ಸಾರಾಂಶ
ಶಿವಮೊಗ್ಗ: ಜಿಲ್ಲೆಯ ಸಾಗರ, ಹೊಸನಗರ ಮತ್ತು ಶಿವಮೊಗ್ಗ ಗ್ರಾಮಾಂತರ ತಾಲೂಕುಗಳಿಗೆ ತಲಾ ಒಂದು ಮೊಬೈಲ್ ಮೆಡಿಕೇರ್ ಯುನಿಟ್‍ಗಳನ್ನು ಮಂಜೂರು ಮಾಡಲಾಗಿದ್ದು, ಜನವರಿಯಿಂದಲೇ ಸಾರ್ವಜನಿಕ ಸೇವೆಗೆ ಒದಗಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳ ಅಗತ್ಯತೆ ಪೂರೈಸುವ ನಿಟ್ಟಿನಲ್ಲಿ ರಾಜ್ಯದ 340 ಆರೋಗ್ಯ ಕೇಂದ್ರಗಳಿಗೆ ಹೊಸ ಅಂಬ್ಯುಲೆನ್ಸ್‌ಗಳನ್ನು ನೀಡಲಾಗಿದೆ. ಅಗತ್ಯವಿದ್ದಲ್ಲಿ ಇನ್ನಷ್ಟು ಅಂಬ್ಯುಲೆನ್ಸ್‌ಗಳನ್ನು ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದರು.ಸಾಗರ ತಾಲೂಕಿನ ಮಂಗನಕಾಯಿಲೆ ಬಾಧಿತ ಅರಳಗೋಡು ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಅಲ್ಲಿನ ಜನರ ಅವಹಾಲುಗಳನ್ನು ಆಲಿಸಲಾಗಿದ್ದು, ಈ ಸಂಬಂಧ ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳ ಆರೋಗ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಯಾವುದೇ ಕಾಯಿಲೆ ಬರುವುದಕ್ಕು ಮುನ್ನ ಅವುಗಳ ನಿಯಂತ್ರಣ ಕ್ರಮಕೈಗೊಳ್ಳುವುದು ಜಾಣತನ. ಆದ್ದರಿಂದ ಸ್ಥಳೀಯ ವೈದ್ಯಾಧಿಕಾರಿಗಳು ಈ ಕಾಯಿಲೆ ಉಲ್ಬಣಗೊಳ್ಳುವುದಕ್ಕೆ ಮುನ್ನವೇ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.ಇಲಾಖೆಯಲ್ಲಿ ಕೊರತೆ ಇರುವ ಕ್ಷೇತ್ರವ್ಯಾಪ್ತಿಯ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ನೇಮಕಕ್ಕೆ ಶೀಘ್ರ ಕ್ರಮ ವಹಿಸಲಾಗುವುದು. ಈ ಹುದ್ದೆಗಳು ಬಹಳ ದಿನಗಳಿಂದ ಖಾಲಿ ಇದ್ದು, ಅವುಗಳನ್ನು ತ್ವರಿತವಾಗಿ ಭರ್ತಿಗೊಳಿಸಲು ಗಮನಹರಿಸಲಾಗುವುದು ಎಂದರು.ಸೊರಬ ತಾಲೂಕಿನ ಚಂದ್ರಗುತ್ತಿ ಮತ್ತು ಕೋಣಂದೂರು ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯ ಸುಸಜ್ಜಿತ ಕಟ್ಟಡವಿದೆ. ಅಗತ್ಯವಾಗಿರುವ ಸಿಬ್ಬಂದಿ ಹಾಗೂ ಮೂಲಭೂತ ಪರಿಕರಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಸಾಗರ ಮತ್ತು ಭದ್ರಾವತಿ ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಹಾಗೂ ಭದ್ರಾವತಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇಕೇರ್ ಫಿಸಿಯೋಥೆರಪಿ ಕೇಂದ್ರಗಳನ್ನು ಆರಂಭಿಸಲಾಗುವುದು. ಜಿಲ್ಲೆಯನ್ನು ಅಂಧತ್ವ ಮುಕ್ತವನ್ನಾಗಿಸಲು ವಿಶೇಷ ಆಂದೋಲನವನ್ನು ಆರಂಭಿಸಲಾಗುತ್ತಿದ್ದು, ಅದರ ವ್ಯವಸ್ಥಿತ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ಸರ್ಕಾರದಿಂದ ಒದಗಿಸಲಾಗುವುದು. ಆಶಾಕಿರಣ ಎಂಬ ಯೋಜನೆ ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಇದ್ದು, ಅದನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಸಾಗರ ತಾಲೂಕಿನ ಆಯ್ದ ಒಂದು ಪ್ರದೇಶದಲ್ಲಿ ಮಾತ್ರವೇ ಕಂಡುಬರುವ ಹಂದಿಗೋದು ಕಾಯಿಲೆಗೆ ವೈಜ್ಞಾನಿಕ ಅಧ್ಯಯನ ನಡೆಸಿ, ನಿಯಂತ್ರಣಕ್ಕಾಗಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕೂಡಲೇ ವಿಸ್ತೃ ತ ವರದಿ ನೀಡುವಂತೆ ಆರೋಗ್ಯ ಇಲಾಖೆ ಆಯುಕ್ತ ಕೆ.ಬಿ.ಶಿವಕುಮಾರ್ ಅವರಿಗೆ ಸೂಚಿಸಿದರು.ತಜ್ಞ ವೈದ್ಯರ ನೇಮಕ, ಫಾರ್ಮಾಸಿಸ್ಟ್‌ಗಳ ನೇಮಕ, ಹೊರಗುತ್ತಿಗೆ ನೌಕರರ ಕಾಯಂಮಾತಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ವೈದ್ಯರ ಹಾಜರಾತಿ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಲು ಉದ್ದೇಶಿಸಲಾಗಿದೆ. ಮಧುಮೇಹ ಮತ್ತು ರಕ್ತದೊತ್ತಡದಿಂದ ಬಾಧಿತರಾಗಿರುವವರ ಉಚಿತ ಆರೋಗ್ಯ ತಪಾಸಣೆ ನಡೆಸಿ, ಅವರ ಮನೆಮನೆಗೆ ಔಷಧಗಳನ್ನು ತಲುಪಿಸಲು ಉದ್ದೇಶಿಸಲಾಗಿದೆ. ಜನರ ಆರೋಗ್ಯ ಹದಗೆಡುವ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ಈ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಆಯುಕ್ತ ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ಸೇರಿದಂತೆ ಆರೋಗ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಉಪಸ್ಥಿತರಿದ್ದರು.ಸಹಜ ಹೆರಿಗೆಗೆ ಆದ್ಯತೆ ನೀಡುವಂತೆ ಸೂಚನೆಖಾಸಗಿ ಸ್ತ್ರೀರೋಗ ಮತ್ತು ಪ್ರಸೂತಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ಶಸ್ತ್ರಚಿಕಿತ್ಸೆಗಳು ಹೆಚ್ಚಾಗಿವೆ. ಇವುಗಳನ್ನು ನಿಯಂತ್ರಿಸಿ, ಸಹಜ ಹೆರಿಗೆ ಆದ್ಯತೆ ನೀಡುವಂತೆ ಪ್ರಸೂತಿ ವೈದ್ಯರಿಗೆ ಸೂಚಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಶೇ.70ರಷ್ಟಿರುವ ಆಪರೇಶನ್‍ಗಳ ಪ್ರಮಾಣ ಶೇ.25ಕ್ಕೆ ಇಳಿಸುವಂತೆಯೂ ಸಲಹೆ ನೀಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ತಾವು ರೋಗಿಗಳಿಗೆ ನೀಡುವ ಚಿಕಿತ್ಸೆಗೆ ವಿಧಿಸುತ್ತಿರುವ ದರವನ್ನು ಜನಸಾಮಾನ್ಯರಿಗೆ ಕಾಣುವಂತೆ ದರಪಟ್ಟಿ ಪ್ರದರ್ಶಿಸಬೇಕು. ತಪ್ಪಿದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಅಂತಹ ಆಸ್ಪತ್ರೆಗಳ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸುವಂತೆ ಅವರು ಸೂಚಿಸಿದರು.