬದಲಾವಣೆ ಕಾಮಗಾರಿಗಳು ಮಂಜೂರಾಗಿದ್ದು, ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಗೊಳ್ಳಬೇಕಿದೆ. ಅಲ್ಲದೇ ಹೆಚ್ಚುವರಿಯಾಗಿ ಪರಿವರ್ತಕಗಳನ್ನು ಸಹ ಅಳವಡಿಸಲು ಬಾಕಿ ಇದ್ದು, ತುರ್ತಾಗಿ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಲು ಸಚಿವ ಜಾರ್ಜ್‌ರವರಿಗೆ ತಿಳಿಸಿದರು. ಈ ಬಗ್ಗೆ ಆದ್ಯತೆ ಮೇರೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ, ಕೆಪಿಟಿಸಿಎಲ್ ವ್ಯವಸ್ಥಾಪಕ ಪಂಕಜಕುಮಾರ ಪಾಂಡೆ ಸೇರಿದಂತೆ ಇತರರಿದ್ದರು.
ಪಕ್ಷದ ಗೊಂದಲ ಹೈಕಮಾಂಡ್ ನೋಡಿಕೊಳ್ಳುತ್ತೆ:ಕಾಂಗ್ರೆಸ್ ಪಕ್ಷದ ಸದ್ಯದ ಬೆಳವಣಿಗೆಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲವೂ ಮಾಧ್ಯಮ ಸೃಷ್ಠಿ. ತಮಗೆ ಸುದ್ದಿ ಅವಶ್ಯಕತೆಯಿಂದಾಗಿ ಏನೆಲ್ಲಾ ಸೃಷ್ಠಿಸಿ ಬಿತ್ತರಿಸುತ್ತಿದ್ದೀರಿ. ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೆ ಚರ್ಚಿಸಿ ಸರಿ ಮಾಡ್ತೀವಿ. ನಮ್ಮ ಹೈಕಮಾಂಡ್ ಎಲ್ಲವನ್ನು ಬಗೆಹರಿಸುತ್ತದೆ ಎಂದು ಹೇಳಿ, ಡಿನ್ನರ್ ಪಾರ್ಟಿ ಸರ್ವೇ ಸಾಮಾನ್ಯ. ಊಟಕ್ಕೆ ಕರೆದರೆ ತಪ್ಪೇನಿದೆ ಎಂದರು.
ತಾವು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು ಪ್ರತಿ ಜಿಲ್ಲೆಗೆ ತೆರಳಿ ಅಲ್ಲಿನ ಜನಪ್ರತಿನಿಧಿಗಳಿಂದ ಇಂಧನ ಇಲಾಕೆಗೆ ಸಂಬಂಧಿತ ಸಮಸ್ಯೆಗಳನ್ನು ತಿಳಿದು ಪರಿಹರಿಸುವ ಕಾರ್ಯಕ್ಕೆ ಮುಂದಾಗಿರುವುದಾಗಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.