ಬೋಧಕ ಸಿಬ್ಬಂದಿ, ಸ್ಟಾಫ್‌ನರ್ಸ್ ನೇಮಕಕ್ಕೆ ಕ್ರಮ

| Published : May 29 2025, 01:43 AM IST

ಸಾರಾಂಶ

ಶಿವಮೊಗ್ಗ: ಇಲ್ಲಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಗೆ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಶಿವಮೊಗ್ಗ: ಇಲ್ಲಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಗೆ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆಯ ಪ್ರಾರಂಭದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ಪ್ರಶಾಂತ ಕೆಕೊಡ ಮಾತನಾಡಿ, ಕಾಲೇಜಿನಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಸೇರಿದಂತೆ ಬೋಧಕ ಸಿಬ್ಬಂದಿಗಳ ಕೊರತೆ ಇದೆ. ಆದ ಕಾರಣ ಬಿಎಎಂಎಸ್ ವಿದ್ಯಾರ್ಥಿಗಳ ಮಂಜೂರು ಸೀಟು 60 ಇದ್ದು, ದಾಖಲು ಸಂಖ್ಯೆ 33ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದರು.

ಆಯುರ್ವೇದ ಬೋಧನಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಕೊರತೆ ಸಹ ಇದ್ದು, ಇವರನ್ನು ನೇಮಕ ಮಾಡುವಂತೆ ಹಾಗೂ ಹೊಸದಾಗಿ ಪಿಜಿ ಕೋರ್ಸ್ ಆರಂಭಿಸಲು ಜಾಗದ ಅವಶ್ಯಕತೆ ಇದ್ದು, ಸ್ಥಳಾವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ವಿದ್ಯಾರ್ಥಿಗಳು ಮಾತನಾಡಿ, ಬಾಲಕರ ಹಾಸ್ಟೆಲ್ ಇಲ್ಲ. ಆದ್ದರಿಂದ ಸಮಸ್ಯೆಯಾಗುತ್ತಿದೆ. ಶೀಘ್ರದಲ್ಲಿ ಹಾಸ್ಟೆಲ್‌ಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.

ಕ್ಯಾಂಟಿನ್, ವಸ್ತು ಸಂಗ್ರಹಾಲಯ, ಆಡಿಟೋರಿಯಂ, ಇಂಟರ್ನ್ಗಳಿಗೆ ಸ್ಟೇಫಂಡ್‌ ಹೆಚ್ಚಳ ಮಾಡುಂತೆ ಕೋರಿದರು. ಮತ್ತು ವಿದ್ಯಾರ್ಥಿ ವೇತನ ಪಡೆಯುವಲ್ಲಿ ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಸಮಸ್ಯೆ ಇದ್ದು ಸರಿಪಡಿಸುವಂತೆ ಕೋರಿದರು.

ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿ, ಶಿವಮೊಗ್ಗದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆಗೆ ಬೋಧಕ ಸಿಬ್ಬಂದಿ, ಆಸ್ಪತ್ರೆಗೆ ಸ್ಟಾಫ್‌ನರ್ಸ್ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯಲ್ಲಿ 35 ಆಯುಷ್ ಕೇಂದ್ರಗಳಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಈ ಕೇಂದ್ರಗಳಿಗೆ ಸಂಬಂಧಿಸಿದಂತೆ ಜಾರಿ ಮಾಡಲಾದ ಹೊಸ ಮಾರ್ಗಸೂಚಿಯನ್ನು ಆಯುಷ್ ಇಲಾಖೆ ಪಾಲನೆ ಮಾಡಬೇಕು ಎಂದು ಸೂಚಿಸಿದರು.

ಆಯುರ್ವೇದ ಆಸ್ಪತ್ರೆಗೆ ಹೆಚ್ಚುವರಿ ನೀರಿನ ಸಂಪರ್ಕ ಅಗತ್ಯವಿದ್ದು, ಶೀಘ್ರವೇ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ವಿದ್ಯಾರ್ಥಿಗಳ ಬೇಡಿಕೆಗಳನ್ನು ಸಹ ಶೀಘ್ರದಲ್ಲೇ ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಕಳೆದ ಸಾಲಿನಲ್ಲಿ ರ‍್ಯಾಂಕ್ ಪಡೆದ ಬಿಎಎಂಎಸ್ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ, ಅಭಿನಂದಿಸಿದರು.

ಸಭೆಯಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಪ್ರಸನ್ನಕುಮಾರ್, ಮಾಜಿ ಪಾಲಿಕೆ ಸದಸ್ಯ ಯೋಗೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಲಿಂಗರಾಜು, ಕಾಲೇಜಿನ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.