ಸಾರಾಂಶ
ಠಾಣೆಯನ್ನು ಸಂಪೂರ್ಣವಾಗಿ ಮುಖ್ಯ ನಾಲೆಯ ಮೇಲೆಯೇ ನಿರ್ಮಿಸಲಾಗಿದ್ದು, ನಾಲೆಯಲ್ಲಿ ಹೂಳು ತುಂಬಿದೆ. ಕಟ್ಟಡವು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಠಾಣೆಯ ಮುಂದಿನ ರಸ್ತೆಯಲ್ಲಿ ಬೃಹತ್ ವಾಹನ ತೆರಳಿದರೆ ಇಡೀ ಠಾಣೆಯೇ ಅಲುಗಾಡುತ್ತಿದೆ.
ಹುಬ್ಬಳ್ಳಿ:
ಇಲ್ಲಿನ ವಾರ್ಡ್ 66ರಲ್ಲಿ ನಾಲೆಯ ಮೇಲೆ ನಿರ್ಮಿಸಲಾಗಿರುವ, ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿರುವ ಕಮರಿಪೇಟೆ ಪೊಲೀಸ್ ಠಾಣೆಯ ಸ್ಥಳಾಂತರಕ್ಕೆ ಪಾಲಿಕೆ ಮುಂದಾಗಿದೆ. ಧಾರವಾಡದಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.ಈ ಠಾಣೆಯನ್ನು ಸಂಪೂರ್ಣವಾಗಿ ಮುಖ್ಯ ನಾಲೆಯ ಮೇಲೆಯೇ ನಿರ್ಮಿಸಲಾಗಿದ್ದು, ನಾಲೆಯಲ್ಲಿ ಹೂಳು ತುಂಬಿದೆ. ಕಟ್ಟಡವು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಠಾಣೆಯ ಮುಂದಿನ ರಸ್ತೆಯಲ್ಲಿ ಬೃಹತ್ ವಾಹನ ತೆರಳಿದರೆ ಇಡೀ ಠಾಣೆಯೇ ಅಲುಗಾಡುತ್ತಿದೆ. ಇಲ್ಲಿನ ಸಿಬ್ಬಂದಿ ಭಯದಲ್ಲಿಯೇ ಕಾರ್ಯನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಮೇ 28ರಂದು ಕನ್ನಡಪ್ರಭದಲ್ಲಿ "ನಾಲೆ ಹೂಳೆತ್ತಲು ಪೊಲೀಸ್ ಠಾಣೆ ಶೀಘ್ರ ನೆಲಸಮ " ಶೀರ್ಷಿಕೆಯ ಅಡಿ ವಿಶೇಷ ವರದಿ ಪ್ರಕಟಸಲಾಗಿತ್ತು. ಜಯಭಾರತ ವೃತ್ತದಲ್ಲಿರುವ ಪಾಲಿಕೆ ಸಮುದಾಯ ಭವನ ಇಲ್ಲವೇ ಜಿಗಳೂರು ಕಲ್ಯಾಣ ಮಂಟಪ ಈ ಎರಡರಲ್ಲಿ ಒಂದು ಕಡೆ ಠಾಣೆ ಸ್ಥಳಾಂತರಕ್ಕಾಗಿ ಜಾಗ ನಿಗದಿಗೊಳಿಸಲಾಗಿತ್ತು. ಸೋಮವಾರದ ಪಾಲಿಕೆ ಸಭೆಯಲ್ಲಿ ಜಯಭಾರತ ವೃತ್ತದಲ್ಲಿರುವ ಪಾಲಿಕೆ ಸಮುದಾಯ ಭವನಕ್ಕೆ ಠಾಣೆ ಸ್ಥಳಾಂತರಿಸಲು ನಿರ್ಣಯ ಕೈಗೊಳ್ಳಲಾಗಿದೆ.ಕನ್ನಡಪ್ರಭದಲ್ಲಿ ವರದಿ ಪ್ರಕಟವಾದ ಕೆಲ ದಿನಗಳ ನಂತರ ಠಾಣೆ ಸ್ಥಳಾಂತರಕ್ಕೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿತ್ತು. ನಂತರ ಪೊಲೀಸ್ ಆಯುಕ್ತರು ಠಾಣೆ ಸ್ಥಳಾಂತರಕ್ಕೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. ಸೋಮವಾರ ನಡೆದ ಪಾಲಿಕೆ ಸಭೆಯಲ್ಲಿ ಠಾಣೆಯ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.