ಹಿಂದೂಗಳ ಶ್ರದ್ಧಾಕೇಂದ್ರ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಕೆಲ ಕಿಡಿಗೇಡಿಗಳು ಅಪಪ್ರಚಾರ ನಡೆಸುತ್ತಿದ್ದಾರೆ. ಇಂತಹವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಅನಾಮಿಕ ಹೇಳಿದ ಎಂದಾಕ್ಷಣ ಸರ್ಕಾರ ಎಸ್‌ಐಟಿ ರಚಿಸಿ, ಶವಗಳ ಶೋಧ ಮಾಡುತ್ತಿರುವುದನ್ನು ಖಂಡನೀಯ ಎಂದು ಆರೋಪಿಸಿ ಸಹಸ್ರಾರು ಮಂಜುನಾಥ ಸ್ವಾಮಿ ಭಕ್ತರು ಹೊನ್ನಾಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

- ಪ್ರತಿಭಟನೆಯಲ್ಲಿ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಸುರೇಶ್ ಆಗ್ರಹ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹಿಂದೂಗಳ ಶ್ರದ್ಧಾಕೇಂದ್ರ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಕೆಲ ಕಿಡಿಗೇಡಿಗಳು ಅಪಪ್ರಚಾರ ನಡೆಸುತ್ತಿದ್ದಾರೆ. ಇಂತಹವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಅನಾಮಿಕ ಹೇಳಿದ ಎಂದಾಕ್ಷಣ ಸರ್ಕಾರ ಎಸ್‌ಐಟಿ ರಚಿಸಿ, ಶವಗಳ ಶೋಧ ಮಾಡುತ್ತಿರುವುದನ್ನು ಖಂಡನೀಯ ಎಂದು ಆರೋಪಿಸಿ ಸಹಸ್ರಾರು ಮಂಜುನಾಥ ಸ್ವಾಮಿ ಭಕ್ತರು ಹೊನ್ನಾಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಹಿರೇಕಲ್ಮಠದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಶ್ರೀ ಮಂಜುನಾಥ ಸ್ವಾಮಿ ಹಾಗೂ ವೀರೇಂದ್ರ ಹೆಗ್ಗಡೆ ಅವರ ಭಾವಚಿತ್ರಗಳೊಂದಿಗೆ ಮೆರವಣಿಗೆ ನಡೆಸಿದ ಭಕ್ತರು ಉಪ ವಿಭಾಗಾಧಿಕಾರಿ ವಿ.ಅಭಿಷೇಕ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ, ಪುರಸಭೆ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹೊಸಕೇರಿ ಸುರೇಶ್ ಮಾತನಾಡಿ, ಶ್ರೀ ಕ್ಷೇತ್ರ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಮಾಡುತ್ತಿರುವ ಆರೋಪಗಳು ನಿರಾಧಾರ. ಇದು ಗೊತ್ತಿದ್ದರೂ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಹಾಗೂ ಸಮೀರ್‌ನಂತಹ ಸಮಾಜಘಾತುಕರು ಹಣದ ಆಸೆಗೆ ಹೀಗೆ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭವಾದ ನಂತರ ರಾಜ್ಯದಲ್ಲಿ ಮಹಿಳಾ ಸಬಲೀಕರಣವಾಗಿದೆ ಎಂದರು.

ಕತ್ತಿಗೆ ನಾಗರಾಜ್ ಮಾತನಾಡಿ, ಸೌಜನ್ಯ ಪ್ರಕರಣದಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರೇ ಸುದ್ದಿಗೋಷ್ಠಿ ನಡೆಸಿ, ಸೌಜನ್ಯ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾಗಿ ಹೇಳಿದ್ದಾರೆ. ಆದಾಗ್ಯೂ ಕ್ಷೇತ್ರ ಹಾಗೂ ಹೆಗ್ಗಡೆ ಕುಟುಂಬದ ಬಗ್ಗೆ ಅಪಪ್ರಚಾರ ಸರಿಯಲ್ಲ ಎಂದು ಹೇಳಿದರು.

ಮುಖಂಡ ಎಂ.ಆರ್. ಮಹೇಶ್ ಮಾತನಾಡಿ, ಮಹೇಶ್ ತಿಮರೋಡಿ ಬಾಂಬೆಯಿಂದ ಗಡಿಪಾರಿಗೆ ಒಳಗಾಗಿ ಉಜಿರೆಗೆ ಬಂದವನು. ಸಮೀರ್ ಒಬ್ಬ ಧರ್ಮಾಂಧ, ಮಟ್ಟಣ್ಣನವರ್ ಕಲೆಕ್ಷನ್ ಗಿರಾಕಿ. ಇಂತಹವರೆಲ್ಲ ಸೇರಿಕೊಂಡು ಕ್ಷೇತ್ರಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಇಲ್ಲಿಗೇ ನಿಲ್ಲಿಸಿದರೆ ಸರಿ. ಇಲ್ಲವಾದರೆ ಭಕ್ತರು ನಿಮ್ಮ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕುಮಾರ ಸ್ವಾಮಿ, ಲಿಂಗರಾಜ್, ಮಂಜುನಾಥ್ ಸರಳಿನಮನೆ, ಚಂದ್ರಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್ ಮಾತನಾಡಿದರು. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸುಮಾರು 2 ತಾಸು ರಸ್ತೆ ತಡೆ ನಡೆಸಿ ಮಾನವ ಸರಪಳಿ ನಿರ್ಮಿಸಿ, ಘೋಷಣೆ ಕೂಗಲಾಯಿತು.

ರಮೇಶ್ ಕತ್ತಿಗೆ, ನಟರಾಜ್, ಶ್ರೀನಿವಾಸ್ ನ್ಯಾಮತಿ, ಅಣಬೇರು ಮಂಜಣ್ಣ, ರಾಜಣ್ಣ ದಾವಣಗೆರೆ, ರುದ್ರೇಶ್ ಕುಂಕುವ, ಪತ್ರಕರ್ತ ಸುರೇಶ್, ಸಾವಿರಾರು ಭಕ್ತರು ಭಾಗವಹಿಸಿದ್ದರು.

- - -

-13ಎಚ್.ಎಲ್.ಐ3.ಜೆಪಿಜಿ:

ಹಿಂದೂಗಳ ಶ್ರದ್ಧಾಕೇಂದ್ರ ಧರ್ಮಸ್ಥಳ ವಿರುದ್ಧ ಕೆಲ ಕಿಡಿಗೇಡಿಗಳ ಅಪಪ್ರಚಾರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಶ್ರೀ ಮಂಜುನಾಥ ಸ್ವಾಮಿ ಭಕ್ತರು ಹೊನ್ನಾಳಿಯಲ್ಲಿ ಪ್ರತಿಭಟನೆ ನಡೆಸಿದರು.