2ನೇ ಹಂತದ ಮಾದೇಗೌಡ ಬಡಾವಣೆ ನಿರ್ಮಾಣಕ್ಕೆ ಕ್ರಮ: ಮಧು ಮಾದೇಗೌಡ

| Published : Sep 20 2024, 01:34 AM IST

ಸಾರಾಂಶ

ಭಾರತೀ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯು 1216 ಸದಸ್ಯರನ್ನು ಹೊಂದಿ 35 ಕೋಟಿ ರು. ವ್ಯವಹಾರ ಮಾಡುತ್ತಿದೆ. ವಾರ್ಷಿಕ 51 ಲಕ್ಷ ನಿವ್ವಳ ಲಾಭಗಳಿಸಿರುವುದು ಶ್ಲಾಘನೀಯ. ಈ ಲಾಭದಲ್ಲಿ ಸಹಕಾರ ನಿಯಮದ ಪ್ರಕಾರ ವಿವಿಧ ನಿಧಿಗಳಿಗೆ ಹಂಚಿ ಸಂಘದ ಷೇರುದಾರರಿಗೆ ಶೇ.30ರಷ್ಟು ಲಾಭಾಂಶವನ್ನು ನೀಡಲು ಮುಂದಾಗಿದ್ದೇವೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಭಾರತೀ ಗೃಹ ನಿರ್ಮಾಣ ಸಹಕಾರ ಸಂಘದಿಂದ ಜಮೀನನ್ನು ಖರೀದಿಸಿ ಸದಸ್ಯರಿಗೆ ನಿವೇಶನ ಹಂಚಲು ಕ್ರಮಕೈಗೊಳ್ಳಲಾಗುವುದು ಎಂದು ಭಾರತೀ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಹಾಗೂ ಶಾಸಕ ಮಧು ಜಿ.ಮಾದೇಗೌಡ ತಿಳಿಸಿದರು.

ಭಾರತೀ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ, ಭಾರತೀ ಗೃಹ ನಿರ್ಮಾಣ ಸಹಕಾರ ಸಂಘ, ಭಾರತೀ ವಿವಿದ್ದೋದ್ದೇಶ ಸಹಕಾರ ಸಂಘದ ಭಾರತೀ ಕುವೆಂಪು ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, 5 ಎಕರೆ ನಿವೇಶನ ಖರೀದಿಸಿ ಇನ್ನೊಂದು ವರ್ಷದೊಳಗೆ 2ನೇ ಹಂತದ ಮಾದೇಗೌಡ ಬಡಾವಣೆ ನಿರ್ಮಾಣಕ್ಕೆ ಕ್ರಮವಹಿಸುವುದಾಗಿ ಹೇಳಿದರು.

ಭಾರತೀ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯು 1216 ಸದಸ್ಯರನ್ನು ಹೊಂದಿ 35 ಕೋಟಿ ರು. ವ್ಯವಹಾರ ಮಾಡುತ್ತಿದೆ. ವಾರ್ಷಿಕ 51 ಲಕ್ಷ ನಿವ್ವಳ ಲಾಭಗಳಿಸಿರುವುದು ಶ್ಲಾಘನೀಯ. ಈ ಲಾಭದಲ್ಲಿ ಸಹಕಾರ ನಿಯಮದ ಪ್ರಕಾರ ವಿವಿಧ ನಿಧಿಗಳಿಗೆ ಹಂಚಿ ಸಂಘದ ಷೇರುದಾರರಿಗೆ ಶೇ.30ರಷ್ಟು ಲಾಭಾಂಶವನ್ನು ನೀಡಲು ಮುಂದಾಗಿದ್ದೇವೆ ಎಂದರು.

ಭಾರತೀ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ 1200 ಸದಸ್ಯರಿದ್ದು, 47 ಲಕ್ಷ ಷೇರು ಬಂಡವಾಳವನ್ನು ಮತ್ತು 1.50 ಕೋಟಿ ಕೂಡಿಟ್ಟ ಲಾಭದ ನಿಧಿಯನ್ನು ಹೊಂದಿದೆ. ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ. ಉತ್ತಮ ಸಹಕಾರ ಸಂಘವೆಂದು ಪ್ರಶಸ್ತಿ ಪಡೆದು ಆಡಿಟ್ ವರದಿಯಲ್ಲಿ ಎ ಗ್ರೇಡ್ ಪಡೆದುಕೊಂಡಿದೆ ಎಂದರು.

ಭಾರತೀ ವಿವಿದ್ದೋದ್ದೇಶ ಸಹಕಾರ ಸಂಘ 302 ಸದಸ್ಯರಿಂದ 6 ಲಕ್ಷ ಬಂಡವಾಳ ಹೂಡಿಕೆ ಮಾಡಿ 3 ಕೋಟಿ ವಾರ್ಷಿಕ ವಹಿವಾಟು ನಡೆಸಿ 4.40 ಲಕ್ಷ ರು. ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ 400 ರು. ಬೆಲೆಬಾಳುವ ವಾಟರ್ ಬಾಟಲ್‌ನನ್ನು ಕೊಡುಗೆಯಾಗಿ ನೀಡಿದ್ದೇವೆ ಎಂದರು.

ಸಂಘದ ಸಿಇಒ ಎಸ್.ನಾಗರಾಜು ವಾರ್ಷಿಕ ವರದಿ ಮಂಡಿಸಿದರು. ನಿಧನಗೊಂಡ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಇದೇ ವೇಳೆ ಭಾರತೀ ಎಜುಕೇಷನ್ ಟ್ರಸ್ಟ್‌ನ ಸಿಇಒ ಆಶಯ್‌ಮಧು, ಸಂಘದ ಉಪಾಧ್ಯಕ್ಷ ಬಿ.ಎಂ.ನಂಜೇಗೌಡ, ನಿರ್ದೇಶಕರಾದ ಸಿದ್ದೇಗೌಡ, ಜಿ.ಕೃಷ್ಣ, ಶಿವಸ್ವಾಮಿ, ಡಾ.ತಮಿಜ್‌ಮಣಿ, ಪಿ.ನಾಗಮಾದಯ್ಯ, ಎಂ.ಆರ್.ಅವಿನಾಶ್, ಎಚ್.ಪಿ.ಪ್ರತಿಮಾ, ನೌಕರರಾದ ಪ್ರಮೋದ್, ಅನಿತಾ, ಸಹನ, ಎಂ.ಸಿ.ರಾಜಶೇಖರ್ ಇದ್ದರು.