ಸಾರಾಂಶ
ತಾಲೂಕಿನಾದ್ಯಂತ ಬರದ ಛಾಯೆ ಆವರಿಸಿದ್ದು, ಜನ ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಎ.ಮಂಜು ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನಾದ್ಯಂತ ಬರದ ಛಾಯೆ ಆವರಿಸಿದ್ದು, ಜನ ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಎ.ಮಂಜು ಎಚ್ಚರಿಕೆ ನೀಡಿದರು.
ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಟಾಸ್ಕ್ ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ತಾಲೂಕಿನ 36 ಗ್ರಾಪಂ ವ್ಯಾಪ್ತಿಯಲ್ಲಿನ 80ಕ್ಕೂ ಅಧಿಕ ಗ್ರಾಮಗಳಲ್ಲಿ ಮುಂದೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಬಹುದು ಎಂದು ಮಾಹಿತಿ ನೀಡಿದ್ದೀರಿ, ಇನ್ನೂ ಮೂರು ತಿಂಗಳು ಬೇಸಿಗೆಯ ಬಿಸಿಲಿನ ತಾಪಕ್ಕೆ ಕೆರೆಗಳಲ್ಲಿ ನೀರಿನ ಪ್ರಮಾಣ ಇಳಿದು ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗಲಿದೆ. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಮುನ್ನೆಚ್ಚರಿಕೆಯನ್ನು ನಿರ್ವಹಿಸಿದರೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಬೇಕಿದೆ’ ಎಂದು ಹೇಳಿದರು.
ತಾಲೂಕಿನ ಎರಡು ಕಡೆ ಕಾವೇರಿ, ಹೇಮಾವತಿ ನದಿಗಳು ಹರಿಯುತ್ತಿದ್ದು, ಆ ಭಾಗದಲ್ಲಿನ ಕೆರೆ, ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಇದೆ. ಆದರೂ ಕೂಡ ಕೆರೆಗಳಿಂದ, ಹೊಳೆಯಿಂದ ರೈತರು ಕೃಷಿಗೆ ಪಂಪ್ ಮೂಲಕ ನೀರು ಹಾಯಿಸುವುದು ಕಂಡು ಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈಗಾಗಲೇ ತಾಲೂಕಿನಾದ್ಯಂತ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಎಲ್ಲಿ ಕೊಳವೆ ಬಾವಿ ಅಗತ್ಯವಿದೆಯೋ ಅಲ್ಲಿ ಜೆಜೆಎಂ ವತಿಯಿಂದ ಪ್ರಯೋಜನ ಪಡೆದುಕೊಳ್ಳಿ. ಈ ಯೋಜನೆ ಮುಂದಿನ ವರ್ಷದಲ್ಲಿ ಕಾರ್ಯಗತಗೊಳ್ಳಲಿದೆ. ನೀರಿನ ಲಭ್ಯತೆ ಕಡಿಮೆ ಇರುವ ಕೊಳವೆ ಬಾವಿಗೆ ರೀ ರಿಗ್ ಮಾಡಿಸಲು ಅವಕಾಶವಿದೆ.
ಅಲ್ಲದೆ ಖಾಸಗಿ ಕೊಳವೆ ಬಾವಿಯನ್ನು ವಶಕ್ಕೆ ಪಡೆದು ಅಲ್ಲಿಂದಲೂ ಸಹ ಜನರಿಗೆ ನೀರು ಸರಬರಾಜು ಮಾಡುವ ಅವಕಾಶವಿದೆ. ಸ್ಥಳೀಯ ರೈತರನ್ನು ಸಂಪರ್ಕಿಸಿ ಜನರಿಗೆ ನೀರು ಕೊಡುವ ಕೆಲಸವನ್ನು ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ತಹಸೀಲ್ದಾರ್, ಇಒ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಸರ್ಕಾರದ ನಿಯಮಾನುಸಾರ ಸರ್ಕಾರಿ ಅಥವಾ ಖಾಸಗಿ ವ್ಯಕ್ತಿಗಳು ಕೊಳವೆ ಬಾವಿ ಕೊರೆಸುವ ವೇಳೆ 800 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕಿದೆ. ಈ ನಿಯಮವನ್ನು ಉಲ್ಲಂಘನೆ ಮಾಡಿರುವ ರೈತರ ಕೊಳವೆ ಬಾವಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ.
ಅಲ್ಲದೆ ಹೊಸದಾಗಿ ಕೊಳವೆ ಬಾವಿ ಕೊರೆಸುವ ರೈತರು ಹಾಗೂ ಸರ್ಕಾರಿ ಯೋಜನೆಯ ಬಾವಿಗಳನ್ನು ನಿಯಮಾನುಸಾರ ಕೈಗೊಳ್ಳಲು ಅಧಿಕಾರಿಗಳು ಗಮನಹರಿಸಬೇಕು ಎಂದು ಹೇಳಿದರು.
ತಾಲೂಕನ್ನು ಈಗಾಗಲೇ ಬರ ಎಂದು ಸರ್ಕಾರ ಘೋಷಣೆ ಮಾಡಿದೆ. ಶೇ.50ರಷ್ಟು ಕೆರೆಗಳಲ್ಲಿ ನೀರಿಲ್ಲದಿರುವುದು ಕಂಡು ಬಂದಿದೆ. ಇದರಿಂದ ಮುಂದೆ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗಲಿದೆ. ಈ ಸಲುವಾಗಿ ಗಂಗನಾಳು ಏತನೀರಾವರಿ ಯೋಜನೆ ಮೂಲಕ ಒಂದಷ್ಟು ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದರೆ ಅನುಕೂಲವಾಗಲಿದೆ ಎಂದರು.
ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರು ಪೂರೈಕೆ, ಪಂಪ್‌ಗಳಿಗೆ ಅಗತ್ಯವಿರುವ ವಿದ್ಯುತ್ ಪೂರೈಕೆಯನ್ನು ಕಡ್ಡಾಯವಾಗಿ ಮಾಡಬೇಕಿದೆ. ಅಲ್ಲದೆ ಟಿಸಿ ಅವಶ್ಯವಿರುವ ಕಡೆ ಕೂಡಲೇ ಅಳವಡಿಸಿ. ರೈತರ ಪಂಪ್‌ಸೆಟ್‌ಗಳಿಗೂ ವಿದ್ಯುತ್ ಸಂಪರ್ಕವನ್ನು ಕಲ್ಪಿಸಬೇಕಿದೆ ಎಂದು ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಇಒ ಡಾ.ಅಶೋಕ್, ಹೊಳೆನರಸೀಪುರ ಇಒ, ಎಲ್ಲಾ ಗ್ರಾಪಂ ಪಿಡಿಒ, ವಿವಿಧ ಇಲಾಖೆ ಅಧಿಕಾರಿಗಳು, ಎಂಜಿನಿಯರ್‌ಗಳು ಹಾಜರಿದ್ದರು.ಅರಕಲಗೂಡಿನ ತಾಪಂ ಸಭಾಂಗಣದಲ್ಲಿ ಮಂಗಳವಾರ ಕುಡಿಯುವ ನೀರಿನ ಟಾಸ್ಕ್ ಪೋರ್ಸ್ ಸಭೆ ಶಾಸಕ ಮಂಜು ಅಧ್ಯಕ್ಷತೆಯಲ್ಲಿ ನಡೆಯಿತು.