ಸಾರಾಂಶ
- ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಅನೀಸ್ ಪಾಷ ಮಿಂಚಂಚೆ
- - -ದಾವಣಗೆರೆ: ನಾಗಪುರದ ಕೋಮು ಗಲಭೆಗೆ ಕೇಂದ್ರ, ರಾಜ್ಯ ಸರ್ಕಾರಗಳೇ ನೇರ ಹೊಣೆ. ಈ ಹಿನ್ನೆಲೆ ಮಹಾರಾಷ್ಟ್ರ ಮುಖ್ಯಮಂತ್ರಿ, ಪ್ರಧಾನಮಂತ್ರಿ ಹಾಗೂ ಛಾವಾ ಸಿನಿಮಾ ನಿರ್ಮಾಪಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪೀಪಲ್ಸ್ ಲಾಯರ್ಸ್ ಗಿಲ್ಡ್ ರಾಜ್ಯ ಸಂಚಾಲಕ, ಹಿರಿಯ ವಕೀಲ ಅನೀಸ್ ಪಾಷ ಒತ್ತಾಯಿಸಿದ್ದಾರೆ.
ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ನಾಗಪುರದಲ್ಲಿ ಕೋಮುಗಲಭೆ ಸೃಷ್ಟಿಯಾಗಿ, ಕೋಟ್ಯಂತರ ರು. ಮೌಲ್ಯದ ಆಸ್ತಿಗಳು ನಷ್ಟವಾಗಿವೆ. ಜೀವಗಳಿಗೆ ತೊಂದರೆ ಆಗಿರುವ ಘಟನೆ ಆತಂಕದ ಸಂಗತಿ ಎಂದು ಮಿಂಚಂಚೆ ಮೂಲಕ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.ಛಾವಾ ಸಿನಿಮಾ ಇದಕ್ಕೆಲ್ಲಾ ಮೂಲಕಾರಣ ಎಂಬುದು ತಿಳಿದುಬಂದಿದೆ. ಕೆಲ ಸಿನಿಮಾಗಳು ವಾಣಿಜ್ಯ ಚಿತ್ರಗಳನ್ನು ತಯಾರಿಸುವ ಭರದಲ್ಲಿ ಇತಿಹಾಸವನ್ನೇ ಮರೆತು ಅಥವಾ ಇತಿಹಾಸ ತಿರುಚಿ ಅಥವಾ ನೂರಾರು ವರ್ಷಗಳ ಹಿಂದಿನ ಸಂದರ್ಭದ ಇತಿಹಾಸವನ್ನು ಕೆದಕಿ, ಜನಸಾಮಾನ್ಯರ ಭಾವನೆಗಳನ್ನು ಉದ್ರೇಕಗೊಳಿಸಿ, ಕೇವಲ ಹಣ ಗಳಿಸುವ ಉದ್ದೇಶದಿಂದ ಕೆಲವು ನಿರ್ಮಾಪಕರು ಅಂತಹ ಚಿತ್ರಗಳನ್ನು ತಯಾರು ಮಾಡುತ್ತಿದ್ದಾರೆ. ಈಚಿನ ದಿನಗಳಲ್ಲಿ ಹೆಚ್ಚಿನ ಚಿತ್ರಗಳು ಮಾನವೀಯತೆಗೆ ಬೆಲೆ ಕೊಡದೇ ಕ್ರೌರ್ಯವನ್ನೇ ವಿಜೃಂಭಿಸುವ ಚಿತ್ರವನ್ನಾಗಿ ಬಿಡುಗಡೆ ಮಾಡಲಾಗುತ್ತಿದೆ. ಛಾವಾ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಪ್ರಧಾನಿ ಮೋದಿ ಸಿನಿಮಾದ ಬಗ್ಗೆ ಪ್ರಶಂಸೆ ಮಾಡಿ, ಹೇಳಿಕೆ ನೀಡಿದ್ದು ಅತ್ಯಂತ ಕಳವಳಕಾರಿ ಸಂಗತಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ಈ ಬಗ್ಗೆ ತನಿಖೆ ಕೈಗೊಂಡು, ಛಾವಾ ಸಿನಿಮಾ ನಿರ್ಮಾಪಕರು, ಮಹಾರಾಷ್ಟ್ರ ಸಿಎಂ ಹಾಗೂ ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಅನೀಸ್ ಪಾಷ ಮನವಿ ಮಾಡಿದ್ದಾರೆ.- - -
-26ಕೆಡಿವಿಜಿ4: ಅನೀಸ್ ಪಾಷ