ಪರಿಹಾರ ದೊರೆಯದಿದ್ದರೆ ಕ್ರಮ: ಲೋಕಾಯುಕ್ತ ಡಿವೈಎಸ್ಪಿ

| Published : Sep 19 2024, 01:57 AM IST

ಸಾರಾಂಶ

ಬಳ್ಳಾರಿ ಕಚೇರಿಯಲ್ಲಿ ಕೇಳಿದರೆ ಕುರುಗೋಡು ಕಚೇರಿಗೆ ಕಳಿಸಿದೆ, ಅಲ್ಲಿ ಮಾಹಿತಿ ದೊರೆಯುತ್ತದೆ

ಕುರುಗೋಡು: ಅರ್ಜಿದಾರರ ಸಮಸ್ಯೆಗೆ ಮುಂದಿನ ಸಭೆಯೊಳಗೆ ಪರಿಹಾರ ದೊರೆಯದಿದ್ದರೆ ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ್ ಕಂದಾಯ ಇಲಾಖೆ ಸಿಬ್ಬಂದಿಗೆ ತಾಕೀತು ಮಾಡಿದರು.

ತಾಲೂಕಿನ ಸೋಮಸಮುದ್ರ ಗ್ರಾಮದ ಸರ್ವೆ ನಂ.೬೦೨/ಎಚ್.೩ ಜಮೀನಿನ ಹಕ್ಕುಬದಲವಣೆಗೆ ಸಂಬಂಧಿಸಿದ ದಾಖಲೆ ನೀಡುವಂತೆ ರೈತ ನಾಗೇಶ್ವರ ರೆಡ್ಡಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಬಳ್ಳಾರಿ ಕಚೇರಿಯಲ್ಲಿ ಕೇಳಿದರೆ ಕುರುಗೋಡು ಕಚೇರಿಗೆ ಕಳಿಸಿದೆ, ಅಲ್ಲಿ ಮಾಹಿತಿ ದೊರೆಯುತ್ತದೆ ಎಂದು ಹೇಳುತ್ತಿದ್ದರು. ಕುರುಗೋಡಿನಲ್ಲಿ ಕೇಳಿದರೆ ಬಳ್ಳಾರಿಯಿಂದ ಇನ್ನು ದಾಖಲೆಗಳು ಬಂದಿಲ್ಲ ಎಂದು ೧೮ ತಿಂಗಳಿಂದ ಹಾರಿಗೆ ಉತ್ತರ ನೀಡುತ್ತಿದ್ದಾರೆ. ನಮ್ಮ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಿ ಎಂದು ರೈತ ನಾಗೇಶ್ವರ ರೆಡ್ಡಿ ಲೋಕಾಯುಕ್ತ ಪೊಲೀಸರ ಕುಂದುಕೊರತೆ ಸಭೆಯಲ್ಲಿ ಅರ್ಜಿ ಸಲ್ಲಿಸಿದ್ದರು.

ಬುಧವಾರ ಜರುಗಿದ ಸಭೆಯಲ್ಲಿ ಈ ವಿಷಯ ತೀವ್ರ ಚರ್ಚೆಗೆ ಗ್ರಾಸವಾಯಿತು. ಕಂದಾಯ ಇಲಾಖೆ ಮತ್ತು ಭೂಮಾಪನ ಇಲಾಖೆ ಅಧಿಕಾರಿಯಳು ಅರ್ಜಿದಾರರಿಗೆ ದಾಖಲೆಗಳಿಲ್ಲ ಎಂದು ಹಿಂಬರಹ ನೀಡಿ ಕೈತೊಳೆದುಕೊಂಡರೆ ದಾಖಲೆಗಳ ಕೊಠಡಿಯಲ್ಲಿ ಪರಿಶೀಲಿಸಿ ಸ್ವಯಂ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಾಲೂಕಿನ ಯಲ್ಲಾಪುರ ಗ್ರಾಮದ ಗಾದಿಲಿಂಗಪ್ಪ ಅವರ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವಲ್ಲಿ ಬೇಜವಾಬ್ದಾರಿ ತೋರಿದ ಕಂದಾಯ ಇಲಾಖೆ ಸಿಬ್ಬಂದಿಗೆ ಮತ್ತು ಪಟ್ಟಣಸೆರಗು ಗ್ರಾಮದ ತಿಪ್ಪೇರುದ್ರ ಗೌಡ ನೀಡಿದ ಚರಂಡಿ ಸಮಸ್ಯೆ ಕುರಿತು ತಾಲ್ಲೂಕು ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡರು. ಮುಂದಿನ ಸಭೆಯೊಳಗೆ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಂತೆ ಸೂಚಿಸಿದರು.

ಮದಿರೆ ಗ್ರಾಮದ ರೈತ ಮಹಿಳೆ ನೀಲಮ್ಮ ಅವರ ಸ್ವಂತ ಭೂಮಿಯಲ್ಲಿ ಸಾಗುವಳಿ ಮಾಡಲು ಅಡ್ಡಿಪಡಿಸುತ್ತಿರುವ ವ್ಯಕ್ತಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು.

ಲೋಕಾಯುಕ್ತ ಸಿಪಿಐ ಸಂಗಮೇಶ್, ತಹಶೀಲ್ದಾರ್ ನರಸಪ್ಪ, ಗ್ರೇಡ್-೨ ತಹಶೀಲ್ದಾರ್ ಮಲ್ಲೇಶಪ್ಪ, ಅಪರಾಧ ತನಿಖೆ ವಿಭಾಗದ ಪಿಎಸ್ಐ ಕರೆಮ್ಮ ಇದ್ದರು.

ಕುರುಗೋಡು ತಾಲೂಕು ಕಚೇರಿಯಲ್ಲಿ ಜರುಗಿದ ಲೋಕಾಯುಕ್ತ ಪೊಲೀಸರ ಕುಂದುಕೊರತೆ ಸಭೆಯಲ್ಲಿ ಅರ್ಜಿದಾರರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು.