ಶಾಂತಿಯುತ, ಮುಕ್ತ ಮತದಾನಕ್ಕೆ ಅಗತ್ಯ ಕ್ರಮ: ಎಸ್ಪಿ ಉಮಾ

| Published : May 07 2024, 01:05 AM IST

ಶಾಂತಿಯುತ, ಮುಕ್ತ ಮತದಾನಕ್ಕೆ ಅಗತ್ಯ ಕ್ರಮ: ಎಸ್ಪಿ ಉಮಾ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾದ್ಯಂತ ಪೊಲೀಸ್‌, ಡಿಎಆರ್‌, ಕೆಎಸ್‌ಆರ್‌ಪಿ ತುಕಡಿಗಳ ನಿಯೋಜನೆ, ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು, 31 ರೌಡಿಗಳು, ಮತೀಯ ಗೂಂಡಾಗಳ ಗಡಿಪಾರಿಗೆ ಕ್ರಮ

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ನಡೆಯುವ ಚುನಾವಣೆಯಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು, ಶಾಂತಿಯುತ ಮತ್ತು ಮುಕ್ತ ಮತದಾನ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮದ ಜೊತೆಗೆ ಅಗತ್ಯ ಭದ್ರತಾ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ತಿಳಿಸಿದ್ದಾರೆ.

ಜಿಲ್ಲಾದ್ಯಂತ ಚುನಾವಣಾ ಬಂದೋಬಸ್ತ್‌ಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಜಿಲ್ಲಾ ಪೊಲೀಸ್ ಮೀಸಲು ಪಡೆ(ಡಿಎಆರ್), ಆರ್‌ಪಿಎಫ್‌, ಕರ್ನಾಟಕ ರಾಜ್ಯ ಮೀಸಲು ಪಡೆ ತುಕಡಿ ನಿಯೋಜನೆ ಮಾಡಲಾಗಿದೆ. ಅಲ್ಲದೇ. ಇಡೀ ಜಿಲ್ಲಾದ್ಯಂತ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ ಎಂದು ತಿಳಿಸಿದ್ದಾರೆ.

ಲೋಕಸಭೆ ಸಾರ್ವತ್ರಿಕ ಚುನಾವಣೆ-2024ರ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವ್ಯತಿರಿಕ್ತ ಪೋಸ್ಟ್‌ಗಳ ಮೇಲೆ ಪೊಲೀಸ್ ಠಾಣಾ ಮಟ್ಟದಲ್ಲಿ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಜಿಲ್ಲಾದ್ಯಂತ ಈಗಾಗಲೇ ಎಲ್ಲಾ ಠಾಣಾ ವ್ಯಾಪ್ತಿ ಸೂಕ್ಷ್ಮ ಪ್ರದೇಶಗಳಲ್ಲಿ ಜಿಲ್ಲಾ ಪೊಲೀಸ್ ಹಾಗೂ ಆರ್‌ಪಿಎಫ್‌ ತುಕಡಿಗಳೊಂದಿಗೆ 38 ವಿವಿಧ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿ, ಶಾಂತಿಯುತ, ಭಯಮುಕ್ತರಾಗಿ ಮತದಾನ ಮಾಡಲು ಜಾಗೃತಿ ಮೂಡಿಸಲಾಗಿದೆ ಎಂದರು.

ಎಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ, ಗೂಂಡಾ, ಮತೀಯ ಗೂಂಡಾ ಆಸಾಮಿಗಳ ಪರೇಡ್ ನಡೆಸಿ, ಅಂತಹವರಿಗೆ ಚುನಾವಣಾ ಸಮಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನಡವಳಿಕೆ ಹೊಂದಿರುವಂತೆ ಎಚ್ಚರಿಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ 31 ರೌಡಿಗಳು, ಮತೀಯ ಗೂಂಡಾ ಆಸಾಮಿಗಳ ವಿರುದ್ಧ ಗಡಿಪಾರಿಗೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಮತದಾನ ಹೆಚ್ಚಿಸುವ ಹಿನ್ನೆಲೆ ಜನರಿಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತದೊಂದಿಗೆ ಪೊಲೀಸ್ ಇಲಾಖೆಯೂ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದ್ದಾರೆ.

ಇಂದು, ಏನು ಮಾಡಬೇಕು, ಏನು ಮಾಡಬಾರದು?:

ಚುನಾವಣಾ ಸಮಯದಲ್ಲಿ ಚುನಾವಣಾ ಅಕ್ರಮ ಕಂಡು ಬಂದರೆ ತಕ್ಷಣ ಸ್ಥಳೀಯ ಪೊಲೀಸ್ ಅಥವಾ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ. ಈಗಾಗಲೇ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಮೇ 5ರ ಸಂಜೆ 6ರಿಂದ ಮೇ 7ರ ಸಂಜೆ 7ರವರೆಗೆ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾ ದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಯಾರೂ ಈ ಸಮಯದಲ್ಲಿ ಅಕ್ರಮ ಮದ್ಯ ಮಾರಾಟ ಬಾರದು ಎಂದು ಅವರು ಸೂಚಿಸಿದ್ದಾರೆ.

ಚುನಾವಣೆ ಹಿನ್ನೆಲೆ ಜಿಲ್ಲಾಧಿಕಾರಿಗಳು ಈಗಾಗಲೇ ಸಿಆರ್‌ಪಿಸಿ 144ನೇ ಸೆಕ್ಷನ್ ಜಾರಿ ಮಾಡಿದ್ದು, ಅದನ್ನು ಪಾಲಿಸಬೇಕು. ಸಿಆರ್‌ಪಿಸಿ 144ನೇ ಸೆಕ್ಷನ್‌ ಆದೇಶದಡಿ ನಿರ್ಬಂಧಿತ ಪ್ರದೇಶದಲ್ಲಿ 5ಕ್ಕಿಂತಲೂ ಹೆಚ್ಚು ವ್ಯಕ್ತಿ ಒಟ್ಟುಗೂಡಿಸಲು, ಒಟ್ಟಿಗೆ ಚಲಿಸಲು ಅನುಮತಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮಾದರಿ ಚುನಾವಣಾ ನೀತಿ ಸಂಹಿತೆ ಪಾಲನೆ ಮಾಡಬೇಕು. ಯಾರೂ ಸಹ ನೀತಿ ಸಂಹಿತೆ ಉಲ್ಲಂಘನೆ ಮಾಡಬಾರದು. ಉಲ್ಲಂಘಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಶಾಂತಿಯುತ ಮತ್ತು ನ್ಯಾಯ ಸಮ್ಮತ, ಭಯಮುಕ್ತ ಚುನಾವಣಾ ಮತದಾನ ಪ್ರಕ್ರಿಯೆ ನಡೆಸಬೇಕು. ಮತದಾನ ದಿನದಂದು ಮತದಾರರಿಗೆ ಚುನಾವಣಾ ಆಮಿಷವೊಡ್ಡುವುದು, ಹಣ, ವಸ್ತು ಹಂಚುವುದು, ಪ್ರಭಾವ ಬೀರುವುದನ್ನು ಮಾಡಬಾರದು. ಅಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಮತದಾನ ಸ್ಥಳಗಳಲ್ಲಿ ಭದ್ರತಾ ದೃಷ್ಟಿಯಿಂದ ಪೊಲೀಸ್ ಇಲಾಖೆಯಿಂದ ಪರಿಶೀಲಿಸುವಾಗ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿವೊಂದಿಗೆ ಸೌಜನ್ಯಯುತವಾಗಿ ಸಹಕರಿಸಬೇಕು. ಮತದಾನ ದಿನದಂದು ಮತಗಟ್ಟೆಗಳಲ್ಲಿ ಶಾಂತಿ, ಕಾನೂನು, ಸುವ್ಯವಸ್ಥೆಗೆ ಧಕ್ಕೆ ತರಬಾರದು. ಹಾಗೇನಾದರೂ ಶಾಂತಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅಲ್ಲದೇ, ಮತದಾನ ಕೇಂದ್ರಕ್ಕೆ ಬರುವ ಸಾರ್ವಜನಿಕರು ವಾಹನ ಎಲ್ಲೆಂದರಲ್ಲಿ ನಿಲ್ಲಿಸದೇ, ನಿಲುಗಡೆಗೆ ಕಾಯ್ದಿರಿಸಿರುವ ಸ್ಥಳಗಳಲ್ಲಿ ಮತ್ತು ಪೊಲೀಸರು ಸೂಚಿಸುವ ಸ್ಥಳಗಳಲ್ಲಿ ಮಾತ್ರ ವಾಹನ ನಿಲುಗಡೆ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪ್ರಚೋದನಾತ್ಮಕ, ನಿಂದನಾತ್ಮಕ ಪೋಸ್ಟರ್‌ ಹಾಕುವುದಾಗಲೀ ಅಥವಾ ಶೇರ್ ಮಾಡುವುದು, ಕಾನೂನು ಬಾಹಿರವಾಗುತ್ತದೆ. ಅಂತಹವು ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ಮತದಾನ ಕೇಂದ್ರಕ್ಕೆ ಬರುವಂತಹ ಮತದಾರರು ಚುನಾವಣಾ ಆಯೋಗ, ಜಿಲ್ಲಾ ಚುನಾವಣಾ ಅಧಿಕಾರಿಗಳು ಗುರುತಿಸಿರುವ ದಾಖಲೆಗಳೊಂದಿಗೆ ಬರುವುದು. ಮತದಾನ ಕೇಂದ್ರಕ್ಕೆ ಆಗಮಿಸುವ ಮತದಾರರು, ಸಾರ್ವಜನಿಕರು ಮತಗಟ್ಟೆಯೊಳಗೆ ಮೊಬೈಲ್ ತರುವುದಕ್ಕೆ ಹಾಗೂ ಬಳಸುವುದಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಮಾಹಿತಿ ನೀಡಿದ್ದಾರೆ.

ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಅಕ್ರಮ ತಡೆಯುವಲ್ಲಿ ಸಾರ್ವಜನಿಕರ ಸಹಾಯ, ಸಹಕಾರವೂ ಅಗತ್ಯವಾಗಿದೆ. ಜಿಲ್ಲೆಯ ಯಾವುದೇ ಮೂಲೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮಗಳು ಕಂಡು ಬಂದಲ್ಲಿ ತಕ್ಷಣವೇ ಪೊಲೀಸ್ ಅಧಿಕಾರಿಗಳು, ಸಮೀಪದ ಪೊಲೀಸ್ ಠಾಣೆ ಗಮನಕ್ಕೆ ತರಬೇಕು.

- ಉಮಾ ಪ್ರಶಾಂತ. ಜಿಲ್ಲಾ ಪೊಲೀಸ್ ಅಧೀಕ್ಷಕಿ