ವಿಷಕಾರಿ ತ್ಯಾಜ್ಯ ಸಂಸ್ಕರಿಸದೆ ಹೊರಬಿಟ್ಟರೆ ಕ್ರಮ: ಶಾಸಕ

| Published : Aug 05 2025, 11:45 PM IST

ವಿಷಕಾರಿ ತ್ಯಾಜ್ಯ ಸಂಸ್ಕರಿಸದೆ ಹೊರಬಿಟ್ಟರೆ ಕ್ರಮ: ಶಾಸಕ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಕೆಲ ಕಾರ್ಖಾನೆಗಳು ಕಲುಷಿತ ರಾಸಾಯನಿಕಯುಕ್ತ ತ್ಯಾಜ್ಯ ನೀರನ್ನು ಸ್ಥಳೀಯ ಜಲಮೂಲಗಳಿಗೆ ನೇರವಾಗಿ ಬಿಡುತ್ತಿರುವುದು ಕಂಡು ಬಂದಿದೆ. ರಾಸಾಯನಿಕ ಘನತ್ಯಾಜ್ಯವನ್ನು ಕೆರೆ, ಅರಣ್ಯ ಪ್ರದೇಶಗಳಲ್ಲಿ ಸುರಿಯುತ್ತಿದ್ದು, ಇದರಿಂದ ಅಂತರ್ಜಲ, ಮಣ್ಣು, ಗಾಳಿ ಕಲುಷಿತಗೊಳ್ಳುತ್ತಿದೆ. ಅಕ್ರಮವಾಗಿ ತ್ಯಾಜ್ಯ ಸುರಿಯುವ ಇಂತಹ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಕೆಲ ಕಾರ್ಖಾನೆಗಳು ಕಲುಷಿತ ರಾಸಾಯನಿಕಯುಕ್ತ ತ್ಯಾಜ್ಯ ನೀರನ್ನು ಸ್ಥಳೀಯ ಜಲಮೂಲಗಳಿಗೆ ನೇರವಾಗಿ ಬಿಡುತ್ತಿರುವುದು ಕಂಡು ಬಂದಿದೆ. ರಾಸಾಯನಿಕ ಘನತ್ಯಾಜ್ಯವನ್ನು ಕೆರೆ, ಅರಣ್ಯ ಪ್ರದೇಶಗಳಲ್ಲಿ ಸುರಿಯುತ್ತಿದ್ದು, ಇದರಿಂದ ಅಂತರ್ಜಲ, ಮಣ್ಣು, ಗಾಳಿ ಕಲುಷಿತಗೊಳ್ಳುತ್ತಿದೆ. ಅಕ್ರಮವಾಗಿ ತ್ಯಾಜ್ಯ ಸುರಿಯುವ ಇಂತಹ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.

ಬೆಂ.ಗ್ರಾ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ ಎನ್.ಜಿ.ಟಿ ಆದೇಶ ಪಾಲನೆ, ಅಪೇರಲ್ ಪಾರ್ಕ್ ಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ಜಂಟಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ದೊಡ್ಡಬಳ್ಳಾಪುರ ತಾಲೂಕಿನ ಕೆರೆಗಳಿಗೆ ತ್ಯಾಜ್ಯ ನೀರು ಬಿಡುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕಾರ್ಖಾನೆಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಇದ್ದಲ್ಲಿ ಯಾವುದೇ ತ್ಯಾಜ್ಯ ಹೊರಗಡೆ ಬಿಡುವ ಅವಶ್ಯಕತೆ ಇಲ್ಲ. ಹಲವು ಕಾರ್ಖಾನೆಗಳು ಇದನ್ನು ಪಾಲನೆ ಮಾಡುತ್ತಿಲ್ಲ. ಅಪೇರಲ್ ಪಾರ್ಕ್ ನಲ್ಲಿ ಸುಮಾರು 2ರಿಂದ 3 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಶೌಚಾಲಯ, ಕೊಳಚೆ ನೀರು ನೇರವಾಗಿ ಕೆರೆಗಳಿಗೆ, ಕಾಲುವೆಗಳಿಗೆ ಸೇರುತ್ತಿವೆ. ಕಾರ್ಖಾನೆಗಳಲ್ಲಿ ಸರಿಯಾಗಿ ಘನತ್ಯಾಜ್ಯ ನಿರ್ವಹಣೆ ಆಗುತ್ತಿಲ್ಲ ಎಂದರು.

ಗಾರ್ಮೆಂಟ್ಸ್ ಹಾಗೂ ಸಿದ್ದ ಉಡುಪು ತಯಾರಿಕಾ ಘಟಕಗಳಲ್ಲಿ ಕೆಮಿಕಲ್ ಮಿಶ್ರಿತ ಬಣ್ಣದ ನೀರು ಬಳಸಿ ಬಟ್ಟೆ ಸಿದ್ದ ಪಡಿಸುವವರು ತ್ಯಾಜ್ಯ ನೀರನ್ನು ಹೊರಗೆ ಬಿಡುತ್ತಿದ್ದಾರೆ. ಆ ತ್ಯಾಜ್ಯ ನೀರನ್ನು ಕೂಡ ಸರಿಯಾದ ಕ್ರಮದಲ್ಲಿ ವಿಲೇವಾರಿ ಮಾಡಬೇಕು. ಇದರ ಜೊತೆಗೆ ಒಳಚರಂಡಿ ವ್ಯವಸ್ಥೆ ಆಗಬೇಕಿದೆ ಎಂದರು.

ಹಲವು ಕೆರೆಗಳು ಮಲಿನ; ಆತಂಕಕಾರಿ

ಜಿಲ್ಲಾಧಿಕಾರಿ ಬಸವರಾಜು ಮಾತನಾಡಿ, ಕಾರ್ಖಾನೆ, ಕೈಗಾರಿಕೆಗಳಲ್ಲಿ ಉತ್ಪತ್ತಿ ಆಗುವ ತ್ಯಾಜ್ಯವನ್ನು ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ ಅಲ್ಲಿಯೇ ವಿಲೇವಾರಿ ಮಾಡಿಕೊಳ್ಳಬೇಕು ಎಂದರು. ಯಾವುದೇ ಕಾರಣಕ್ಕೂ ಹೊರಗೆ ಬರಬಾರದು. ಕಾರ್ಖಾನೆಗಳ ತ್ಯಾಜ್ಯದಿಂದ ದೊಡ್ಡಬಳ್ಳಾಪುರದ ನಾಗರಕೆರೆ, ಚಿಕ್ಕತುಮಕೂರು ಕೆರೆ, ದೊಡ್ಡತುಮಕೂರು, ಮಜರಾ ಹೊಸಹಳ್ಳಿ ಕೆರೆಗಳು ಕಲುಷಿತಗೊಂಡು ಸುತ್ತಮುತ್ತಲಿನ ಹಳ್ಳಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಕುಡಿಯುವ ನೀರಿಗೆ ಯೋಗ್ಯವಿಲ್ಲ, ಕೊಳವೆ ಬಾವಿಗಳಲ್ಲಿ ನೀರು ಕಲುಷಿತಗೊಂಡಿದೆ ಎಂದು ಸುತ್ತಮುತ್ತಲಿನ ರೈತರು, ಪ್ರಗತಿ ಪರ ಚಿಂತಕರು ಅನೇಕ ಬಾರಿ ತಿಳಿಸಿದ್ದಾರೆ. ಈ ರೀತಿಯ ವಾತಾವರಣ ಬೇರೆ ಕೆರೆಗಳಿಗೂ ಆಗಬಾರದು. ಶಾಶ್ವತವಾಗಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಕೊಳಚೆ ನೀರು ಸಂಸ್ಕರಣಾ ಘಟಕ, ಘನತ್ಯಾಜ್ಯ ನಿರ್ವಹಣೆ, ಸಾಮಾನ್ಯ ಸಂಸ್ಕರಣಾ ಘಟಕ, ಪರಿಸರ ಸ್ಥಾವರಗಳನ್ನು ಅಳವಡಿಸಿಕೊಳ್ಳದ ಕಾರ್ಖಾನೆಗಳ ಮೇಲೆಯು ಕೂಡ ಕ್ರಮ ಜರುಗಿಸಲಾಗುವುದು ಎಂದರು.

ಅವೈಜ್ಞಾನಿಕ ವಿಲೇವಾರಿ ವಿರುದ್ದ ಕ್ರಮ:

ಕಾರ್ಖಾನೆ, ಕೈಗಾರಿಕೆಗಳು ಕೂಡ ಸಾಕಷ್ಟು ಉದ್ಯೋಗ ನೀಡಿ ಹಲವರಿಗೆ ಜೀವನೋಪಾಯ ಕಲ್ಪಿಸಿದೆ. ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್ಆರ್)ಯ ಮೂಲಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿವೆ. ಹಾಗಾಗಿ ಕೈಗಾರಿಕೆಗಳಿಂದ ಯಾವುದೇ ತಪ್ಪಾಗಬಾರದು. ಕಾರ್ಖಾನೆಗಳಲ್ಲಿ ಉತ್ಪತ್ತಿ ಆಗುವ ತ್ಯಾಜ್ಯವನ್ನು ಅನಧಿಕೃತವಾಗಿ, ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ಸುರಿದರೆ ಅಂತಹ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ನರೇಂದ್ರ ಬಾಬು, ನಗರಾಭಿವೃದ್ಧಿ ಇಲಾಖೆಯ ಯೋಜನಾ ನಿರ್ದೇಶಕ ರಮೇಶ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ರೈತ ಸಂಘದ ಕಾರ್ಯಕರ್ತರು ಹಾಗೂ ಪರಿಸರ ಹೋರಾಟಗಾರರು ಉಪಸ್ಥಿತರಿದ್ದರು.

5ಕೆಡಿಬಿಪಿ9-

ಬೆಂ.ಗ್ರಾ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಮತ್ತು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗಳು ಎನ್.ಜಿ.ಟಿ ಆದೇಶ ಪಾಲನೆ, ಅಪೆರಲ್ ಪಾರ್ಕ್‌ ಕುರಿತು ಜಂಟಿ ಸಭೆ ನಡೆಯಿತು.