ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಬ್ಬೂರು-ಗೂಳೂರು, ಬೆಳ್ಳಾವಿ ಏತ ನೀರಾವರಿ ಯೋಜನೆ, ಸಿದ್ಧಗಂಗಾ ಮಠಕ್ಕೆ ನೀರು ಪೂರೈಸುವ ಮತ್ತು ದೇವರಾಯಪಟ್ಟಣ ಏತ ನೀರಾವರಿ ಯೋಜನೆಗಳ ವಿದ್ಯುತ್‌ ಬಿಲ್‌ ಬಾಕಿ ಪಾವತಿ ಮಾಡಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ಅಡಚಣೆ ಇಲ್ಲದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಯವರು ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದರು.ಅವರು ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡರ ಪ್ರಶ್ನೆಗೆ ಉಪಮುಖ್ಯಮಂತ್ರಿಗಳ ಪರವಾಗಿ ಉತ್ತರಿಸಿ ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆಯ ವಿದ್ಯುತ್‌ ಬಿಲ್‌ ಬಾಕಿ 9 ಕೋಟಿ ರುಪಾಯಿಗಳನ್ನು ಮತ್ತು ಇನ್ನು ಎರಡು ಕುಡಿಯುವ ನೀರಿನ ಯೋಜನೆಗಳ ತಲಾ 30 ಲಕ್ಷ ರುಪಾಯಿ ಮತ್ತು 50 ಲಕ್ಷ ರುಪಾಯಿಗಳನ್ನು ಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದರು.ಕುಡಿಯುವ ನೀರು ಪೂರೈಕೆ ಮತ್ತು ನರ್ವುಹಣೆಗೆ ಸಂಬಂಧಿಸಿದಂತೆ ಯಾವುದೇ ಸಂದರ್ಭದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.ಇದಕ್ಕೂ ಮುಂಚೆ ಪ್ರಶ್ನೆ ಕೇಳಿದ ಸುರೇಶ್‌ ಗೌಡರು ಕಾವೇರಿ, ಕೃಷ್ಣಾ, ವಿಶ್ವೇಶ್ವರಯ್ಯ ಮತ್ತು ಕೆಬಿಜೆಎನ್ಎಲ್‌ ನಿಗಮಗಳಿಂದ ವಿವಿಧ ಎಸ್ಕಾಂಗಳಿಗೆ ಪಾವತಿ ಮಾಡಬೇಕಾದ ವಿದ್ಯುತ್‌ ಬಾಕಿ ಕಳೆದ ಮೂರು ವರ್ಷಗಳಲ್ಲಿ 2158 ಕೋಟಿ ರೂಪಾಯಿ ಎಂದು ಜಲಸಂಪನ್ಮೂಲ ಸಚಿವರು ಉತ್ತರ ಕೊಟ್ಟಿದ್ದಾರೆ. ಇಷ್ಟು ಬಾಕಿ ಉಳಿಸಿಕೊಂಡಿರುವುದರಿಂದ ಸರಿಯಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಈ ಬಾಕಿ ಉಳಿಯಬಾರದು ಎಂದರೆ ಮೀನು ಸಾಕಣೆ, ಸೌರ ವಿದ್ಯುತ್‌ ಘಟಕಗಳನ್ನು ಸ್ಥಾಪಿಸಿ ವಿದ್ಯುತ್‌ ಬಿಲ್‌ ಬಾಕಿ ಉಳಿಯದಂತೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿವಕುಮಾರ್‌ ಅವರು ತಿಳಿಸಿದ್ದರು. ಅದು ಏನೂ ಆದಂತೆ ಕಾಣುವುದಿಲ್ಲ ಎಂದು ಟೀಕಿಸಿದರು. ಸರ್ಕಾರದ ಆರ್ಥಿಕ ಸ್ಥಿತಿ ಬಹಳ ಚೆನ್ನಾಗಿದೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೆ, ಇಷ್ಟು ಚಿಕ್ಕ ಮೊತ್ತವನ್ನು ಮೂರು ವರ್ಷಗಳಿಂದ ಏಕೆ ಉಳಿಸಿಕೊಂಡಿದ್ದಾರೆ? ಇದರಿಂದ ಸಿದ್ಧಗಂಗಾ ಮಠಕ್ಕೆ ನೀರು ಪೂರೈಕೆ ಮಾಡುವ ದೇವರಾಯಪಟ್ಟಣ ಏತ ನೀರಾವರಿ ಯೋಜನೆ ಮಾತ್ರವಲ್ಲದೆ, ಹೆಬ್ಬೂರು ಏತ ನೀರಾವರಿ ಮತ್ತು ಬೆಳ್ಳಾವಿ ಏತ ನೀರಾವರಿ ಯೋಜನೆಗಳ ವಿದ್ಯುತ್‌ ಬಿಲ್‌ ಪಾವತಿಯಾಗದ ಕಾರಣ ಬೆಸ್ಕಾಂ ನವರು ಆಗಾಗ ವಿದ್ಯುತ್‌ ಸಂರ್ಕ ಕಡಿತ ಮಾಡುತ್ತಾರೆ. ನಾವು ನೀರು ಪೂರೈಕೆ ಆಗುವುದನ್ನೂ ನೋಡಬೇಕು. ಆಗ ವಿದ್ಯುತ್‌ ಇದೆಯೋ ಇಲ್ಲವೋ ಎಂಬುದನ್ನೂ ನೋಡಬೇಕಾಗಿದೆ. ವಿದ್ಯುತ್‌ ಸಂರ್ಕ ಕಡಿತವಾದ ಸಮಯದಲ್ಲಿ ಬೆಸ್ಕಾಂ ಎಂ.ಡಿ ಅವರಿಗೆ ಕರೆ ಮಾಡಿದರೆ ಅವರು ನಮ್ಮ ಕರೆಯನ್ನೂ ಸ್ವೀಕರಿಸುವುದಿಲ್ಲ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದರು. ಸಚಿವರ ಉತ್ತರದ ನಂತರ ಶಾಸಕರು ಸಮಾಧಾನಗೊಂಡರು.