ಜಲ ವ್ಯರ್ಥ ಮಾಡಿದರೆ ಕ್ರಮ

| Published : Aug 31 2025, 02:00 AM IST

ಸಾರಾಂಶ

ಚಿಕ್ಕಮ್ಯಾಗೇರಿ ಗ್ರಾಪಂ ಕೇಂದ್ರ ಸ್ಥಾನ ಹಾಗೂ ಎಲ್ಲಾ ಗ್ರಾಮಗಳಲ್ಲಿ ನಳಗಳಿಗೆ ಕ್ಯಾಪ್ ಹಾಕದೇ ಇರುವುದರಿಂದ ನೀರು ವ್ಯರ್ಥವಾಗಿ ಪೋಲಾಗುತ್ತಿದೆ. ಇದರಿಂದ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ

ಯಲಬುರ್ಗಾ:

ಚಿಕ್ಕಮ್ಯಾಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ನಿವಾಸಿಗಳು ಜೀವಜಲ ವ್ಯರ್ಥ ಮಾಡಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಶರಣಕುಮಾರ ಅಮರಗಟ್ಟಿ ಹೇಳಿದರು.

ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಕೇಂದ್ರ ಸ್ಥಾನ ಹಾಗೂ ಎಲ್ಲಾ ಗ್ರಾಮಗಳಲ್ಲಿ ನಳಗಳಿಗೆ ಕ್ಯಾಪ್ ಹಾಕದೇ ಇರುವುದರಿಂದ ನೀರು ವ್ಯರ್ಥವಾಗಿ ಪೋಲಾಗುತ್ತಿದೆ. ಇದರಿಂದ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ಎಂದು ಸದಸ್ಯರು ಮತ್ತು ಸಾರ್ವಜನಿಕರು ದೂರಿದ್ದಾರೆ. ನಳಕ್ಕೆ ಕ್ಯಾಪ್ ಹಾಕಿಕೊಳ್ಳದೇ ವ್ಯರ್ಥವಾಗಿ ನೀರು ಪೋಲು ಮಾಡುವವರ ಬಗ್ಗೆ ಹಳ್ಳಿಗಳಲ್ಲಿ ಡಂಗೂರ ಸಾರಿ ಜಾಗೃತಿ ಮೂಡಿಸಲಾಗುವುದು. ಎಚ್ಚೆತ್ತುಕೊಳ್ಳದಿದ್ದರೆ, ನೀರು ಪೋಲು ಮಾಡಿದವರ ನೀರಿನ ಸಂಪರ್ಕ ಕಡಿತಗೊಳಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗುವುದು ಎಂದರು.

ಪಿಡಿಒ ವೆಂಕಟೇಶ ನಾಯಕ ಮಾತನಾಡಿ, ಚಿಕ್ಕಮ್ಯಾಗೇರಿ ₹೧.೦೮ ಲಕ್ಷ., ಕುದ್ರಿಕೊಟಗಿ ₹೨೧ ಸಾವಿರ, ಕುಡಗುಂಟಿ ₹೧೪ ಸಾವಿರ, ಮಲಕಸಮುದ್ರ ₹೪೬ ಸಾವಿರ ಸೇರಿ ಒಟ್ಟು ₹೧.೯೧ ಲಕ್ಷ ಕರ ವಸೂಲಿಯಾಗಿದೆ. ಕರ ವಸೂಲಿಗೆ ತಕ್ಕಂತೆ ಐಎಸ್ಒ ಪ್ರಮಾಣ ಪತ್ರ ಪಡೆಯುವ ಸಲುವಾಗಿ ಪಂಚಾಯಿತಿಗೆ ಬಣ್ಣ ಹಚ್ಚುವುದು ಸೇರಿದಂತೆ ಇನ್ನಿತರ ಬದಲಾವಣೆ ಮಾಡುವ ಸಲುವಾಗಿ ಹಂತ-ಹಂತವಾಗಿ ಖರ್ಚು ಮಾಡಲಾಗಿದೆ. ೧೫ನೇ ಹಣಕಾಸು ಯೋಜನೆಗೆ ಸಂಬಂಧಿಸಿದಂತೆ ನಿರ್ಬಂಧಿತ ಹಾಗೂ ಅನಿರ್ಬಂಧಿತ ಅನುದಾನದಲ್ಲಿ ₹೭.೫೦ ಲಕ್ಷ ಖರ್ಚು ಮಾಡಲಾಗಿದೆ ಎಂದು ಸಭೆಗೆ ಉತ್ತರಿಸಿದರು.ಈ ವೇಳೆ ಉಪಾಧ್ಯಕ್ಷೆ ಗಾಳೆವ್ವ ಮಾದರ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ವಡ್ಡರ, ಸದಸ್ಯರಾದ ಯಮನೂರಪ್ಪ ಕುರಿ, ದೇವಪ್ಪ ಲಗಳೂರ, ಮಂಜುಳಾ ಚನ್ನಪ್ಪನಹಳ್ಳಿ, ಗಂಗಮ್ಮ ಕುಕನಪಳ್ಳಿ, ಫಾತೀಮಾ ಬೇಗಂ, ಕಾವೇರಿ ಮಾರನಾಳ, ಶರಣಯ್ಯ ಬಂಡಿಹಾಳ, ಶಾಂತಮ್ಮ ಮುರಾರಿ, ಶರಣಪ್ಪ ಕರಡದ, ರೇಣವ್ವ ಬಾದ್ರಿ, ಶರಣಪ್ಪ ಹಾದಿಮನಿ, ಕೃಷ್ಣ ರಾಠೋಡ, ಬಸವರಾಜ ಬಿಸೆರೊಟ್ಟಿ, ಹುಚ್ಚಮ್ಮ ಉಪ್ಪಾರ, ಶರಣಯ್ಯ ಬಂಡಿಹಾಳ ಸೇರಿದಂತೆ ಗ್ರಾಪಂ ಸಿಬ್ಬಂದಿ ಇದ್ದರು.