ಸಾರಾಂಶ
ಚನ್ನಪಟ್ಟಣ: ನೀರಾ ನಿಸರ್ಗ ಕೊಡುವ ಅತ್ಯಂತ ಉತ್ಕೃಷ್ಟ ಪಾನೀಯ. ನೀರಾ ಉತ್ಪಾದನೆಯನ್ನು ವೈಜ್ಞಾನಿಕವಾಗಿ ಮಾಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸೃಷ್ಟಿಸಬಹುದು. ಈ ಉದ್ಯಮ ಕೈಹಿಡಿದರೆ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಜಯಂತಿ ಹಾಗೂ ನೀರಾ ಉದ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರಾ ಉದ್ಯಮಕ್ಕೆ ಭವಿಷ್ಯವಿದ್ದು, ಇದನ್ನು ಕಾರ್ಪೋರೇಟ್ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಹಕಾರ ನೀಡಲಾಗುವುದು ಎಂದು ತಿಳಿಸಿದರು.ನೀರಾ ರೀತಿಯ ಉತ್ತಮ ಪಾನೀಯ ಮತ್ತೊಂದಿಲ್ಲ. ಬಹುತೇಕ ಪಾನೀಯಗಳು ಕೃತಕವಾಗಿರುತ್ತವೆ. ಆದರೆ, ನೀರಾ ನಿಸರ್ಗ ಸೃಷ್ಟಿಯಾಗಿದ್ದು, ಆರೋಗ್ಯ ದೃಷ್ಟಿಯಿಂದ ಉತ್ತಮವಾಗಿದೆ. ಈ ಹಿಂದೆ ನೀರಾ ಚಳವಳಿಗೆ ಚನ್ನಪಟ್ಟಣ ನಾಂದಿ ಹಾಡಿದ್ದು, ಇಲ್ಲಿಂದಲೇ ಈ ಉದ್ಯಮ ಬೆಳೆಸಲು ಪಣ ತೊಡೋಣ ಎಂದರು.
ನೀರಾ ಮತ್ತು ತೆಂಗಿನ ಉಪ ಉತ್ಪನ್ನಗಳ ಸಂಸ್ಕರಣೆಗೆ ತಾಲೂಕಿನಲ್ಲಿ ಸುಸಜ್ಜಿತವಾದ ಜಾಗ ನೀಡಲಾಗುವುದು. ಇದರ ಜೊತೆಗೆ ನಾನೂ ಸಹ ವೈಯಕ್ತಿಕವಾಗಿ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದನಿದ್ದು, ಆರೋಗ್ಯಕ್ಕೆ ಮಾರಕವಾಗಿರುವ ಕೃತಕ ಪಾನೀಯಗಳನ್ನು ಬಿಟ್ಟು ಉತ್ಕೃಷ್ಟ ಗುಣಮಟ್ಟದ ನಮ್ಮ ನೀರಾ ಬೆಳೆಸಲು ಮುಂದಾಗೋಣ ಎಂದರು.ಹಿರಿಯ ಪತ್ರಕರ್ತ ವೀರಭದ್ರಪ್ಪ ಬಿಸ್ನಳ್ಳಿ ಮಾತನಾಡಿ, ಮಹಾತ್ಮ ಗಾಂಧಿ ಹಾಗೂ ಪ್ರೊ.ಎಂಡಿಎನ್ ಇಬ್ಬರದು ಒಂದೇ ರೀತಿಯ ಬದುಕು. ದೇಶದ ಸ್ವಾತಂತ್ರ್ಯಕ್ಕೆ ಗಾಂಧಿ ಧುಮುಕಿದರೆ, ಪ್ರೊಫೆಸರ್ ರೈತರ ಸ್ವಾತಂತ್ರ್ಯಕ್ಕಾಗಿ ಧುಮುಕಿದರು. ರೈತ ಸಮುದಾಯಕ್ಕೆ ಕೇವಲ ಹೋರಾಟದ ಕಿಚ್ಚು ಕಲಿಸದೇ ಜ್ಞಾನ ತುಂಬಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಭಾರತದ ರೈತ ಕುಲಕ್ಕೆ ಘನತೆ ತಂದುಕೊಟ್ಟ, ಸಮಗ್ರ ರೈತ ಚಳವಳಿ ಕಟ್ಟಿಕೊಟ್ಟ ನಂಜುಂಡಸ್ವಾಮಿ ನೆನಪು ಸದಾ ಜೀವಂತವಾಗಿರುತ್ತದೆ. ನಂಜುಂಡಸ್ವಾಮಿ ಹೋರಾಟದ ಹಾದಿ ಹಿಡಿಯುವ ತನಕ ರೈತರನ್ನು ಮಾತನಾಡಿಸುವವರೇ ಇರಲಿಲ್ಲ. ರೈತ ಸಂಕುಲಕ್ಕೆ ಶಕ್ತಿ ಕೊಟ್ಟ ಕೀರ್ತಿ ಅವರಿಗಿದೆ. ನಾವು ಕೃಷಿಯನ್ನು ಉದ್ಯಮವಾಗಿ ಪರಿವರ್ತಿಸದೇ ಹಿಂದುಳಿಯುತ್ತಿದ್ದೇವೆ. ರೈತರು ಇನ್ನಾದರೂ ಉದ್ಯಮಿಗಳಾಗುವ ಅನಿವಾರ್ಯತೆ ಇದೆ. ರೈತರು ಬದಲಾಗುವ ಮೂಲಕ ಆರ್ಥಿಕ ಪ್ರಗತಿ ಸಾಧಿಸಬೇಕು. ನಾವು ದುಡಿಯದ ವಿನಾ ಯಾವುದೇ ಸರ್ಕಾರ ನಡೆಯಲು ಸಾಧ್ಯವಿಲ್ಲ. ಅದರೂ, ಎಲ್ಲ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಿವೆ. ರೈತ ರೈತನಾಗಿಯೇ ಇದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.ರೈತ ಮುಖಂಡ ಸಿ.ಪುಟ್ಟಸ್ವಾಮಿ ಮಾತನಾಡಿ, ನೀರಾ ಚಳವಳಿ ನಡೆದು ಹಲವು ವರ್ಷಗಳೇ ಕಳೆದರೂ ಇದುವರೆಗೂ ನೀರಾ ಉದ್ಯಮವಾಗದಿರುವುದು ತೆಂಗು ಬೆಳೆಗಾರರ ಪಾಲಿನ ದುರ್ದೈವ. ರೈತನಾಯಕ ನಂಜುಂಡಸ್ವಾಮಿ ಜನುಮದಿನದಂದು ನೀರಾ ಉದ್ಯಮಕ್ಕೆ ಚೈತನ್ಯ ಕೊಡುವ ಸಲುವಾಗಿ ಈ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಎಂ.ಕೆ.ನಿಂಗಪ್ಪ, ದೇಸಿ ಉದ್ಯಮಗಳ ಆಯೋಜಕ ಅಭಿಷೇಕ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಂಕರ್, ಮಾವು ಬೆಳೆಗಾರರ ಸಂಘದ ಅಧ್ಯಕ್ಷ ರಾಂಪುರ ಧರಣೀಶ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ರೈತ ಮುಖಂಡರು ಇತರರಿದ್ದರು.ಪೊಟೋ೧೪ಸಿಪಿಟಿ೧: ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಜಯಂತಿ ಹಾಗೂ ನೀರಾ ಉದ್ಯಮ ಸಂವಾದ ಕಾರ್ಯಕ್ರಮವನ್ನು ನೀರಾ ಕುಡಿಯುವ ಮೂಲಕ ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಅತಿಥಿಗಳು ಚಾಲನೆ ನೀಡಿದರು.