ಕುಡಿವ ನೀರಿನ ಸಮಸ್ಯೆಗೆ ಕ್ರಮ: ಡಿಸಿ ಡಾ. ಸುಶೀಲಾ

| Published : Mar 20 2025, 01:18 AM IST

ಸಾರಾಂಶ

Action to be taken to address drinking water problem: DC Dr. Sushila

-ಜಿಲ್ಲೆಯ ವಿವಿಧೆಡೆ ಟ್ಯಾಂಕರ್‌, ಖಾಸಗಿ ಬೋರ್‌ವೆಲ್‌ ಮೂಲಕ ನೀರು । 56 ವಾರಗಳಿಗಾಗುವಷ್ಟು ಮೇವಿನ ದಾಸ್ತಾನು ಲಭ್ಯ

- ಜಿಲ್ಲಾಧಿಕಾರಿ ಮಹತ್ವದ ಪತ್ರಿಕಾಗೋಷ್ಠಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಬೇಸಿಗೆಯ ಈ ಸಂದರ್ಭದಲ್ಲಿ ಮುಂಬರುವ ದಿನಗಳಲ್ಲಿ ತಾಪಮಾನ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳು-ಸಾರ್ವಜನಿಕರಿಗೆ ಸಲಹೆಗಳು, ಜನ-ಜಾನುವಾರುಳಿಗೆ ಕುಡಿವ ನೀರು-ಮೇವಿನ ಸಮಸ್ಯೆ ಎದುರಾಗದಂತೆ ಕೈಗೊಂಡ ಪರಿಹಾರ ಕ್ರಮಗಳು, ಮಾ.21ರಿಂದ ಆರಂಭಗೊಳ್ಳಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ನಡೆಸಿರುವ ಸಿದ್ಧತೆಗಳು, ಅಕಾಲಿಕ ಮಳೆ, ಗುಡುಗು-ಸಿಡಿಲಿನಿಂದ ರಕ್ಷಿಸಿಕೊಳ್ಳಲು ಜಾಗೃತಿ ಮೂಡಿಸುವ ಹಾಗೂ ವಿದ್ಯುತ್‌ ಅವ್ಯವಸ್ಥೆ ಸರಿಪಡಿಸುವಲ್ಲಿ ಜೆಸ್ಕಾಂನಿಂದ ಕೈಗೊಳ್ಳಬೇಕಾದ ಸೇರಿದಂತೆ ಮುಂತಾದವುಗಳ ಕುರಿತು ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ನೇತೃತ್ವದಲ್ಲಿ, ಜಿಲ್ಲಾ ಪಂಚಾಯತ್‌ ಸಿಇಒ ಲವೀಶ ಒರಡಿಯಾ ಹಾಗೂ ಎಸ್ಪಿ ಪೃಥ್ವಿಕ್ ಶಂಕರ್‌ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಹತ್ವದ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ವಿವಿಧ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿ ಡಾ. ಸುಶೀಲಾ, ಮೇ ಮಾಸಾಂತ್ಯದವರೆಗೆ ಸಂಭಾವ್ಯ ನೀರಿನ ಕೊರತೆಯಾಗಬಹುದು ಎಂದು 91 ಗ್ರಾಮಗಳನ್ನು ಗುರುತಿಸಲಾಗಿದ್ದು, ಇಂತಹ ಕಡೆಗಳಲ್ಲಿ ಟ್ಯಾಂಕರ್‌ ಮೂಲಕ ಹಾಗೂ ಖಾಸಗಿ ಬೋರ್‌ವೆಲ್‌ಗಳ ಜೊತೆ ಒಪ್ಪಂದ ಮಾಡಿಕೊಂಡು ನೀರಿನ ಸಮಸ್ಯೆ ಬಗೆಹರಿಸಲು ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದರು.

30.60 ಲಕ್ಷ ರು,ಗಳನ್ನು ಇದಕ್ಕೆಂದು ಖರ್ಚು ಮಾಡಲಾಗುತ್ತಿದ್ದು, ಈ ತಿಂಗಳಿನಲ್ಲಿ 2 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 10 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್‌ಗಳ ಒಪ್ಪಂದದ ಮೇಲೆ ನೀರು ಪಡೆದು ಪೂರೈಸಲಾಗುತ್ತಿದೆ. ಯಾದಗಿರಿ ಜಿಲ್ಲೆಯ 6 ತಾಲೂಕುಗಳಲ್ಲಿ ಶಾಶ್ವತ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 2004.00 ಕೋಟಿ ರೂ.ಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಜಿಲ್ಲೆಯ ಎಲ್ಲ ಗ್ರಾಮೀಣ ಜನವಸತಿಗಳಿಗೆ ಶಾಶ್ವತ ಕುಡಿಯುವ ನೀರಿನ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ 56 ವಾರಗಳಿಗಾಗುವಷ್ಟು ಮೇವಿನ ಸಂಗ್ರಹಣೆ ಇದ್ದು, ಜಾನುವಾರುಗಳಿಗೆ ಮೇವಿನ ಕೊರತೆಯಾಗುವ ಸಾಧ್ಯತೆ ಇರುವುದಿಲ್ಲ ಎಂದು ತಿಳಿಸಿದರು.

ಹೆಚ್ಚುವ ಬಿಸಿಲ ತಾಪ: ಜಿಲ್ಲೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್, ಮೇ ತಿಂಗಳಿನಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪುವ ಸಂಭವವಿರುತ್ತದೆ ಎಂದು ಮುನ್ನೆಚ್ಚರಿಕೆ ನೀಡಿದ್ದರಿಂದ, ಜಿಲ್ಲೆಯಲ್ಲಿ ಮಾರ್ಚ್ ಮತ್ತು ಏಪ್ರಿಲ್, ಮೇ ತಿಂಗಳಿನಲ್ಲಿ ಗರಿಷ್ಠ ತಾಪಮಾನ ದಾಖಲಾಗುವ ಮತ್ತು ಬಿಸಿಗಾಳಿ ಬೀಸುವ ಸಂಭವವಿರುತ್ತದೆ, ಗರಿಷ್ಠ ತಾಪಮಾನ ಮತ್ತು ಬಿಸಿಗಾಳಿಯಿಂದ ಪ್ರತಿಕೂಲ ಪರಿಣಾಮ ತಗ್ಗಿಸಲು ಸಾರ್ವಜನಿಕರು ಮುಂಜಾಗ್ರತೆ ಕ್ರಮವಹಿಸಬೇಕು ಎಂದರು.

ಕಳೆದ ವರ್ಷ ಗರಿಷ್ಠ ತಾಪಮಾನ 44.6 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿತ್ತು. ಮಾರ್ಚ್‌ 14ರಂದು ಸೈದಾಪೂರ ಹೋಬಳಿಯಲ್ಲಿ 41.8 ಡಿಗ್ರಿ ಸೆಲ್ಸಿಯಷ್ಟು ದಾಖಲಾಗಿದೆ, ಮುಂದಿನ ದಿನಗಳಲ್ಲಿ ಹೆಚ್ಚು ತಾಪಮಾನ ದಾಖಲಾಗುವ ಮುನ್ಸೂಚನೆ ಇದೆ. ಸಾರ್ವಜನಿಕರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಸರ್ಕಾರದ ಸಲಹೆಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ಬಿಸಿಗಾಳಿಯಿಂದ ಹಾಗೂ ಆಕಸ್ಮಿಕ ಗುಡುಗು-ಸಿಡಿಲಿನಿಂದ ರಕ್ಷಿಸಿಕೊಳ್ಳಲು ಮುಂಜಾಗ್ರತೆ ಬಗ್ಗೆ ಕಾರ್ಯಾಗಾರ, ಡಂಗೂರ ಸಾರುವ, ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಕುಡಿವ ನೀರಿನ ಸಮಸ್ಯೆ ಕುರಿತು ದಾಖಲಾಗುವ ದೂರುಗಳಿಗೆ ಕ್ರಮವಹಿಸಲು ಕಂಟ್ರೋಲ್ ರೂಮ್ ಪ್ರಾರಂಭಿಸಿ, ಅದರ ನಿರ್ವಹಣೆಗೆ ನೋಡಲ್ ಅಧಿಕಾರಿ ಹಾಗೂ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿ.ಪಂ ಸಿಇಒ ಲವೀಶ್ ಒರಡಿಯಾ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್‌, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ್ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

....ಬಾಕ್ಸ್‌.....

- ಎಸ್ಸೆಸ್ಸೆಲ್ಸಿ ಪರೀಕ್ಷೆ ಸಕಲ ಸಿದ್ಧತೆ

ಯಾದಗಿರಿ:2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ -1 ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ತಿಳಿಸಿದರು. ಜಿಲ್ಲೆಯಲ್ಲಿ ಈ ಪರೀಕ್ಷೆಗಾಗಿ ಒಟ್ಟು 62 ಪರೀಕ್ಷಾ ಕೇಂದ್ರ ಸ್ಥಾಪಿಸಿದ್ದು, ಶಹಾಪೂರ ತಾಲೂಕಿನಲ್ಲಿ 21, ಸುರಪುರ ತಾಲೂಕಿನಲ್ಲಿ19 ಹಾಗೂ ಯಾದಗಿರಿಯಲ್ಲಿ 22 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. ಒಟ್ಟು 18017 ವಿದ್ಯಾರ್ಥಿಗಳು ಪರೀಕ್ಷೆ ಗೆ ನೋಂದಣಿಯಾಗಿದ್ದು, ಈ ಪೈಕಿ ಸಿಸಿಆರ್ ಎಫ್- 15883 ವಿದ್ಯಾರ್ಥಿಗಳಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರನ್ನು, ಕಸ್ಟೋಡಿಯನ್, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು, ಮೊಬೈಲ್ ಸ್ವಾಧೀನಾಧಿ ಕಾರಿಗಳು, 350ಕ್ಕಿಂತಲೂ ಹೆಚ್ಚಿನ ನೋಂದಣಿಯಿರುವ ಪರೀಕ್ಷೆ ಕೇಂದ್ರಗಳಿಗೆ ಒರ್ವ ಉಪ ಅಧೀಕ್ಷಕ ರನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ 9 ಸೂಕ್ಷ್ಮ ಪರೀಕ್ಷೆ ಕೇಂದ್ರಗಳಿದ್ದು, ಮಾರ್ಗಸೂಚಿಯಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು‌.

ಪರೀಕ್ಷೆ ಸಿಸಿಟಿವಿ ಕಣ್ಗಾವಲು ನಲ್ಲಿ ನಡೆಸಲು ಹಾಗೂ ವೆಬ್ ಕಾಸ್ಟಿಂಗ್ ನಿರ್ವಹಣೆಗೆ ತಂಡಗಳನ್ನು ರಚಿಸಲಾಗಿದೆ ಎಂದುಹೇಳಿ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಜಿಲ್ಲಾ ಮಟ್ಟದ ಜಾಗೃತದಳವನ್ನು ರಚಿಸಲಾಗಿದೆ. ಸುಸೂತ್ರ ಪರೀಕ್ಷೆ ಗೆ ಪೋಲಿಸ್ ಇಲಾಖೆ, ಖಜಾನೆ ಇಲಾಖೆ, ಆರೋಗ್ಯ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಸಹಕಾರಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.

-----

19ವೈಡಿಆರ್‌7 : ಯಾದಗಿರಿ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

----

-ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಡಳಿತ ಯತ್ನ