ಸಾರಾಂಶ
ಚನ್ನಪಟ್ಟಣ: ಚನ್ನಪಟ್ಟಣದ ಜನಸಂಖ್ಯೆ ಆಧಾರದ ಮೇಲೆ ನಗರದ ಸಾರ್ವಜನಿಕ ಆಸ್ಪತ್ರೆಯನ್ನು ಉನ್ನತೀಕರಣ ಮಾಡಬೇಕಿದೆ. ಹತ್ತು ಎಕರೆ ಜಾಗ ಸಿಕ್ಕರೆ ಜನರಲ್ ಮತ್ತು ತಾಯಿ-ಮಗು ಆಸ್ಪತ್ರೆ ಒಂದೇ ಕಡೆ ನಿರ್ಮಿಸಹುದಾಗಿದ್ದು, ಈ ಕುರಿತು ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಕುಂದುಕೊರತೆ ಸಭೆ ನಡೆಸಿದ ಶಾಸಕರು, ತಾಲೂಕಿನಲ್ಲಿ ೨೦ವರ್ಷದ ಹಿಂದಿನ ಜನಸಂಖ್ಯೆಗೂ ಈಗಿನ ಜನಸಂಖ್ಯೆಗೂ ವ್ಯತ್ಯಾಸವಿದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯನ್ನು ಉನ್ನತೀಕರಣ ಮಾಡುವುದು ಅಗತ್ಯ. ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರ ಸಾಕಷ್ಟು ಆಧುನಿಕ ಸವಲತ್ತು ಕಲ್ಪಿಸಿದ್ದು, ಅದನ್ನು ಬಳಸಿಕೊಳ್ಳಲು ಸ್ಥಳಾವಕಾಶದ ಕೊರತೆ ಇದೆ ಎಂದು ಇಲ್ಲಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆ ಪಕ್ಕದಲ್ಲೇ ಇರುವ ಪಶುಗಳ ಆಸ್ಪತ್ರೆ ಹಾಗೂ ಕರಕುಶಲ ಕೇಂದ್ರದ ಸ್ಥಳಾಂತರ ಸಾಧ್ಯವಾದರೆ ಒಟ್ಟಿಗೆ ಜನರಲ್ ಹಾಗೂ ತಾಯಿ-ಮಗು ಆಸ್ಪತ್ರೆ ನಿರ್ಮಿಸಬಹುದು. ಇದಕ್ಕೆ ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ಪ್ರಯತ್ನಿಸಲಾಗುವುದು. ಆಸ್ಪತ್ರೆಯಲ್ಲಿ ನಾಲ್ವರು ವೈದ್ಯರ ಕೊರತೆ ಇದೆ. ಈ ವೈದ್ಯರನ್ನು ಭರ್ತಿ ಮಾಡಿದರೆ, ತಜ್ಞ ವೈದ್ಯರು ತಮ್ಮ ಕೆಲಸ ನಿರ್ವಹಿಸಲು ಅನುಕೂಲವಾಗಲಿದೆ. ಶೀಘ್ರದಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಹಿಂದಿನ ಶಾಸಕರ ನಿರ್ಲಕ್ಷ್ಯ:
ಈ ಹಿಂದಿನ ಶಾಸಕರು ಕಾಲಕಾಲಕ್ಕೆ ಪರಿಶೀಲಿಸಿ ರಕ್ಷಾ ಸಮಿತಿ ರಚಿಸದ ಕಾರಣ ಸಮಸ್ಯೆಗಳಾಗಿದೆ. ಆದಷ್ಟು ಬೇಗ ಆಸ್ಪತ್ರೆ ರಕ್ಷಾ ಸಮಿತಿ ರಚನೆಗೆ ಕ್ರಮ ಕೈಗೊಳ್ಳಲಾಗುವುದು. ಹಂತಹಂತವಾಗಿ ಆಸ್ಪತ್ರೆಯಲ್ಲಿನ ಎಲ್ಲ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಾಗುವುದು ಎಂದರು.ಇದೇ ವೇಳೆ ಶಾಸಕರು, ತಾಲೂಕಿನಲ್ಲಿ ಎಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳಿದೆ. ವೈದ್ಯರ ಕೊರತೆ, ಸವಲತ್ತುಗಳ ಮಾಹಿತಿ ಪಡೆದರು. ಮುದುಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆದ್ಯತೆ ಮೇರೆಗೆ ನಿರ್ಮಾಣ ಮಾಡಿ, ಇದರಿಂದ ಬೆಂ-ಮೈ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲು ಅನುಕೂಲವಾಗುತ್ತದೆ ಎಂದು ಟಿಎಚ್‌ಒಗೆ ಸೂಚನೆ ನೀಡಿದರು.
ಇದೇ ವೇಳೆ ಶಾಸಕರು ಇಲ್ಲಾ ವಾರ್ಡ್‌ಗಳನ್ನು ಪರಿಶೀಲಿಸಿದರು. ಒಳ ರೋಗಿಗಳ ಆರೋಗ್ಯ ವಿಚಾರಿಸಿ, ಆಸ್ಪತ್ರೆಯಲ್ಲಿ ನೀಡುತ್ತಿರುವ ಸೌಲಭ್ಯ ಕುರಿತು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಡಿಎಚ್‌ಒ ನಿರಂಜನ್, ಟಿಎಚ್‌ಒ ಕೆ.ಸಿ.ರಾಜು, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಜಗದೀಶ್, ರಾಜ್‌ಕುಮಾರ್, ಡಾ. ಮಹೇಂದ್ರ ಇತರರಿದ್ದರು.ಬಾಕ್ಸ್..................
ಸಾರ್ವಜನಿಕರಿಂದ ದೂರು:ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಭೆ ನಡೆಸಿದ ಶಾಸಕ ಸಿ.ಪಿ.ಯೋಗೇಶ್ವರ್ ಮುಂದೆ ಸಾರ್ವಜನಿಕರು ದೂರುಗಳ ಸುರಿಮಳೆ ಸುರಿಸಿದರು. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಮಧ್ಯಾಹ್ನದ ನಂತರ ಕೆಲ ವೈದ್ಯರು ಆಸ್ಪತ್ರೆಯಲ್ಲಿ ಸಿಗುವುದಿಲ್ಲ. ಹೊರಗಿನ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಲು ಸೂಚಿಸುತ್ತಾರೆ. ಕೆಲವು ಔಷಧಗಳನ್ನು ಸಹ ಹೊರಗಿನಿಂದ ತರಿಸುತ್ತಾರೆ ಎಂದೆಲ್ಲಾ ದೂರಿದರು. ಇದರ ಕುರಿತು ಗಮನಹರಿಸುವಂತೆ ಯೋಗೇಶ್ವರ್ ಅಧಿಕಾರಿಗಳಿಗೆ ಸೂಚಿಸಿದರು.
ಪೊಟೋ೬ಸಿಪಿಟಿ೧:ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಕುಂದುಕೊರತೆ ಸಭೆ ನಡೆಸಿದರು.
ಪೊಟೋ೬ಸಿಪಿಟಿ೧:ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವಾರ್ಡ್‌ಗಳಿಗೆ ಶಾಸಕ ಯೋಗೇಶ್ವರ್ ಭೇಟಿ ನೀಡಿ ಪರಿಶೀಲಿಸಿದರು.