ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರ ನೀಡುವ ಆಹಾರ ಧಾನ್ಯಗಳನ್ನು ಸರಿಯಾಗಿ ವಿತರಣೆ ಮಾಡದಿದ್ದಲ್ಲಿ ಅಂತಹ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್ ಕೃಷ್ಣ ಹೇಳಿದರು.ರಾಜ್ಯ ಹಾಗೂ ಕೇಂದ್ರಿಯ ಆಹಾರ ಆಯೋಗದ ಪದಾಧಿಕಾರಿಗಳ ತಂಡ ತಾಲೂಕಿನ ಆನೆಮಹಲ್ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಿ ಪಡಿತರ ವಿತರಣೆ ಮಾಡುವಾಗ ಹೆಚ್ಚಿನ ಹಣ ಪಡೆಯುತ್ತಾರೆಯೇ ಎಂದು ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ನಂತರ ಅಲ್ಲಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ದಾಸ್ತಾನಾಗಿದ್ದ ಅಕ್ಕಿ, ಗೊಧಿ, ಹಾಲಿನಪುಡಿ, ಮೊಟ್ಟೆ, ಬಾಣಂತಿಯರಿಗೆ ನೀಡುವ ಆಹಾರದ ಗುಣಮಟ್ಟ ಪರಿಶೀಲನೆ ಮಾಡಲಾಯಿತು. ಇದಾದ ನಂತರ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಅಲ್ಲಿನ ಆಹಾರ ಧ್ಯಾನಗಳ ಗೂಣಮಟ್ಟವನ್ನು ಪರಿಶೀಲನೆ ಮಾಡಲಾಯಿತು. ಇದಲ್ಲದೆ ಕೃಷಿ ಇಲಾಖೆ ರೈತ ಸಂಪಕ ಕೇಂದ್ರಕ್ಕೆ ಭೇಟಿ ನೀಡಿ ಕೃಷಿ ಪರಿಕರಗಳು, ದಾಸ್ತಾನು ಹಾಗೂ ದರಗಳನ್ನು ಪರಿಶೀಲಿಸಿದರು. ನಂತರ ವಿವಿಧ ಬೇಕರಿಗಳಲ್ಲಿ ಆಹಾರದ ಗುಣಮಟ್ಟವನ್ನು ಪರಿಶೀಲನೆ ಮಾಡಿ ಎಫ್‌ಎಸ್‌ಎಸ್‌ಎಐ ಲೈಸೆನ್ಸ್ ಪಡೆದುಕೊಳ್ಳಲು ಸೂಚಿಸಲಾಯಿತು. ರಸ್ತೆ ಬದಿ ಕಾಟನ್ ಕ್ಯಾಂಡಿ ಮಾರುತ್ತಿದ್ದವನ ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿ ಕೆಮಿಕಲ್ ಬಣ್ಣ ಹಾಕುತ್ತಿರುವುದು ದೃಢಪಟ್ಟ ಕಾರಣ ಕಾರ್ಖಾನೆಗೆ ಬೀಗ ಜಡಿಯಲಾಯಿತು.
ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡಿತರ ವಿತರಣೆ, ವಿವಿಧ ವೇತನಗಳು, ಕೃಷಿ ಪರಿಕರಗಳ ವಿತರಣೆ, ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳು ಸಾರ್ವಜನಿಕರಿಗೆ ಯಾವ ರೀತಿಯಲ್ಲಿ ದೊರಕುತ್ತಿದೆ ಎಂಬುದನ್ನು ಪರಿಶೀಲಿಸಲು ನಮ್ಮ ತಂಡ ಹಾಸನ ಜಿಲ್ಲಾ ಪ್ರವಾಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ತಾಲೂಕಿಗೂ ಸಹ ಆಗಮಿಸಿ ವಿವಿಧೆಡೆ ಪರಿಶೀಲನೆ ಮಾಡಲಾಗಿದೆ. ಮಕ್ಕಳಿಗೆ ಮೊಟ್ಟೆ ವಿತರಣೆ ದಾಖಲಾತಿ ಸಂಗ್ರಹಿಸದ ಹಾಗೂ ದಾಸ್ತಾನು ಕುರಿತು ಮಾಹಿತಿ ನೀಡದ ಸಕಲೇಶಪುರ ತಾಲೂಕು ಆನೆಮಹಲ್‌ನ ಅಂಗನವಾಡಿ ಕಾರ್ಯಕರ್ತೆ ಎಂ.ವಿ.ರೇಷ್ಮಾ ಅವರನ್ನು ಗೌರವಧನ ಸೇವೆಯಿಂದ ಬಿಡುಗಡೆ ಮಾಡಲು ಆದೇಶಿಸಲಾಗಿದೆ. ನಮ್ಮ ಉದ್ದೇಶ ಒಂದೇ ಒಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ಯಾವುದೆ ಯೋಜನೆಗಳಿರಲಿ ಅದು ಸಾರ್ವಜನಿಕರಿಗೆ ಸರಿಯಾಗಿ ತಲುಪಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಬೇಕು. ಹಾಸ್ಟೆಲ್‌ಗಳಲ್ಲಿ ಅತ್ಯುತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಹಾಗೂ ಸರ್ಕಾರದ ಮೆನುವಿನಂತೆ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ಪೂರೈಕೆಯಾದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳಿಗೆ ಕೆಮಿಕಲ್ ಬಣ್ಣ ಹಾಕುವುದು ಹೆಚ್ಚಾಗುತ್ತಿದ್ದು ಇದರಿಂದ ಹಲವಾರು ಮಂದಿ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಯಾರೂ ಸಹ ಆಹಾರ ಪದಾರ್ಥಗಳಿಗೆ ಕೆಮಿಕಲ್ ಬಣ್ಣಗಳನ್ನು ಹಾಕಬಾರದು. ಬೇಕರಿ ಹಾಗೂ ಹೋಟೆಲ್‌ಗಳಲ್ಲೂ ಆಹಾರದಲ್ಲಿ ಕೆಮಿಕಲ್ ಬಳಕೆ ಮಾಡಬಾರದು, ಯಾವುದೇ ಸಮಸ್ಯೆ ಇದ್ದಲ್ಲಿ ನೇರವಾಗಿ ನಮ್ಮನ್ನು ಸಂಪರ್ಕಿಸಬಹುದಾಗಿದೆ ಎಂದರು.ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು, ರಾಜ್ಯ ಆಹಾರ ಆಯೋಗದ ಸದಸ್ಯರುಗಳಾದ ಲಿಂಗರಾಜ್ ಕೋಟೆ, ಸುಮಂತ್ ರಾವ್, ಮಾರುತಿ ಎಂ ದೊಡ್ಡಲಿಂಗಣ್ಣನವರ, ರೋಹಿಣಿ ಪ್ರಿಯ, ವಿಜಯಲಕ್ಷ್ಮೀ, ತಹಸೀಲ್ದಾರ್ ಮೇಘನಾ ಸೇರಿದಂತೆ ಇತರರು ಹಾಜರಿದ್ದರು.