ಹನೂರು ಬಳಿಯ ಹೊಗೇನಕಲ್‌ ಜಲಪಾತದ ಗಡಿ ಗ್ರಾಮಗಳ ಅಭಿವೃದ್ಧಿಗೆ ಕ್ರಮ: ಜಿಲ್ಲಾಧಿಕಾರಿ ಶಿಲ್ಪಾನಾಗ್‌

| Published : Nov 25 2024, 01:00 AM IST

ಹನೂರು ಬಳಿಯ ಹೊಗೇನಕಲ್‌ ಜಲಪಾತದ ಗಡಿ ಗ್ರಾಮಗಳ ಅಭಿವೃದ್ಧಿಗೆ ಕ್ರಮ: ಜಿಲ್ಲಾಧಿಕಾರಿ ಶಿಲ್ಪಾನಾಗ್‌
Share this Article
  • FB
  • TW
  • Linkdin
  • Email

ಸಾರಾಂಶ

ತಮಿಳುನಾಡಿನಲ್ಲಿರುವ ಕರ್ನಾಟಕ ಗಡಿಯ ಹೊಗೇನಕಲ್‌ ಜಲಪಾತದ ಬಳಿಯ ಗಡಿಯ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಹೇಳಿದರು. ತಮಿಳುನಾಡಿನಲ್ಲಿರುವ ಹೊಗೇನಕಲ್ ಜಲಪಾತ ಭಾಗದಲ್ಲಿ ತೆರಳಿ ಪರಿಶೀಲನೆ ನಡೆಸಿ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಮಾತನಾಡಿದರು.

ಪರಿಶೀಲನೆ, ಚರ್ಚೆ । ಅಧಿಕಾರಿಗಳೊಂದಿಗೆ ತೆಪ್ಪದಲ್ಲಿ ತೆರಳಿ ಸ್ಥಿತಿಗತಿ ವೀಕ್ಷಣೆ । ಸಮಗ್ರ ಮಾಹಿತಿ ಸಂಗ್ರಹ । ಹೆಚ್ಚಿನ ಹಣ ನೀಡಲು ಅಂಬಿಗರ ಮನವಿ

ಕನ್ನಡಪ್ರಭ ವಾರ್ತೆ ಹನೂರು

ತಮಿಳುನಾಡಿನಲ್ಲಿರುವ ಕರ್ನಾಟಕ ಗಡಿಯ ಹೊಗೇನಕಲ್‌ ಜಲಪಾತದ ಬಳಿಯ ಗಡಿಯ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಹೇಳಿದರು.

ಇಲ್ಲಿಯ ಗಡಿಭಾಗದ ತಮಿಳುನಾಡಿನಲ್ಲಿರುವ ಹೊಗೇನಕಲ್ ಜಲಪಾತ ಭಾಗದಲ್ಲಿ ತೆರಳಿ ಪರಿಶೀಲನೆ ನಡೆಸಿ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಮಾತನಾಡಿದರು.

ಶಿಲ್ಪಾನಾಗ್ ಹಾಗೂ ಶಾಸಕ ಎಂ.ಆರ್. ಮಂಜುನಾಥ್, ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಹಾಗೂ ಅಧಿಕಾರಿಗಳ ತಂಡ ಹೊಗೇನಕಲ್ ಜಲಪಾತ ಸೇರಿದಂತೆ ಪ್ರವಾಸಿಗರಿಗೆ ಭೇಟಿ ನೀಡುವ ಗಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ತಮಿಳುನಾಡಿನ ಭಾಗದಲ್ಲಿ ಅಲ್ಲಿನ ಸರ್ಕಾರ ಗಡಿ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಅಭಿವೃದ್ಧಿಪಡಿಸಿರುವ ಬಗ್ಗೆ ಹೊಗೇನಕಲ್ ಜಲಪಾತದ ತೆಪ್ಪದಲ್ಲಿ ತೆರಳಿ ಅಧಿಕಾರಿಗಳ ತಂಡದ ಜತೆ ಪರಿಶೀಲನೆ ನಡೆಸಿ ಅಲ್ಲಿನ ಸ್ಥಿತಿಗತಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.

ರಾಜ್ಯದ ವಿವಿಧ ಭಾಗಗಳಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳು ಸೇರಿದಂತೆ ಪ್ರವಾಸಿಗರು ನಿತ್ಯ ಕರ್ನಾಟಕದ ನಯಾಗರ ಎಂದೇ ಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತದ ಸೇರಿದಂತೆ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ತಮಿಳುನಾಡಿನ ಭಾಗದಲ್ಲಿ ಮಾಡಿರುವ ಅಭಿವೃದ್ಧಿಗಳ ಬಗ್ಗೆ ಪರಿಶೀಲಿಸಿ ಕರ್ನಾಟಕದ ಭಾಗದಲ್ಲಿ ಅಭಿವೃದ್ಧಿಗೆ ಪರಿಶೀಲನೆ ನಡೆಸಿದರು.

ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಡಿ, ಅಪ್ಪಂಕ ಪಟ್ಟಿ ,ಪುದುಕಾಡು ಸೇರಿದಂತೆ ವಿವಿಧ ಗ್ರಾಮಗಳ ಅಭಿವೃದ್ಧಿ ಪಡಿಸಲು ಅಲ್ಲಿನ ಜನತೆ ಹಲವಾರು ವರ್ಷಗಳಿಂದ ವಾಸಿಸುವ ಜನತೆಗೆ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಲು ತೊಡಕಾಗಿರುವುದರಿಂದ ತಮಿಳುನಾಡಿನ ಭಾಗದಲ್ಲಿ ಅಲ್ಲಿನ ಸರ್ಕಾರ ಗಡಿ ಗ್ರಾಮಗಳಿಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಂಡಿರುವ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ಪಡೆದರು.

ಅಂಬಿಗರ ಮನವಿ:

ಹೊಗೇನಕಲ್ ಜಲಪಾತದಲ್ಲಿ ನಮ್ಮ ಕರ್ನಾಟಕದ ಭಾಗದಲ್ಲಿ 300ಕ್ಕೂ ಹೆಚ್ಚು ತೆಪ್ಪ ನಡೆಸುವ ಅಂಬಿಗರು ಇರುವುದರಿಂದ ನಿತ್ಯ ಇಲ್ಲಿಗೆ 20 ರಿಂದ 30 ತೆಪ್ಪಗಳು ಮಾತ್ರ ಸಂಚರಿಸುತ್ತವೆ. ಆದ್ದರಿಂದ ಇಲ್ಲಿನ ಮುಖ್ಯ ಕಸಬಾಗಿರುವ ತೆಪ್ಪ ನಡೆಸುವವರಿಗೆ ತುಂಬಾ ಕಷ್ಟಕರವಾಗಿದೆ. ಹೀಗಾಗಿ ತಮಿಳುನಾಡಿನ ಭಾಗದಲ್ಲಿ ಪ್ರವಾಸಿಗರಿಗೆ ಪ್ರತಿಯೊಬ್ಬರಿಂದ 1500 ಪಡೆದು ಹೆಚ್ಚುವರಿ ತೆಪ್ಪ ನಡೆಸುವವರಿಗೆ ತಮಿಳುನಾಡಿನ ಸರ್ಕಾರ ನೀಡುತ್ತಿದೆ. ಹೀಗಾಗಿ ಕರ್ನಾಟಕದ ಭಾಗದಲ್ಲಿ ಪ್ರತಿ ಪ್ರವಾಸಿಗರಿಂದ 800 ರುಪಾಯಿ ಪಡೆದು 600 ರುಪಾಯಿ ಮಾತ್ರ ತೆಪ್ಪದವರಿಗೆ ನೀಡಲಾಗುತ್ತಿದೆ. ತೆಪ್ಪ ನಡೆಸುವವರಿಗೆ ಅರಣ್ಯ ಇಲಾಖೆಯಿಂದ ಹೆಚ್ಚಿನ ಹಣ ನೀಡಬೇಕು ಎಂದು ಅಂಬಿಗರು ಮನವಿ ಸಲ್ಲಿಸಿದರು.

ಶಾಸಕ ಎಂ.ಆರ್. ಮಂಜುನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಉಪ ವಿಭಾಗಾಧಿಕಾರಿ ಮಹೇಶ್, ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಇ ರಘು, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಡಿಎಫ್ಒ ಸಂತೋಷ್ ಕುಮಾರ್, ಡಿವೈಎಸ್ಪಿ ಧರ್ಮೇಂದರ್, ತಾಲೂಕು ದಂಡಾಧಿಕಾರಿ ಗುರುಪ್ರಸಾದ್, ಮಲೆ ಮಾದೇಶ್ವರ ಬೆಟ್ಟ ಇನ್‌ಸ್ಪೆಕ್ಟರ್ ಜಗದೀಶ್, ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.