20-30 ವರ್ಷದ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಕ್ರಮ

| Published : Jun 22 2024, 12:50 AM IST

ಸಾರಾಂಶ

ನಗರದಲ್ಲಿ ಇಪ್ಪತ್ತೈದು ಮೂವತ್ತು ವರ್ಷದ ಅನೇಕ ಯೋಜನೆಗಳನ್ನು, ನಮ್ಮ ಕಾಲದಲ್ಲಿ ಅನುಷ್ಠಾನಕ್ಕೆ ತಂದು ಸಾರ್ವಜನಿಕರಿಗೆ ಸಮರ್ಪಣೆ ಮಾಡಲಾಗುವುದು ಎಂದು ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುನಗರದಲ್ಲಿ ಇಪ್ಪತ್ತೈದು ಮೂವತ್ತು ವರ್ಷದ ಅನೇಕ ಯೋಜನೆಗಳನ್ನು, ನಮ್ಮ ಕಾಲದಲ್ಲಿ ಅನುಷ್ಠಾನಕ್ಕೆ ತಂದು ಸಾರ್ವಜನಿಕರಿಗೆ ಸಮರ್ಪಣೆ ಮಾಡಲಾಗುವುದು ಎಂದು ಕೇಂದ್ರ ಜಲಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.ನಗರದಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೇವಲ ತುಮಕೂರು ಮಾತ್ರವಲ್ಲ, ಕರ್ನಾಟಕದಲ್ಲಿ ಎಲ್ಲೆಲ್ಲಿ ರೈಲ್ವೆಗೆ ಸಂಬಂಧಿಸಿದಂತೆ ಏನೇನು ಆಗಿದೆ, ಅನ್ನುವುದನ್ನು ಪರಿಶೀಲಿಸಿದ್ದೀವಿ. ಈ ವಿಚಾರವನ್ನು ರೈಲ್ವೆ ಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ರೈಲ್ವೆ ಬೋರ್ಡ್‌ನ ಚೇರ್ ಮನ್ ಜೊತೆಯೂ ಮಾತನಾಡಿದ್ದೀನಿ ಎಂದರು.

ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಕುರಿತ ಸಭೆಯಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಮಾತನಾಡಿ ಅವರ ಭಾವನೆಗಳನ್ನು ತಿಳಿದುಕೊಂಡು ಆಮೇಲೆ ಸ್ಪಂದಿಸುತ್ತೇನೆ ಎಂದು ಹೇಳಿದರು.ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸಿದ್ದರಾಮಯ್ಯ ಒಬ್ಬ ಬುದ್ದಿವಂತರು. ಯಾವುದೋ ಒತ್ತಡದಿಂದ ಒದ್ದಾಡುತ್ತಾ ಇದ್ದಾರೆ. ಅವರ ಮನಸ್ಸಿಗೆ ಸರಿಯಿದ್ಯಾ ಅನ್ನೋದನ್ನ ಅವರು ವೈಯಕ್ತಿಕವಾಗಿ ಹೇಳಿದರೆ ಸಾಕಾಗಿದೆ. ಪದೇ ಪದೇ ಕೇಂದ್ರ ಸರ್ಕಾರದ ಮೇಲೆ ಹೇಳುವುದು ಸರಿಯಲ್ಲ ಎಂದರು.ದಿಢೀರ್‌ ಬೆಲೆ ಏರಿಕೆ ಮಾಡಿದ್ದಾರೆ. ನಾನು ಒಬ್ಬ ಕೇಂದ್ರ ಮಂತ್ರಿಯಾಗಿ ಯಾವ ಮಟ್ಟಕ್ಕೆ ಮಾತನಾಡಬೇಕೋ ಅದನ್ನು ಮಾತ್ರ ಮಾತನಾಡ್ತೀನಿ. ಸಮಂಜಸವಾಗಿದಿಯೇ ಎಂಬುದನ್ನು ಅವರೇ ತೀರ್ಮಾನ ಮಾಡಲಿ. ಇದು ಇಡೀ ದೇಶ ಮಾಡುತ್ತಿರುವ ಯೋಗ ದಿನಾಚರಣೆ, ಇಬ್ಬರೂ ಸಚಿವರು ಇರಬೇಕಿತ್ತು. ಫೆಡರಲ್ ಸಿಸ್ಟಮ್‌ನಲ್ಲಿ ಇರೋದು ನಾವು. ಇದು ನಾವೆಲ್ಲ ಮಾಡುತ್ತಿರುವುದು, ಇಡೀ ವಿಶ್ವ ಮಾಡುತ್ತಿರುವುದು. ಅವರಿಬ್ಬರಿಗೂ ಆರೋಗ್ಯ ತುಂಬಾ ಚೆನ್ನಾಗಿದೆ, ಅಂತಾ ಕಾಣಿಸುತ್ತೆ. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು.

ಚಿನ್ನೇನಹಳ್ಳಿಯಲ್ಲಿ ಮೃತಪಟ್ಟಿರುವವರಿಗೆ ಪರಿಹಾರವನ್ನು ತಕ್ಷಣವೇ ಮಾಡಿಸುತ್ತೇನೆ. ಅದಕ್ಕಿಂತ ದೊಡ್ಡ ಕೆಲಸ ಯಾವುದೂ ಇಲ್ಲ. ಸದ್ಯದಲ್ಲೇ ಸಂಸದರ ಪ್ರಮಾಣ ವಚನ ಸಮಾರಂಭವಿದೆ. ಅದಾದ ಬಳಿಕ ಚಟುವಟಿಕೆ ಶುರುವಾಗುತ್ತದೆ ಎಂದರು.