ತಪ್ಪಿತಸ್ಥರು ಯಾರೇ ಆಗಿದ್ರು ಕ್ರಮವಾಗಲಿ

| Published : Sep 02 2024, 02:05 AM IST

ಸಾರಾಂಶ

ಆ.30 ರಂದು ಗುಳೇದಗುಡ್ಡ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ದಿನ ಗಲಭೆ ಸೃಷ್ಟಿಸಲು ಗೂಂಡಾಗಳನ್ನು ಕರೆಸಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ನಾಲ್ವರು ಆರೋಪಿಗಳನ್ನು ಬಂಧಿಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬಾದಾಮಿ ತಾಲೂಕು ಕಾಂಗ್ರೆಸ್ ಪಕ್ಷದ ಮುಖಂಡರು ಭಾನುವಾರ ಪಿ.ಎಸ್.ಐ.ವಿಠ್ಠಲ ನಾಯಕ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಆ.30 ರಂದು ಗುಳೇದಗುಡ್ಡ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ದಿನ ಗಲಭೆ ಸೃಷ್ಟಿಸಲು ಗೂಂಡಾಗಳನ್ನು ಕರೆಸಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ನಾಲ್ವರು ಆರೋಪಿಗಳನ್ನು ಬಂಧಿಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬಾದಾಮಿ ತಾಲೂಕು ಕಾಂಗ್ರೆಸ್ ಪಕ್ಷದ ಮುಖಂಡರು ಭಾನುವಾರ ಪಿ.ಎಸ್.ಐ.ವಿಠ್ಠಲ ನಾಯಕ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಮುಖಂಡರು, ಗುಳೇದಗುಡ್ಡ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಮಾಡುವ ಚುನಾವಣೆಯ ಸಂದರ್ಭದಲ್ಲಿ ಬಾಗಲಕೋಟೆ ನಗರದಿಂದ ಸಮಾಜಘಾತುಕ ಗೂಂಡಾಗಳನ್ನು ಕರೆಸಿ, ಮಾರಕಾಸ್ತ್ರಗಳನ್ನು ಸಂಗ್ರಹ ಮಾಡಿಕೊಂಡು ಗಲಭೆ ಸೃಷ್ಟಿ ಮಾಡುವ ದುರುದ್ದೇಶದಿಂದ ಚುನಾವಣೆ ನಡೆಯುವ ಸ್ಥಳದಲ್ಲಿ ಹಾಜರಿದ್ದರು. ಪೊಲೀಸ್ ಇಲಾಖೆಯ ಮುಂಜಾಗ್ರತಾ ಕ್ರಮವಾಗಿ ಆರೋಪಿಗಳ ಹಾವ-ಭಾವಗಳನ್ನು ಗುರುತಿಸಿ ಆರೋಪಿತರ ವಾಹನಗಳಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ. ಇನ್ನೂ ನಾಲ್ಕು ಜನ ಪರಾರಿಯಾಗಿದ್ದಾರೆ. ಈ ಆರೋಪಿಗಳನ್ನು ಶೀಘ್ರ ಪತ್ತೆ ಮಾಡಿ ಈ ಘಟನೆ ಹಿಂದೆ ಯಾರಿದ್ದಾರೆ ಎಂಬ ಸತ್ಯ ತಿಳಿದುಕೊಂಡು ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಈ ಸಮಾಜಘಾತಕ ರೌಡಿಗಳನ್ನು ಯಾವ ಉದ್ದೇಶಕ್ಕಾಗಿ ಈ ಚುನಾವಣೆ ನಡೆಯುವ ಸಂದರ್ಭದಲ್ಲಿ ಯಾರು ಇವರನ್ನು ಕರಿಸಿದ್ದರು?, ಈ ರೌಡಿಗಳ ಹಿಂದೆ ಇರುವ ಪ್ರಭಾವಿ ವ್ಯಕ್ತಿಗಳು ಯಾರು?, ಶಾಂತಿ ಸುವ್ಯವಸ್ಥೆಯಿಂದ ಇರುವ ಗುಳೇದಗುಡ್ಡ ಪಟ್ಟಣದಲ್ಲಿ ಭಯಾನಕ ವಾತಾವರಣವನ್ನು ಸೃಷ್ಟಿ ಮಾಡಲು ಲಾಂಗು, ಮಚ್ಚು, ತಲ್ವಾರು ತರಿಸಿದ ಪ್ರಭಾವಿ ವ್ಯಕ್ತಿಗಳು ಯಾರು? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಹೀಗಾಗಿ ಈ ಪ್ರಕರಣವನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬಂಧನವಾಗಿರುವ ಆರೋಪಿಗಳಿಗೆ ಜಾಮೀನು ನೀಡಲು ಹಾಗೂ ಕಾನೂನಿನ ನೆರವು ನೀಡಲು ತೆರೆಮರೆಯಲ್ಲಿ ಕಾರ್ಯ ನಿರ್ವಹಿಸುವವರು ಯಾರು? ಎಂಬುವುದನ್ನು ಪತ್ತೆ ಹಚ್ಚಬೇಕು ಹಾಗೂ ಇಂತಹ ದ್ವೇಷ ಮತ್ತು ನೀಚ ರಾಜಕಾರಣಕ್ಕಾಗಿ ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡಲು ಯತ್ನಿಸಿದವರು ಯಾರೇ ಆಗಿರಲಿ ಅವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿ ಮಾಡಬೇಕು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಕಾಂಗ್ರೆಸ್‌ ಮುಖಂಡರಾದ ಶಿವಕುಮಾರ ಹಿರೇಮಠ, ಮಹೇಶ ಹೊಸಗೌಡ್ರ, ಬಿ.ಆರ್‌.ತಳವಾರ, ಎಸ್‌.ಆರ್‌.ದಳವಾಯಿ, ರುದ್ರಗೌಡ್ರ ಗೌಡ್ರ, ಹನಮಂತ ಅಪ್ಪನ್ನವರ, ಭರಮಪ್ಪ ಕಾಟನ್ನವರ, ಲಕ್ಷ್ಮಣ ಕೊಚಲ, ಶೌಕತ್ ವಾಚಮೇಕರ, ರಂಗನಾಥ ಮೇಟಿಕಲ್, ಬಸವರಾಜ ಡೊಳ್ಳಿನ, ಹುಲ್ಲಪ್ಪ ಬಿಳೆಕಲ್, ಮುತ್ತಣ್ಣ ಬಾಗಲೆ, ಸೂರಪ್ಪ ಕೊಪ್ಪನ್ನವರ, ಶರಣಪ್ಪ ತಮಿನಾಳ, ಶಫಿ ಜಲಗೇರಿ, ನಾಗಪ್ಪ ತಳವಾರ, ಚಿದಾನಂದ ತಳವಾರ, ಶಿವಯ್ಯ ಹಿರೇಮಠ, ಹನಮಂತ ಡೊಳ್ಳಿ, ಮಂಜುನಾಥ ಹಟ್ಟಿ, ಸಾಗರ ವಡ್ಡರ, ಸಂತೋಷ ಕಟಾಪೂರ, ಆನಂದ ಕೋಟಿ, ಬಸವರಾಜ ಪಾತ್ರೋಟಿ ಸೇರಿದಂತೆ ಇತರೆ ಮುಖಂಡರು ಭಾಗವಹಿಸಿದ್ದರು.