ಸಾರಾಂಶ
ರಾಮನಗರ: ತಾಲೂಕಿನ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಿ ಕುಡಿಯುವ ನೀರು ಕೊಡದಿದ್ದರೆ ಕ್ರಮ ಜರುಗಿಸುವುದಾಗಿ ಶಾಸಕ ಇಕ್ಬಾಲ್ ಹುಸೇನ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕಿನ ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಮದಲ್ಲಿ ಮಂಗಳವಾರ ಜನಸಂಪರ್ಕ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಪಿಡಿಒ ಕುಮಾರ್, ದಾಸರಹಳ್ಳಿಯಲ್ಲಿ ನೀರಿನ ಸಮಸ್ಯೆಯಿದೆ. ಜೆಜೆಎಂ ಸಂಪರ್ಕ ಕಲ್ಪಿಸಿದರೆ ನೀರಿನ ಸಮಸ್ಯೆ ಕಡಿಮೆಯಾಗಲಿದೆ. ಕೆಲವೆಡೆ ಈ ಕಾಮಗಾರಿಗಳು ಅಪೂರ್ಣವಾಗಿವೆ ಎಂದು ಶಾಸಕರ ಗಮನಕ್ಕೆ ತಂದರು.ಇದರಿಂದ ಕುಪಿತಗೊಂಡ ಶಾಸಕ ಇಕ್ಬಾಲ್ ಹುಸೇನ್, ತುಂಬೇನಹಳ್ಳಿ, ತಮ್ಮನಾಯ್ಕನಹಳ್ಳಿ, ಕೂನಗಲ್, ಹನುಮಂತೇ ಗೌಡನದೊಡ್ಡಿ ಗ್ರಾಮಗಳಲ್ಲಿ ಜೆಜೆಎಂ ಕೆಲಸ ಅಪೂರ್ಣವಾಗಿರುವುದಕ್ಕೆ ಗರಂ ಆದರು. ತುರ್ತಾಗಿ ಕೆಲಸ ಪೂರ್ಣಗೊಳಿಸಿ ಜನರಿಗೆ ನೀರು ಕೊಡದಿದ್ದರೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ. ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಎದುರಾಗದಂತೆ 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಕ್ರಮವಹಿಸುವಂತೆ ಎಂದು ಸೂಚನೆ ನೀಡಿದರು.
ನರೇಗಾ ಯೋಜನೆ ಮೂಲಕ ಪ್ರತಿಯೊಬ್ಬರಿಗೂ ಸವಲತ್ತು ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಿ, ಜನರಿಗೆ ನೀವು ಸವಲತ್ತು ಕೊಡದಿದ್ದರೆ ಜನರು ಏಕೆ ತೆರಿಗೆ ನೀಡಬೇಕು ಎಂದು ಗ್ರಾಪಂ ಅಧಿಕಾರಿಗಳನ್ನು ಶಾಸಕರು ತರಾಟೆ ತೆಗೆದುಕೊಂಡರು.ದಲ್ಲಾಳಿಗಳ ಹಾವಳಿ ಯಿಲ್ಲದೆ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೇರವಾಗಿ ತಲುಪಿಸಿದ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷವಾಗಿದೆ. ರಾಜ್ಯದಲ್ಲಿ ನುಡಿದಂತೆ ನಡೆಯುತ್ತಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರವಾಗಿದೆ. ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ 1.70 ಕೋಟಿ ರೂ ವೆಚ್ಚದ ಅಭಿವೃದ್ಧಿಗಳನ್ನು ಕೈಗೊಳ್ಳ ಲಾಗಿದೆ ಎಂದರು. ಇದೀಗ ಮತ್ತೆ 2.36 ಕೋಟಿ ರು. ಕೆಲಸಕ್ಕೆ ಚಾಲನೆ ನೀಡುತ್ತಿದ್ದೇನೆ ಎಂದು ಹೇಳಿದರು.
ನಿವೇಶನ ರಹಿತರಿಗೆ ಜಾಗ ನೀಡಲು ಲಭ್ಯವಿರುವ ಗೋಮಾಳವನ್ನು ಕಂದಾಯ ಅಧಿಕಾರಿಗಳು ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಬಡವರಿಗೆ ನಿವೇಶನಕ್ಕೆ ಜಾಗ ಮೀಸಲಿರಿಸಲು 8 ಎಕರೆ ಜಾಗದ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಕ್ರಮ ವಹಿಸಿ ನಿಮ್ಮ ಸೇವೆಗೆ ಸದಾ ಸಿದ್ದನಿರುತ್ತೇನೆ. ನೀವು ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಕೆಲಸದತ್ತ ಹೆಚ್ಚು ಗಮನಹರಿಸಿ, ಈ ಭಾಗದ ಕೆರೆಗಳನ್ನು ತುಂಬಿಸಿ ರೈತರ ಬದುಕನ್ನು ಹಸನಾಗಿಸಲು ಶ್ರಮಿಸುತ್ತಿದ್ದೇನೆ. ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಇಕ್ಬಾಲ್ ಹುಸೇನ್ ಹೇಳಿದರು.ಕಾರ್ಯಕ್ರಮದಲ್ಲಿ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳಿಗೆ ಇ-ಸ್ವತ್ತು ಪತ್ರಗಳನ್ನು ಶಾಸಕರು ವಿತರಿಸಿದರು. ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ರಾಜು, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಎಚ್.ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಹುಲಿಕೆರೆ ಗುನ್ನೂರು ಗ್ರಾಪಂ ಅಧ್ಯಕ್ಷ ಗಿರೀಶ್, ಹುಣಸನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಸಿದ್ದಮ್ಮ ಸದಸ್ಯರಾದ ಸುನೀತಾಬಾಯಿ ಮುಖಂಡ ರಾದ ಅಪ್ಪಾಜಿ, ವಾಸು, ರಾಮಣ್ಣ, ತಾಪಂ ಇಓ ಪೂರ್ಣಿಮಾ, ಪಿಡಿಒ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
8ಕೆಆರ್ ಎಂಎನ್ 2.ಜೆಪಿಜಿರಾಮನಗರ ತಾಲೂಕಿನ ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಮದಲ್ಲಿ ಮಂಗಳವಾರ ಜನಸಂಪರ್ಕ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿದರು.