ಸಾರಾಂಶ
ಸಿಂಧನೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಎಂ.ಎನ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಸಾರ್ವಜನಿಕ ವಲಯದಲ್ಲಿರುವ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಜನರ ಕೆಲಸಗಳನ್ನು ಮಾಡಿಕೊಡಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ರಾಯಚೂರು ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಎಂ.ಎನ್ ಎಚ್ಚರಿಸಿದರು.ನಗರದ ಮಿನಿವಿಧಾನಸೌಧ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ಕಚೇರಿ ಅವಧಿಯಲ್ಲಿ ಐಡಿ ಕಾರ್ಡ್ ಕೊರಳಲ್ಲಿ ಧರಿಸಬೇಕು. ತಮ್ಮ ಕುರ್ಚಿಯಲ್ಲಿ ತಮ್ಮ ಹೆಸರು, ಹುದ್ದೆ ಹೊಂದಿರುವ ಪದನಾಮ ಮತ್ತು ಲೋಕಾಯುಕ್ತ ಕಚೇರಿಯ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ಹಾಕಿರಬೇಕು.
ಸರ್ಕಾರದ ಸುತ್ತೋಲೆ, ಆದೇಶಗಳನ್ನು ಅಧಿಕಾರಿಗಳು ಪಾಲನೆ ಮಾಡಬೇಕು. ಅರ್ಜಿದಾರರು ದೂರು ನೀಡಲು ಬಂದಾಗ ಸೌರ್ಜನ್ಯದಿಂದ ವರ್ತಿಸಬೇಕು ಎಂದು ಹೇಳಿದರು.ಕಳೆದ ನಾಲ್ಕು ವರ್ಷಗಳಿಂದ ಸಿಂಧನೂರಿನ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಸಾಲ ಪಡೆಯಲು ಅಲೆದಾಡುತ್ತಿದ್ದರೂ ತಮಗೆ ಸಾಲ ಮಂಜೂರು ಮಾಡುತ್ತಿಲ್ಲವೆಂದು ಕೋಟೆ ಏರಿಯಾದ ಎಸ್.ಎಸ್.ಪಾಟೀಲ್ ಎನ್ನುವವವರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ಅವರಿಗೆ ದೂರು ಸಲ್ಲಿಸಿದರು. ಆದ ಸಭೆಯಲ್ಲಿದ್ದ ಸಹಕಾರಿ ನಿಬಂಧಕರ ಕಚೇರಿಯ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡ ಲೋಕಾಯುಕ್ತರು ಸರ್ಕಾರದಿಂದ ಸಾಲ ನೀಡಲು ಆದೇಶವಿದ್ದರೂ ಯಾಕೆ ಸಾಲ ಒದಗಿಸಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ವರ, ತಹಸೀಲ್ದಾರ್ ಅರುಣ್ ಎಚ್.ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.