ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ನೀಡದಿದ್ದರೆ ಕ್ರಮ

| Published : Jul 22 2024, 01:24 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಮಾಹಿತಿಯನ್ನು ಬಿಇಒ, ಸಿಡಿಪಿಒ, ಡಿಸಿಪಿಒ ಹಾಗೂ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ನೀಡಬೇಕು. ಇಲ್ಲದಿದ್ದರೆ ಶಾಲೆಯ ಮುಖೋಪಾಧ್ಯಾಯರು, ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಮಾಹಿತಿಯನ್ನು ಬಿಇಒ, ಸಿಡಿಪಿಒ, ಡಿಸಿಪಿಒ ಹಾಗೂ ಮಕ್ಕಳ ಕಲ್ಯಾಣ ಸಮಿತಿಗೆ ವರದಿ ನೀಡಬೇಕು. ಇಲ್ಲದಿದ್ದರೆ ಶಾಲೆಯ ಮುಖೋಪಾಧ್ಯಾಯರು, ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಹಾಗೂ ಮಕ್ಕಳ ಕಲ್ಯಾಣ ಸಮಿತಿ ೨೦೨೪-೨೫ನೇ ಸಾಲಿನ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪ್ರತಿ ಶಾಲೆಯಲ್ಲಿ ಓರ್ವ ಮಹಿಳಾ ಶಿಕ್ಷಕರನ್ನು ಕೌನ್ಸಲರ್ ಆಗಿ ನೇಮಿಸಿಕೊಂಡು ಮಕ್ಕಳಿಗೆ ಪೋಕ್ಸೋ ಕಾಯ್ದೆ, ದೌರ್ಜನ್ಯ ಕಾಯ್ದೆ, ಬಾಲ ಕಾರ್ಮಿಕರ ಕುರಿತಾಗಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಬೋಧನೆಯಲ್ಲಿ ಶಿಕ್ಷಕರು ಈ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ದೌರ್ಜನ್ಯಕ್ಕೊಳಗಾದ ಮಕ್ಕಳ ಬಗ್ಗೆ ಗೌಪ್ಯತೆ ಕಾಪಾಡಿಕೊಂಡು ಅವರ ಮಾನಸಿಕ ಆರೋಗ್ಯದ ಸುಧಾರಣೆಗೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.ದತ್ತು ಪಡೆದ ಹಾಗೂ ಸಾರ್ವಜನಿಕ ಸ್ಥಳದಲ್ಲಿ ದೊರೆತ ಅನಾಮಧೇಯ ಮಕ್ಕಳ, ಶಿಶುವಿನ ಮಾಹಿತಿಯನ್ನು ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪ್ರಮುಖ ಇಲಾಖೆಯ ಅಧಿಕಾರಿಗಳು ಕ್ರೀಯಾಶೀಲತೆ ಮೈಗೂಡಿಸಿಕೊಂಡು ಅತ್ಯಂತ ಮುತುರ್ವಜಿಯಿಂದ ಮಕ್ಕಳ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯ ಬಾಲಕಾರ್ಮಿಕರ ಕುರಿತಾಗಿ ಮಾಹಿತಿ ಹೊಂದಿ, ಬಾಲ್ಯ ವಿವಾಹ ಮಾಹಿತಿ ಸಂಗ್ರಹಿಸಬೇಕು. ಬಾಲ ಮಂದಿರದಿಂದ ಬಿಡುಗಡೆಗೊಂಡ ಬಾಲ ಕಾರ್ಮಿಕ ಹಾಗೂ ಬಾಲ್ಯ ವಿವಾಹದಿಂದ ರಕ್ಷಿಸಿದ ಮಕ್ಕಳ ಮೇಲೆ ನಿಗಾವಹಿಸಬೇಕು. ಅವರ ಬಗ್ಗೆ ನಿರಂತರವಾಗಿ ಮಾಹಿತಿಯನ್ನು ಸಂಗ್ರಹಿಸಬೇಕು. ಸಂತ್ರಸ್ತ ಮಕ್ಕಳಿಗೆ ಸರ್ಕಾರದಿಂದ ಸಿಗಬೇಕಾದ ಸವಲತ್ತು, ಸಹಾಯ ಧನವನ್ನು ಆದ್ಯತೆಯ ಮೇರೆಗೆ ಒದಗಿಸುವಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ ಚವ್ಹಾಣ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಸಿ.ವಿ.ಕುಂಬಾರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

-------------------------------------

ಕೋಟ್‌

ದತ್ತು ಪಡೆದ ಹಾಗೂ ಸಾರ್ವಜನಿಕ ಸ್ಥಳದಲ್ಲಿ ದೊರೆತ ಅನಾಮಧೇಯ ಮಕ್ಕಳ, ಶಿಶುವಿನ ಮಾಹಿತಿಯನ್ನು ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪ್ರಮುಖ ಇಲಾಖೆಯ ಅಧಿಕಾರಿಗಳು ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಂಡು ಅತ್ಯಂತ ಮುತುರ್ವಜಿಯಿಂದ ಮಕ್ಕಳ ಮಾಹಿತಿ ಪಡೆದುಕೊಳ್ಳಬೇಕು.ಟಿ.ಭೂಬಾಲನ್‌, ಜಿಲ್ಲಾಧಿಕಾರಿ.