ಸಾರಾಂಶ
ಸಮಗ್ರ ರಸ್ತೆಗಳು, ಚರಂಡಿ, ಶೌಚಾಲಯ ನಿರ್ಮಾಣ ಸೇರಿದಂತೆ ಎಲ್ಲ ಮೂಲಸೌಕರ್ಯಗಳಿಗಾಗಿ ₹40 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ಕೆರೂರ
ಪಟ್ಟಣದ ಸಮಗ್ರ ರಸ್ತೆಗಳು, ಚರಂಡಿ, ಶೌಚಾಲಯ ನಿರ್ಮಾಣ ಸೇರಿದಂತೆ ಎಲ್ಲ ಮೂಲಸೌಕರ್ಯಗಳಿಗಾಗಿ ₹40 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಶಾಸಕ ಭೀಮಸೇನ ಚಿಮ್ಮನಕಟ್ಟಿಯವರು ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆಂದು ಪಪಂ ಮುಖ್ಯಾಧಿಕಾರಿ ರಮೇಶ ಮಾಡಬಾಳ ತಿಳಿಸಿದರು.ಪಟ್ಟಣದಲ್ಲಿ ಅನುದಾನವಿಲ್ಲದೇ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಲಾಗಿದೆಯೆಂಬ ವದಂತಿಗೆ ಉತ್ತರವಾಗಿ ಬುಧವಾರ ಸಿಬ್ಬಂದಿ ಸಮೇತ ಪೂಜಾ ಕಾರ್ಯಕೈಗೊಂಡ ಸ್ಥಳಗಳಿಗೆ ಗುತ್ತಿಗೆದಾರರೊಂದಿಗೆ ಬಂದು ಪರಿಶೀಲನೆ ನಡೆಸಿ ಮಾತನಾಡಿದ ಮಾಡಬಾಳ, ಅನುದಾನವಿಲ್ಲದೆ ಯಾವುದೇ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿಲ್ಲ ಎಂದು ತಿಳಿಸಿ, ಗುತ್ತಿಗೆದಾರರಿಗೆ ಕಾಮಗಾರಿ ಪ್ರಾರಂಭಿಸಲು ಆದೇಶ ನೀಡಿದರು. ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಂಡು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸೂಚಿಸಿದರು. ಕಾಮಗಾರಿ ಸ್ಥಳದಲ್ಲಿ ಅಡೆತಡೆಯಾಗಿರುವ ಒತ್ತುವರಿ ಕಟ್ಟೆ ಕಟ್ಟಡಗಳನ್ನು ತೆರವುಗೊಳಿಸಿ ಗುಣಮಟ್ಟದ ರಸ್ತೆ ಗಟಾರ ನಿರ್ಮಾಣಕ್ಕೆ ಸಹಕರಿಸಬೇಕೆಂದು ನಾಗರಿಕರಿಗೆ ಮನವಿ ಮಾಡಿದರು.
ಬಸ್ ನಿಲ್ದಾಣ ಹತ್ತಿರದ ಪಶು ಆಸ್ಪತ್ರೆ ಆವರಣದ ಮುಂಭಾಗದ ದುರಸ್ತಿ ಕಾರ್ಯ ಇಂದಿನಿಂದಲೇ (ಬುಧವಾರ) ಆರಂಭವಾಗಬೇಕೆಂದು ಕಟ್ಟು ನಿಟ್ಟಾಗಿ ಹೇಳಿದರು. ಪಟ್ಟಣದಲ್ಲಿ ಸಂಚರಿಸಿ ರಸ್ತೆ ಚರಂಡಿ ವೀಕ್ಷಿಸಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಪೌರ ಕಾರ್ಮಿಕರಿಗೆ ಸೂಚಿಸಿದರು. ಬೇಸಿಗೆ ಕಾಲ ಇರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಂಭವ ಹೆಚ್ಚು ರಸ್ತೆ ಹಾಗೂ ಗಟಾರಗಳಲ್ಲಿ ಕೊಳಕು ಸಂಗ್ರಹವಾಗದಂತೆ ನೋಡಿಕೊಳ್ಳಬೇಕೆಂದು ಸಿಬ್ಬಂದಿಗೆ ಖಡಕ ಎಚ್ಚರಿಕೆ ನೀಡಿದರು.ಅಭಿಯಂತರ ಎಂ.ಐ.ಹೊಸಮನಿ, ಅಧಿಕಾರಿ ನವೀನ ಮಹಾರಾಜನವರ, ಪಪಂ ಸದಸ್ಯ ಪರಶುರಾಮ ಮಲ್ಲಾಡದ, ಸುರೇಶ ಪೂಜೇರಿ, ಗುತ್ತಿಗೆದಾರರಾದ ಹನಮಂತ ಮತ್ತಿಕಟ್ಟಿ, ಗೈಬುಸಾಬ ವಠಾರದ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))