ಮತದಾರರಿಗೆ ಹಣದ ಆಮಿಷಯೊಡ್ಡಿದರೆ ಕ್ರಮ

| Published : Mar 29 2024, 12:50 AM IST

ಸಾರಾಂಶ

ಗ್ರಾಮೀಣ ಪ್ರದೇಶಗಳಲ್ಲಿ ೧೮೦, ಪಟ್ಟಣಗಳಲ್ಲಿ ೭೪ ಮತಗಟ್ಟೆಗಳಿವೆ. ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಒಟ್ಟು ೨,೩೪,೨೩೩ ಮತದಾರರಿದ್ದು, ಅದರಲ್ಲಿ ಮಹಿಳಾ ಮತದಾರರ ಸಂಖ್ಯೆ ೧,೧೭,೮೦೨ ಇದೆ.

ಹಗರಿಬೊಮ್ಮನಹಳ್ಳಿ: ಕ್ಷೇತ್ರದಲ್ಲಿ ೨೫೪ ಮತಗಟ್ಟೆಗಳಿದ್ದು, ಎಲ್ಲ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಸಹಾಯಕ ಚುನಾವಣಾ ಅಧಿಕಾರಿ ಭೀಮಪ್ಪ ಲಾಳಿ ತಿಳಿಸಿದರು.ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶಗಳಲ್ಲಿ ೧೮೦, ಪಟ್ಟಣಗಳಲ್ಲಿ ೭೪ ಮತಗಟ್ಟೆಗಳಿವೆ. ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಒಟ್ಟು ೨,೩೪,೨೩೩ ಮತದಾರರಿದ್ದು, ಅದರಲ್ಲಿ ಮಹಿಳಾ ಮತದಾರರ ಸಂಖ್ಯೆ ೧,೧೭,೮೦೨ ಇದೆ. ಪುರುಷ ಮತದಾರರ ಸಂಖ್ಯೆ ೧,೧೬,೪೦೮ ಇದೆ. ಇತರೆ ಮತದಾರರು ೨೩ ಜನ ಇದ್ದಾರೆ. ಗರಗ ನಾಗಲಾಪುರ, ಹರಾಳ್, ಗ್ರಾಮಗಳ ಬಳಿ ಚೆಕ್‌ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ವಲಸೆ ಹೋಗಿರುವ ಮತದಾರರನ್ನು ಕರೆತರಲು ಸ್ವೀಪ್ ಕಾರ್ಯಕ್ರಮಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಪಟ್ಟಣದ ಜಿವಿಪಿಪಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಸ್ಟ್ರಾಂಗ್ ರೂಂ ಮಾಡಲಾಗಿದೆ. ಅಭ್ಯರ್ಥಿಗಳು ಮತದಾರರಿಗೆ ಹಣದ ಆಮಿಷ ಸೇರಿ ಇತರೆ ಆಮಿಷಗಳನ್ನೊಡ್ಡಿದರೆ ಸೂಕ್ತ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಸಿ ವಿಜಿಲ್ ಆಪ್ ಮೂಲಕ ಚನಾವಣಾ ಅಕ್ರಮ ಕುರಿತಾದ ವೀಡಿಯೋ ಪೋಟೋ ಕಳುಹಿಸಿ, ದೂರು ದಾಖಲಿಸಿದರೆ ಶೀಘ್ರ ಕ್ರಮಕ್ಕೆ ಮುಂದಾಗಲಾಗುವುದು. ದೂರುದಾರರ ಹೆಸರನ್ನು ಗೌಪ್ಯವಾಗಿಟ್ಟು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್ ಚಂದ್ರಶೇಖರ ಶಂಬಣ್ಣ ಗಾಳಿ ಮಾತನಾಡಿ, ೧೮ವರ್ಷ ತುಂಬಿದವರು ಹೊಸದಾಗಿ ಮತದಾರ ಪಟ್ಟಿಗೆ ಹೆಸರು ಸೇರಿಸಲು, ಏಪ್ರಿಲ್ ೧೨ರ ಒಳಗೆ ಫಾರಂ ೬ ತುಂಬಿ ಸಂಬಂಧಿಸಿದ ಅಧಿಕಾರಿಗಳಿಗೆ ನೀಡಬಹುದಾಗಿದೆ. ೮೫ ವರ್ಷಕ್ಕೂ ಮೇಲ್ಪಟ್ಟ ಮತದಾರರು ಮನೆಯಿಂದಲೇ ಮತದಾನ ಮಾಡಲು ಇಚ್ಚಿಸಿದರೆ ಅಂತವರಿಗೆ ಅಗತ್ಯ ಸೌಲಭ್ಯವನ್ನು ಒದಗಿಸಲಾಗುವುದು. ಇಂತವರು ಈವರೆಗೆ ೩೦೦ ಮತದಾರರು ಮಾತ್ರ ಮನೆಯಿಂದ ಮತದಾನ ಮಾಡಲು ಅವಕಾಶ ಕೋರಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಅವರ ಮನೆಗಳಿಗೆ ಅಧಿಕಾರಿಗಳು ತೆರಳಿ ಪರಿಶೀಲಿಸುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಮುಸ್ತಾಕ್ ಅಹಮದ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಾಂತೇಶ, ಸಮಾಜ ಕಲ್ಯಾಣ ಇಲಾಖೆಯ ಸುನೀಲ ಕನಕೇರಿ ಇತರರಿದ್ದರು.