ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲೆಯಲ್ಲಿ ಮುಂಗಾರು ನಿರೀಕ್ಷಿತ ಅವಧಿಯೊಳಗೆ ಆರಂಭಗೊಳ್ಳದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆರೆ, ಕಟ್ಟೆ-ಕಾಲುವೆಗಳಲ್ಲಿ ಸಂಗ್ರಹವಾಗಿದ್ದ ನೀರು ದಿನೇದಿನೇ ಬತ್ತಿ ಹೋಗುತ್ತಿದೆ ಮಾತ್ರವಲ್ಲ ಅಂತರ್ಜಲದ ಮಟ್ಟ ಕಡಿಮೆಯಾಗಿದ್ದು, ಗ್ರಾಮೀಣ ಜನ-ಜಾನುವಾರುಗಳಿಗೆ ಉಂಟಾಗಬಹುದಾದ ಸಂಭಾವ್ಯ ಕುಡಿಯುವ ನೀರಿನ ಸಮಸ್ಯೆಯನ್ನು ಸಕಾಲದಲ್ಲಿ ಸುಗಮಗೊಳಿಸಲು ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಕಾಲಿಕವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚಿಸಿದರು.ನಗರದಲ್ಲಿ ಮಂಗಳವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಭಾನುವಳ್ಳಿ ಸುತ್ತಮುತ್ತಲ 20 ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ತೀವ್ರ ತರಹದ ಸಮಸ್ಯೆ ಉಂಟಾಗಿದ್ದು, ಅದರ ತುರ್ತು ನಿರ್ವಹಣೆಗಾಗಿ ಅಗತ್ಯವಿರುವ 35-40 ಲೋಡ್ ಪ್ರಮಾಣದ ಮರಳನ್ನು ನಂದಿಗಾವಿ ಮರಳು ಬ್ಲಾಕಿನಿಂದ ತೆಗೆದುಕೊಳ್ಳಲು ಜಿಲ್ಲಾಡಳಿತ ಅನುಮೋದನೆ ನೀಡಿದ್ದು, ಈ ಕೂಡಲೆ ಗ್ರಾಮೀಣ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಮಹತ್ವದ ಕಾರ್ಯವನ್ನು ತಕ್ಷಣದಿಂದಲೇ ಆರಂಭಿಸುವಂತೆ ಅವರು ಜಿಲ್ಲಾ ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆಯ ಹಿರಿಯ ವಿಜ್ಞಾನಿ ರಷ್ಮಿ ಅವರಿಗೆ ಸೂಚಿಸಿದ ಅವರು, ಘಟನೋತ್ತರ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಿದರು.ತಗ್ಗಿ ಗ್ರಾಮದ ಭದ್ರಾ ಚಾನಲ್‌ನಲ್ಲಿ ರೈತರು ಪಂಪ್ ಸೆಟ್ ಮೂಲಕ ನೀರನ್ನು ಸೆಳೆದುಕೊಳ್ಳುತ್ತಿದ್ದು, ಕುಡಿಯುವ ನೀರಿಗೆ ಹಾಹಾಕಾರ ಕಂಡುಬರುತ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಿಂದ ಕಚೇರಿಗೆ ಸಾಕಷ್ಟು ದೂರುಗಳೂ ಸಹ ಬರುತ್ತಿವೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಬೆಸ್ಕಾಂ ಮತ್ತು ಪೊಲೀಸ್ ಇಲಾಖೆಯ ಸಹಕಾರ ಪಡೆದು, ಅಕ್ರಮವಾಗಿ ನೀರೆತ್ತುತ್ತಿರುವವರ ವಿರುದ್ಧ ದೂರು ದಾಖಲಿಸುವಂತೆ ಸೂಚಿಸಿದರು.
ಜನಗಣತಿ ಕಾರ್ಯಕ್ಕೆ ಸಹಕರಿಸಲು ಮನವಿ:
ಜಿಲ್ಲೆಯಲ್ಲಿ ಈಗಾಗಲೇ ಆರಂಭಗೊಂಡಿರುವ ಜನಗಣತಿ ಕಾರ್ಯಕ್ಕೆ ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದಾರೆ. ಸಾರ್ವಜನಿಕರು ತಮ್ಮ ಮನೆಗೆ ಸಮೀಕ್ಷೆಗಾಗಿ ಬರುವ ಅಧಿಕಾರಿ ಸಿಬ್ಬಂದಿಗೆ ಅಗತ್ಯ ಮಾಹಿತಿ ನೀಡಿ ಸೌಜನ್ಯಯುತವಾಗಿ ನಡೆದುಕೊಳ್ಳುವಂತೆ ಮನವಿ ಮಾಡಿದರು.
ಹಕ್ಕಿಜ್ವರ ಪ್ರಕರಣಗಳು ಜಿಲ್ಲೆಯಲ್ಲಿ ಇಲ್ಲ:ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಹಕ್ಕಿ ಜ್ವರ ಪ್ರಕರಣಗಳು ಕಂಡುಬಂದಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲೆಯ ಯಾವುದೇ ಸ್ಥಳದಲ್ಲಿ ಹಕ್ಕಿ-ಪಕ್ಷಿಗಳು ಅನುಮಾನಾಸ್ಪರ ರೀತಿಯಲ್ಲಿ ಮೃತಪಟ್ಟಿದ್ದು ಕಂಡು ಬಂದಲ್ಲಿ ಸಾರ್ವಜನಿಕರು ಮಾಹಿತಿ ನೀಡಿ ಎಂದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲ ರಾವ್, ಉಪವಿಭಾಗಾಧಿಕಾರಿ ಚನ್ನಪ್ಪ, ಗ್ರಾ.ಕು.ನೀ.ನೈ.ಇಲಾಖೆಯ ಅಧಿಕಾರಿ ನಾಗೇಂದ್ರಪ್ಪ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ತಾಲೂಕುಗಳ ತಹಸೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಜರಿದ್ದರು.