ಕೋಲಾರದಲ್ಲಿ ಶಿಸ್ತು ಉಲ್ಲಂಘಿಸಿದ್ರೆ ಕ್ರಮ: ಡಿಕೆಶಿ

| Published : Mar 31 2024, 02:08 AM IST / Updated: Mar 31 2024, 08:48 AM IST

DK Shivakumar
ಕೋಲಾರದಲ್ಲಿ ಶಿಸ್ತು ಉಲ್ಲಂಘಿಸಿದ್ರೆ ಕ್ರಮ: ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ಕೋಲಾರ ವಿಚಾರದಲ್ಲಿ ಕೆ.ಎಚ್.ಮುನಿಯಪ್ಪ ಹಾಗೂ ಕೆ.ಆರ್‌.ರಮೇಶ್‌ ಕುಮಾರ್‌ ಇಬ್ಬರ ಜತೆಗೂ ಮಾತನಾಡಿದ್ದೇನೆ. ಇನ್ನು ಯಾರೂ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ. ಯಾರೇ ಶಿಸ್ತು ಉಲ್ಲಂಘಿಸಿದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು :  ಕೋಲಾರ ವಿಚಾರದಲ್ಲಿ ಕೆ.ಎಚ್.ಮುನಿಯಪ್ಪ ಹಾಗೂ ಕೆ.ಆರ್‌.ರಮೇಶ್‌ ಕುಮಾರ್‌ ಇಬ್ಬರ ಜತೆಗೂ ಮಾತನಾಡಿದ್ದೇನೆ. ಇನ್ನು ಯಾರೂ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ. ಯಾರೇ ಶಿಸ್ತು ಉಲ್ಲಂಘಿಸಿದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ಬಣಗಳಿಗೂ ಟಿಕೆಟ್‌ ನೀಡದೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ನೀಡಿದ್ದೇವೆ. ಕೋಲಾರದಲ್ಲಿ ಯಾವ ಒಳ ಏಟೂ ಇರುವುದಿಲ್ಲ. ಸೀಟು ಗೆಲ್ಲುವುದಕ್ಕಿಂತ ಪಕ್ಷದ ಶಿಸ್ತು ಬಹಳ ಮುಖ್ಯ. ಈಗಾಗಲೇ ಶಿಸ್ತು ಉಲ್ಲಂಘಿಸಿದವರು ಕ್ಷಮೆ ಕೋರಿದ್ದಾರೆ. ಇನ್ನು ಮುಂದೆ ಯಾರೇ ಶಿಸ್ತು ಉಲ್ಲಂಘಿಸಿದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಗುಂಪು ರಾಜಕಾರಣಕ್ಕೆ ನಮ್ಮಲ್ಲಿ ಅವಕಾಶ ಇಲ್ಲ. ಶಾಸಕರು, ಸಚಿವರು ಯಾರೇ ಆದರೂ ಎಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕು. ಮಾಜಿ ಮೇಯರ್‌ ಪುತ್ರ ಗೌತಮ್‌ ಪಕ್ಷದ ಸಾಮಾನ್ಯ ಕಾರ್ಯಕರ್ತ. ಪಕ್ಷ ಹೊಸ ಮುಖಕ್ಕೆ ಅವಕಾಶ ನೀಡಿದ್ದು, ಖಂಡಿತ ಗೆಲ್ಲಲಿದ್ದಾರೆ ಎಂದು ಹೇಳಿದರು.ಪಕ್ಷದ ನಿರ್ಧಾರಕ್ಕೆ ಬದ್ಧ: ಮುನಿಯಪ್ಪಪ್ರಯತ್ನ ಮಾತ್ರ ನಮ್ಮದು. ಕಾಂಗ್ರೆಸ್‌ ಹೈಕಮಾಂಡ್‌ ಯಾರಿಗೆ ಟಿಕೆಟ್ ನೀಡಿದರೂ ನಾನು ಸ್ವಾಗತಿಸುತ್ತೇನೆ ಎಂದು ಹಿಂದಿನಿಂದಲೂ ನಾನು ಹೇಳುತ್ತಿದ್ದೇನೆ ಎಂದು ಸಚಿವ ಕೆ. ಎಚ್‌. ಮುನಿಯಪ್ಪ ತಿಳಿಸಿದ್ದಾರೆ.

ಮುನಿಯಪ್ಪ ಅವರು, ಕೇರಳದ ಕೊಚ್ಚಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ಸಾದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕೋಲಾರ ಟಿಕೆಟ್‌ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಪಕ್ಷಕ್ಕೆ ಸಂಕಷ್ಟ ಬಂದಾಗ ನಾವೆಲ್ಲರೂ ಸಹಕರಿಸಬೇಕು ಎಂದರು.

ನನ್ನ 30 ವರ್ಷದ ರಾಜಕೀಯದಲ್ಲಿ ಇಂತಹ ಪರಿಸ್ಥಿತಿಗಳು ಬಹಳಷ್ಟು ಬಾರಿ ಬಂದಿವೆ. ಇವೆಲ್ಲ ರಾಜಕೀಯದಲ್ಲಿ ಸಹಜ. ಕಾಂಗ್ರೆಸ್‌ ಪಕ್ಷ ಒಂದು ನಿಲುವು ತೆಗೆದುಕೊಂಡಾಗ ಅದಕ್ಕೆ ಬದ್ಧರಾಗಿ ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸುವುದೇ ನಮ್ಮ ಗುರಿ. ನನಗೆ ಯಾವುದೇ ರೀತಿಯ ಬೇಸರವಿಲ್ಲ. ಇಲ್ಲಿ ಸ್ವಪ್ರತಿಷ್ಠೆಗಳಾವುವು ಇಲ್ಲ. ಪಕ್ಷ ಹೇಳಿದ ರಾಜ್ಯದ ಯಾವುದೇ ಕಡೆ ನಾನು ಚುನಾವಣಾ ಪ್ರಚಾರ ಮಾಡುತ್ತೇನೆ ಎಂದರು.

ನಾನು ಚುನಾವಣೆಯಲ್ಲಿ ನಿಲ್ಲೋದಿಲ್ಲ ಎಂದು ತೀರ್ಮಾನ ಮಾಡಿದ್ದೇನೆ. ಅದರಂತೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜನತೆಗೆ ಕೆಲವು ಆಶ್ವಾಸನೆ ಕೊಟ್ಟಿದ್ದೇನೆ. ಅದರಂತೆ ಕೆಲಸ ಮಾಡುತ್ತೇನೆ. ನಾನು ಮಾತು ಬದಲಾಯಿಸಲ್ಲ ಎಂದು ಹೇಳಿದರು.ಪಕ್ಷಕ್ಕಾಗಿ ಯಾವುದೇ ತ್ಯಾಗಕ್ಕೆ ಮುನಿಯಪ್ಪ ಸಿದ್ಧ: ಸುರ್ಜೇವಾಲಾಕಾಂಗ್ರೆಸ್‌ ಪಕ್ಷದಿಂದ ಏಳು ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಅವರು ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದಿದ್ದಾರೆ. ಹೀಗಾಗಿ ಒಟ್ಟಾಗಿ ಚುನಾವಣೆ ಎದುರಿಸಿ ಪಕ್ಷದ ಅಭ್ಯರ್ಥಿ ಕೆ.ವಿ.ಗೌತಮ್‌ ಅವರನ್ನು ಗೆಲ್ಲಿಸಿಕೊಂಡು ಬರಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದ್ದಾರೆ.

ಮುನಿಯಪ್ಪ ಅವರ ಅಳಿಯನಿಗೆ ಟಿಕೆಟ್‌ ತಪ್ಪಿದ ಬೆನ್ನಲ್ಲೇ ಅವರನ್ನು ವಿಶ್ವಾಸಕ್ಕೆ ಪಡೆಯುವ ನಿಟ್ಟಿನಲ್ಲಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಸಚಿವ ಮುನಿಯಪ್ಪ ಅವರು ಗೆಲ್ಲುವ ತಂತ್ರಗಾರಿಕೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಕ್ಷೇತ್ರವನ್ನು ಗೆಲ್ಲುವ ನಿಟ್ಟಿನಲ್ಲಿ ದಲಿತ ಎಡಗೈ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದರು. ಇದರ ಜತೆಗೆ ಎಲ್ಲರೊಂದಿಗೂ ಚರ್ಚಿಸಿ ಟಿಕೆಟ್‌ ಅಂತಿಮಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಕೋಲಾರ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ನಾಯಕರ ಅಭಿಪ್ರಾಯ ಪಡೆದಿದ್ದೇವೆ. ಕೇಂದ್ರ ಚುನಾವಣಾ ಸಮಿತಿ ಯಾವುದೇ ಅಭ್ಯರ್ಥಿ ಆಯ್ಕೆ ಮಾಡಿದರೂ ಕೆಲಸ ಮಾಡುವುದಾಗಿ ಹೇಳಿದ್ದರು. ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗೊತ್ತಿ ಅಭ್ಯರ್ಥಿಯನ್ನು ಗೆಲ್ಲಿಸುವುದಾಗಿ ಹೇಳಿದ್ದಾರೆ. ಮುನಿಯಪ್ಪ ಅವರು ಪಕ್ಷಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧ ಎಂದಿರುವುದಾಗಿ ತಿಳಿಸಿದ್ದಾರೆ.