ಬ್ಯಾನರ್ ಗಲಾಟೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ರೆಡ್ಡಿ ಹಾಗೂ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು.
ರಾಜ್ಯ ಸರ್ಕಾರ ಸೂಕ್ತ ತನಿಖೆ ಕೈಗೊಳ್ಳದಿದ್ದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ
ಬಳ್ಳಾರಿ: ರಾಜ್ಯದ ಆಡಳಿತ ಸತ್ತು ಹೋಗಿದೆ. ಬ್ಯಾನರ್ ಗಲಾಟೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರ ರೆಡ್ಡಿ ಹಾಗೂ ಅವರ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಇಲ್ಲವಾದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ. ರೆಡ್ಡಿ ಅವರಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡದಿದ್ದಲ್ಲಿ ಕೇಂದ್ರ ಗೃಹ ಸಚಿವರೊಂದಿಗೆ ಚರ್ಚೆ ನಡೆಸಿ ಝಡ್ ಶ್ರೇಣಿಯ ಭದ್ರತೆ ಕೊಡಿಸಲಾಗುವುದು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.ಕಾಂಗ್ರೆಸ್ ಹೈಕಮಾಂಡ್ ಕೇರಳದಲ್ಲಿದೆ. ಸದ್ಯ ಸಿದ್ದರಾಮಯ್ಯ ಗಾಳಿಪಟವಿದ್ದಂತೆ. ಯಾವಾಗ ಅವರ ಬಾಲ ಕಿತ್ತುಕೊಂಡು ಹೋಗುತ್ತದೆಯೋ ಗೊತ್ತಿಲ್ಲ. ಡಿ.ಕೆ. ಶಿವಕುಮಾರ ಮುಖ್ಯಮಂತ್ರಿ ಆಗಬೇಕೆಂಬ ಉದ್ದೇಶದಿಂದ ಕುರ್ಚಿಗಾಗಿ ಬಡಿದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಾಲಿಕೆಯ ಆಯುಕ್ತರಾಗಲಿ, ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಲಿ ಏನು ಕ್ರಮ ಕೈಗೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು.
ಬ್ಯಾನರ್ ಗಲಾಟೆಯಿಂದ ಶ್ರೀರಾಮುಲು, ಜನಾರ್ದನ ರೆಡ್ಡಿ ಒಂದಾಗಿದ್ದಾರೆ. ಬಳ್ಳಾರಿಯಲ್ಲಿ ನಡೆದ ಘಟನೆಯಿಂದಾಗಿ ವೀಳ್ಯೆದೆಲೆ ಕೊಟ್ಟು ರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಒಂದು ಮಾಡಿದಂತಾಗಿದೆ ಎಂದರು.ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ವಿಜಯೋತ್ಸವದಲ್ಲಿ ಹತ್ತು ಜನ ಮೃತಪಟ್ಟಿದ್ದು, ಆ ವೇಳೆ ಪೊಲೀಸ್ ಅಧಿಕಾರಿ ದಯಾನಂದ ಅವರನ್ನು ಬಲಿಪಶು ಮಾಡಲಾಗಿತ್ತು. ಬಳ್ಳಾರಿ ಬ್ಯಾನರ್ ಗಲಾಟೆಯಲ್ಲಿ ಎಸ್ಪಿ ಅವರನ್ನು ಬಲಿ ಕೊಡಲಾಗಿದೆ. ಇದು ಪೊಲೀಸರ ಆತ್ಮಸ್ಥೈರ್ಯ ಕುಂದಿಸುವ ಕೆಲಸ. ಈ ಎಲ್ಲವನ್ನು ಕೇಂದ್ರ ಸರ್ಕಾರ ತೀಕ್ಷ್ಣವಾಗಿ ಗಮನಿಸುತ್ತಿದೆ. ರಾಜ್ಯ ಸರ್ಕಾರ ಸೂಕ್ತ ತನಿಖೆ ಕೈಗೊಳ್ಳದಿದ್ದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲಿದೆ. ಈ ಕುರಿತು ಕೇಂದ್ರ ಗೃಹ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.