₹2.24 ಕೋಟಿಗೆ ಕ್ರಿಯಾಯೋಜನೆ ಒಪ್ಪಿಗೆ

| Published : Apr 17 2025, 12:04 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ 15ನೇ ಹಣಕಾಸು ಯೋಜನೆಯಲ್ಲಿ ಇಂಡಿ ಪುರಸಭೆಗೆ ಬಂದಿರುವ ₹ 2.24 ಕೋಟಿ ಅನುದಾನದ ಕ್ರೀಯಾಯೋಜನೆ ತಯಾರಿಸಲು ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಸಿ ಒಪ್ಪಿಗೆ ಸೂಚಿಸಲಾಯಿತು. ಇನ್ನು ಮುಂದೆ ಒಳಚರಂಡಿ ಕನೆಕ್ಷನ್‌ ಪಡೆದ ಕುಟುಂಬಗಳು ಪ್ರತಿ ವರ್ಷ ₹ 200 ಹಾಗೂ ವಾಣಿಜ್ಯ ಬಳಕೆ ಮಾಡಿಕೊಳ್ಳುವವರು ₹ 1000 ತೆರಿಗೆ ಕಟ್ಟುವ ಕುರಿತು ಸಭೆಯಲ್ಲಿ ತೀರ್ಮಾನಿಸಿ ಒಪ್ಪಿಗೆ ಸೂಚಿಸಲಾಯಿತು.

ಕನ್ನಡಪ್ರಭ ವಾರ್ತೆ ಇಂಡಿ

15ನೇ ಹಣಕಾಸು ಯೋಜನೆಯಲ್ಲಿ ಇಂಡಿ ಪುರಸಭೆಗೆ ಬಂದಿರುವ ₹ 2.24 ಕೋಟಿ ಅನುದಾನದ ಕ್ರೀಯಾಯೋಜನೆ ತಯಾರಿಸಲು ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಸಿ ಒಪ್ಪಿಗೆ ಸೂಚಿಸಲಾಯಿತು. ಇನ್ನು ಮುಂದೆ ಒಳಚರಂಡಿ ಕನೆಕ್ಷನ್‌ ಪಡೆದ ಕುಟುಂಬಗಳು ಪ್ರತಿ ವರ್ಷ ₹ 200 ಹಾಗೂ ವಾಣಿಜ್ಯ ಬಳಕೆ ಮಾಡಿಕೊಳ್ಳುವವರು ₹ 1000 ತೆರಿಗೆ ಕಟ್ಟುವ ಕುರಿತು ಸಭೆಯಲ್ಲಿ ತೀರ್ಮಾನಿಸಿ ಒಪ್ಪಿಗೆ ಸೂಚಿಸಲಾಯಿತು. ₹2.24 ಕೋಟಿ ಅನುದಾನದಲ್ಲಿ ಶೇ.30ರಷ್ಟು ಕುಡಿಯುವ ನೀರಿಗಾಗಿ ಹಾಗೂ ₹ 62 ಲಕ್ಷ ಘನತ್ಯಾಜ್ಯ ನಿರ್ವಹಣೆಗೆ ಬಳಕೆ ಮಾಡುವ ಕುರಿತು ಕ್ರಿಯಾಯೋಜನೆ ತಯಾರಿಸುವುದು ಹಾಗೂ ₹ 89 ಲಕ್ಷ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಎಸ್‌ಎಫ್‌ಸಿ ಯೋಜನೆಯಡಿಯಲ್ಲಿ ₹ 11 ಲಕ್ಷ ಎಸ್ಸಿಪಿ ಅನುದಾನದಡಿ ₹ 17ಲಕ್ಷ, ಟಿಎಸ್ಪಿ ಅನುದಾದಲ್ಲಿ ₹ 7 ಲಕ್ಷ ಕ್ರಿಯಾಯೋಜನೆ ಸಿದ್ದಪಡಿಸಲು ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಇಲ್ಮಾಯಿಲ್‌ ಅರಬ, ಹಿಂದಿನ ಕ್ರಿಯಾಯೋಜನೆಯಡಿ ಮಂಜೂರಾಗಿರುವ ಟೆಂಡರ್‌ ಕರೆದಿರುವ ಕಾಮಗಾರಿಗಳೇ ಪೂರ್ಣಗೊಂಡಿಲ್ಲ. ಮತ್ತೆ ಕ್ರಿಯಾ ಯೋಜನೆ ತಯಾರಿಸಿ ಏನು ಮಾಡುತ್ತೀರಿ ಎಂದು ಸಭೆಯಲ್ಲಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಹಿಂದಿನ ಕ್ರಿಯಾ ಯೋಜನೆಯಡಿಯಲ್ಲಿ ಶೇ.60ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಶೇ.40 ಕಾಮಗಾರಿಗಳು ಆಗಬೇಕಿದ್ದು, ಎಲ್ಲ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗುತ್ತದೆ ಎಂದು ಹೇಳಿದರು.

ಪುರಸಭೆಯ 95 ಕಾರ್ಮಿಕರಲ್ಲಿ ದುಡಿಯುವವರು ದುಡಿಯುತ್ತಲೇ ಇದ್ದಾರೆ. ಕೆಲವರು ಮನೆಯಲ್ಲಿ ಕುಳಿತು ಸಂಬಳ ಪಡೆಯುತ್ತಾರೆ. ಇಲ್ಲಿಯವರೆಗೆ ಅವರು ಯಾರು ಎಂದು ಅವರ ಮುಖ ನೋಡಿಲ್ಲ. ಹೀಗಾದರೆ ಹೇಗೆ ಎಂದು ಸದಸ್ಯ ಅನೀಲಗೌಡ ಬಿರಾದಾರ ಮುಖ್ಯಾಧಿಕಾರಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ಕಾರ್ಮಿಕರು ನಿತ್ಯ ಕೆಲಸಕ್ಕೆ ಬರುವ ಕುರಿತು ಆರೋಗ್ಯಾಧಿಕಾರಿಗಳು ಹಾಜರಾತಿ ಪಡೆಯುತ್ತಾರೆ. ಯಾರು ಕೆಲಸಕ್ಕೆ ಬರುವುದಿಲ್ಲವೊ ಅವರನ್ನು ಗೈರು ಹಾಕಲು ತಿಳಿಸಲಾಗಿದೆ ಎಂದು ಹೇಳಿದರು.

ಇನ್ನೂ ಮುಂದೆ ಯಾವುದೇ ಕಾಮಗಾರಿ ಬಿಲ್‌ ಪಾವತಿಸಬೇಕಾದರೆ ಸಾಮಾನ್ಯಸಭೆಯಲ್ಲಿ ಎಲ್ಲ ಸದಸ್ಯರ ಒಪ್ಪಿಗೆ ಪಡೆದು ಬಿಲ್‌ ನೀಡುವ ಕುರಿತು ಸಭೆಯಲ್ಲಿ ಠರಾವು ಪಾಸ್‌ ಮಾಡಲು ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು. ಪುರಸಭೆ ಮುಖ್ಯಾಧಿಕಾರಿಗಳು ವಾರ್ಡ್‌ ಗಳಿಗೆ ಭೇಟಿ ನೀಡಬೇಕು. ಯಾವ ಸದಸ್ಯ ಯಾವ ವಾರ್ಡ್‌ದವರು ಎಂಬುದು ಅವರಿಗೆ ಇಲ್ಲಿಯವರೆಗೆ ತಿಳಿದುಕೊಂಡಿಲ್ಲ. ಮುಂದೆ ಹೀಗಾಗಬಾರದು, ಮುಖ್ಯಾಧಿಕಾರಿಗಳು ಪ್ರತಿ ವಾರ್ಡಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಬೇಕು ಎಂದು ಸದಸ್ಯ ಅನೀಲಗೌಡ ಬಿರಾದಾರ ಹೇಳಿದರು.

ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಗೀತಾ ಕರಕಟ್ಟಿ ಮಧ್ಯ ಪ್ರವೇಶಿಸಿ, ನಮ್ಮ ವಾರ್ಡ್‌ಗೆ 15 ದಿನವಾಯಿತು ಕಸ ವಿಲೇವಾರಿ ವಾಹನ ಬರುತ್ತಿಲ್ಲ. ಸಾರ್ವಜನಿಕರು ಕಸ ಎಲ್ಲಿ ಚೆಲ್ಲಬೇಕು ಎಂದು ಪ್ರಶ್ನಿಸಿದಾಗ, ಆರೋಗ್ಯಾಧಿಕಾರಿ ಕೋಳಿ ಅವರು ಕಸದ ವಾಹನ ದುರಸ್ತಿಗೆ ನಿಂತಿದೆ. ಹೀಗಾಗಿ ಬಂದಿಲ್ಲ ಎಂದು ಹೇಳಿದಾಗ ಸದಸ್ಯ ಉಮೇಶ ದೇಗಿನಾಳ, ವಾರದವರೆಗೆ ವಾಹನಗಳು ಕೆಟ್ಟು ನಿಂತರೆ, ಇನ್ನೂಳಿದ ವಾಹನಗಳಿಗೆ ಎರಡು ಬಾರಿ ಟ್ರೀಪ್‌ ಹಾಕಿ ಕಸ ಒಯ್ಯುವಂತೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಉಪಾಧ್ಯಕ್ಷ ಜಹಾಂಗೀರ ಸೌದಾಗರ, ಕಚೇರಿ ಅಧೀಕ್ಷಕ ಪ್ರವೀಣ ಸೋನಾರ, ಲೆಕ್ಕಾಧಿಕಾರಿ ಅಸ್ಲಮ ಖಾಧಿಮ್‌, ಆರೋಗ್ಯಾಧಿಕಾರಿ ಸೋಮನಾಯಕ, ಕಂದಾಯ ಅಧಿಕಾರಿ ನಿಂಬಾಳಕರ, ಸದಸ್ಯರಾದ ಮುಸ್ತಾಕ ಇಂಡಿಕರ, ಅಯುಬ ಬಾಗವಾನ, ದೇವೇಂದ್ರ ಕುಂಬಾರ ಮೊದಲಾದವರು ಸಭೆಯಲ್ಲಿ ಇದ್ದರು.