ಸಾರಾಂಶ
ಭರವಸೆ ನೀಡಿದ ಶಾಸಕ ಪಿ.ರವಿಕುಮಾರ್ । ತಾಲೂಕು ಮಟ್ಟದ ಜನತಾ ದರ್ಶನ, ಆರೋಗ್ಯ ಶಿಬಿರಕ್ಕೆ ಚಾಲನೆ । ಕೂಸಿನ ಮನೆಯೂ ಶಾಸಕರಿಂದ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಮಂಡ್ಯಸಾರ್ವಜನಿಕರ ಬೇಡಿಕೆಯಂತೆ ಬಸರಾಳು ಹೋಬಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.
ತಾಲೂಕಿನ ಬಸರಾಳು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಜನತಾದರ್ಶನ ಹಾಗೂ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮದಲ್ಲಿ 50 ಲಕ್ಷ ರು. ವೆಚ್ಚದಲ್ಲಿ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಲು ಕ್ರಮ ವಹಿಸಲಾಗಿದೆ. ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.ಬಸರಾಳಿನಲ್ಲಿ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಎನ್ ಎಚ್ ವತಿಯಿಂದ ಕೋಡಿಕೊಪ್ಪಲಿನಿಂದ ಬಿಳಿದೇಗಲುವರೆಗೂ 5 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಚಿಕ್ಕಮಂಡ್ಯದಿಂದ ಬಿಳಿದೇಗಲುವರೆಗೆ ರಸ್ತೆ ಕಾಮಗಾರಿಗಾಗಿ 12 ಕೋಟಿ ರು.ಅನ್ನು ಎಸ್.ಎಚ್ ಅಲ್ಲಿ ತೆಗೆದುಕೊಂಡಿದ್ದೇವೆ. ಈ ರಸ್ತೆಯು ಟೆಂಡರ್ ಹಂತದಲ್ಲಿದೆ. ಕಾಮಗಾರಿಯನ್ನು ಶೀಘ್ರ ಆರಂಭಿಸುತ್ತೇವೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ 50 ಬೆಡ್ ಗಳನ್ನು ಒಳಗೊಂಡ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಲಾಗುವುದು. ಬರಗಾಲದಲ್ಲೂ ಬಸರಾಳು ಕೆರೆಗೆ ನೀರು ತುಂಬಿಸಲು ವಿಶೇಷ ಕಾಳಜಿ ವಹಿಸಿ ಹೇಮಾವತಿ ಹಾಗೂ ಕೆ.ಆರ್.ಎಸ್ ಅಣೆಕಟ್ಟಿನ ಮೂಲಕ ನೀರು ಒದಗಿಸಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಗೆ ಧನ್ಯವಾದ ಸಲ್ಲಿಸಿದರು.ಸಾರ್ವಜನಿಕರ ಕುಂದು ಕೊರತೆ ನಿವಾರಣೆಗಾಗಿ ಜನತಾದರ್ಶನವನ್ನು ಆಯೋಜಿಸಿ ಸಮಸ್ಯೆಗಳನ್ನು ನಿಯಮಾನುಸಾರ ಪರಿಹರಿಸಲಾಗುವುದು. ಜನತಾ ದರ್ಶನವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಗೃಹಲಕ್ಷ್ಮೀ, ಗೃಹ ಜ್ಯೋತಿ ಸೇರಿದಂತೆ ಸರ್ಕಾರದ ಯಾವುದೇ ಯೋಜನೆಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಅರ್ಜಿ ಸಲ್ಲಿಸಿ ಪರಿಹರಿಸಿಕೊಳ್ಳಬೇಕು. ಜನತಾ ದರ್ಶನದಲ್ಲಿ ಸ್ವೀಕೃತವಾಗುವ ಅರ್ಜಿಗಳು/ ಸಮಸ್ಯೆಗಳನ್ನು15 ದಿನದೊಳಗೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇದೇ ವೇಳೆ ಚಾಮುಂಡೇಶ್ವರಿ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಉಚಿತ ಬೃಹತ್ ಆರೋಗ್ಯ ಶಿಬಿರದಲ್ಲಿ ಜನರು ತಮಗಿರುವ ಆರೋಗ್ಯದ ಸಮಸ್ಯೆಗಳನ್ನು ವೈದ್ಯರ ಬಳಿ ತಿಳಿಸಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ಮಾಡಿದರು.
ಇದೇ ವೇಳೆ ಕೂಸಿನ ಮನೆಯನ್ನು ಶಾಸಕರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಎನ್.ಯತೀಶ್, ಉಪವಿಭಾಗಾಧಿಕಾರಿ ಶಿವಮೂರ್ತಿ, ತಾಪಂ ಇಒ ಎಂ.ಎಸ್.ವೀಣಾ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮೋಹನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.----------6ಕೆಎಂಎನ್ ಡಿ11,12ಮಂಡ್ಯ ತಾಲೂಕು ಬಸರಾಳು ಗ್ರಾಮದಲ್ಲಿ ನಡೆದ ಜನತಾ ದರ್ಶನದಲ್ಲಿ ಶಾಸಕರು, ಅಧಿಕಾರಿಗಳು ಜನರ ಸಮಸ್ಯೆ ಆಲಿಸಿದರು.