ಸಾರಾಂಶ
ಕನ್ನಡಪ್ರಭ ವಾರ್ತೆ ಕಾರವಾರ
ಕಾಂಗ್ರೆಸ್ ನಾಯಕರ ಬಗ್ಗೆ ತುಚ್ಛವಾಗಿ ಮಾತನಾಡಿರುವ ಕುಮಟಾ ಮೂಲದ ಶ್ರೀಕಾಂತ ಹೆಗಡೆ ಎನ್ನುವವರ ವಿರುದ್ಧ ಪೊಲೀಸ್ ದೂರು ನೀಡಿದ್ದು, ಕ್ರಮವಾಗಬೇಕು ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಆರ್.ಎಚ್. ನಾಯ್ಕ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿ ಡಾ. ಅಂಜಲಿ ನಿಂಬಾಳಕರ ಅವರನ್ನು ಏಕೆ ಗೆಲ್ಲಿಸಬೇಕು ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ತುಣಕನ್ನು ಹಾಕಲಾಗಿತ್ತು. ಆದರೆ, ಶ್ರೀಕಾಂತ ಹೆಗಡೆ ಎನ್ನುವವರು ಪಕ್ಷದ ನಾಯಕರನ್ನು ನಿಂದಿಸಿದ್ದಾರೆ. ಈ ಬಗ್ಗೆ ಈಗಾಗಲೇ ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರ ಮೇಲೆ ಕ್ರಮವಾಗಬೇಕು. ಶ್ರೀಕಾಂತ ಬೇಷರತ್ ಕ್ಷಮೆ ಯಾಚಿಸಬೇಕು. ಅದಿಲ್ಲವಾದರೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗುರುವಾರ ದೂರು ನೀಡಿದ್ದು, ಆರೋಪಿಯನ್ನು ಹುಡುಕುವ ಕೆಲಸವನ್ನು ಪೊಲೀಸರು ಮಾಡಿಲ್ಲ. ಈ ಹಿಂದೆ ಕಾರವಾರ, ಕುಮಟಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಣಾರ್ಹ ಪೋಸ್ಟರ್ ಹಾಕಿದ್ದಾರೆ ಎಂದು ಅವರನ್ನು ಬಂಧಿಸಿದ್ದರು. ಈಗ ಶ್ರೀಕಾಂತ ಅವರ ವಿರುದ್ಧ ಏಕೆ ಕ್ರಮತೆಗದುಕೊಳ್ಳುತ್ತಿಲ್ಲ? ನಮ್ಮ ಅಭ್ಯರ್ಥಿಯ ಪರ ನಾವು ಹೇಳಿಕೊಳ್ಳುವುದು ತಪ್ಪೇ ಎಂದು ಪ್ರಶ್ನಿಸಿದರು. ಸೂರಜ ನಾಯ್ಕ, ಲಕ್ಷ್ಮೀಕಾಂತ ನಾಯ್ಕ, ಅಜಯ ಸಿಗ್ಳಿ, ಅನಂತ ನಾಯ್ಕ, ಅಶ್ರಫ್ ಇದ್ದರು.ಸಾಮಾಜಿಕ ಜಾಲತಾಣ ಪೋಸ್ಟ್‌ಗೂ ಬಿಜೆಪಿಗೂ ಸಂಬಂಧ ಇಲ್ಲ: ಸದಾನಂದ ಭಟ್‌ಶಿರಸಿ: ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ನಿಂದಿಸಿ ಮಾಡಿರುವ ಪೋಸ್ಟ್ ಖಂಡನೀಯ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಎಂದು ಹೇಳಿಕೊಂಡು ಪೋಸ್ಟನ್ನು ಹಾಕಿರುವುದು ಬಿಜೆಪಿಯ ಕುರಿತು ತಪ್ಪು ಕಲ್ಪನೆ ಉಂಟು ಮಾಡುವಂಥದ್ದಾಗಿದೆ. ಇದಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಸದಾನಂದ ಭಟ್ಟ ನಿಡಗೋಡ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ರೀತಿ ಪೋಸ್ಟ್ ಮಾಡಿದವರು ಬಿಜೆಪಿಯ ಯಾವುದೇ ಕಾರ್ಯಕರ್ತನಾಗಿರುವುದಿಲ್ಲ. ಕಾಂಗ್ರೆಸ್‌ನವರು ಈ ಕುರಿತು ಪೊಲೀಸ್ ದೂರು ನೀಡಿದ್ದು, ಬಿಜೆಪಿ ಕಾರ್ಯಕರ್ತರು ಎಂದು ಉಲ್ಲೇಖ ಮಾಡುತ್ತಿದ್ದಾರೆ ಮತ್ತು ಜಾತಿಯ ಕುರಿತು ಮತ್ತು ಅವಹೇಳನಕರ ರೀತಿಯಲ್ಲಿ ಪ್ರಕಟಿಸುತ್ತಿದ್ದಾರೆ ಎನ್ನುವ ಬಿಜೆಪಿಯ ಮೇಲಿನ ಆರೋಪ ಸತ್ಯಕ್ಕೆ ದೂರವಾಗಿದೆ. ಈ ರೀತಿ ಪೋಸ್ಟ್ ಮಾಡುವ ಯಾವುದೇ ಅಗತ್ಯತೆ ಬಿಜೆಪಿಗಾಗಲಿ, ಬಿಜೆಪಿ ಕಾರ್ಯಕರ್ತರಿಗಾಗಲಿ ಇರುವುದಿಲ್ಲ. ಬಿಜೆಪಿಯ ಕುರಿತು ವೃಥಾ ಆರೋಪ ಮಾಡುವುದು ಸರಿಯಲ್ಲ. ಬಿಜೆಪಿಗೆ ಸಂಬಂಧವಿಲ್ಲದ ವಿಷಯವನ್ನು ಬಳಸಿಕೊಂಡು ಕಾಂಗ್ರೆಸ್ ಬೇರೆ ರೀತಿಯಲ್ಲಿ ಪ್ರಚಾರ ಪಡೆಯುವ ಪ್ರಯತ್ನವಾಗಿರಬಹುದು ಎಂದು ಹೇಳಿದ್ದಾರೆ.