ಸಾರಾಂಶ
ಚನ್ನಪಟ್ಟಣ: ಗ್ರಾಮೀಣ ಭಾಗದಲ್ಲಿ ಒತ್ತುವರಿ ಆಗಿರುವ ಸರ್ಕಾರಿ ಸ್ಥಳಗಳು, ಕೆರೆಗಳು ಹಾಗೂ ರಸ್ತೆಗಳನ್ನು ಶೀಘ್ರದಲ್ಲೇ ತೆರವುಗೊಳಿಸಲಾಗುವುದು. ಮೊದಲ ಹಂತದಲ್ಲಿ ಸಣ್ಣ ಕೆರೆಗಳು ಹಾಗೂ ಎರಡನೇ ಹಂತದಲ್ಲಿ ದೊಡ್ಡ ಕೆರೆಗಳ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಸಾಕಷ್ಟು ಕಡೆ ಸರ್ಕಾರಿಗಳು ಸ್ಥಳಗಳು, ಕೆರೆಗಳ ಒತ್ತುವರಿ ಸಾಮಾನ್ಯ ಎಂಬಂತಾಗಿದೆ. ಒತ್ತುವರಿಯಾಗಿರುವ ಸ್ಥಳಗಳನ್ನು ತೆರವುಗೊಳಿಸಿ ಬಡವರಿಗೆ ನಿವೇಶನ ಹಂಚಲು ಯೋಜನೆ ರೂಪಿಸಲಾಗಿದೆ. ಜತೆಗೆ ರಸ್ತೆ ಒತ್ತುವರಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಕೇಳಿ ಕೆಲವರು ಈ ಹಿಂದೆ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದರು. ಆದರೆ, ಆ ಖಾತೆಯನ್ನು ಅವರು ಚಾಲನೆಯಲ್ಲಿ ಇಟ್ಟುಕೊಳ್ಳದ ಕಾರಣ ಅವು ನಿಷ್ಕ್ರಿಯವಾಗಿವೆ. ಇದರಿಂದ ಸಮಸ್ಯೆಯಾಗಿ ಕೆಲವರಿಗೆ ಇನ್ನು ಭಾಗ್ಯಲಕ್ಷ್ಮೀ ಯೋಜನೆಯ ಹಣ ಖಾತೆಗೆ ಬಂದಿಲ್ಲ. ನಿಷ್ಕ್ರಿಯವಾಗಿರುವ ಖಾತೆಗಳನ್ನು ಮರುಚಾಲನೆಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಂತರ ಹಣ ಬರಲಿದೆ ಎಂದು ತಿಳಿಸಿದರು.
ಕೆಲ ಮಹಿಳೆಯರು ಸ್ತ್ರೀಶಕ್ತಿ ಸಂಘಗಳಿಗೆ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ಸಲುವಾಗಿ ವಿವಿಧ ಬ್ಯಾಂಕುಗಳಲ್ಲಿ ಮೂರ್‍ನಾಲ್ಕು ಅಕೌಂಟ್ ಓಪನ್ ಮಾಡಿದ್ದಾರೆ. ಇದೂ ಸಹ ಹಣ ತಲುಪದಿರಲು ಕಾರಣವಾಗಿದೆ. ಈ ರೀತಿಯ ಖಾತೆಗಳನ್ನು ಅಧಿಕಾರಿಗಳು ಸರಿಪಡಿಸುತ್ತಿದ್ದಾರೆ. ಯಾರಿಗೆ ಹಣ ಬಂದಿಲ್ಲವೋ ಅವರು ಯೋಚಿಸುವುದು ಬೇಡ, ಎಲ್ಲರಿಗೂ ಹಣ ತಲುಪುತ್ತದೆ. ಸರ್ಕಾರ ನುಡಿದಂತೆ ನಡೆಯಲಿದೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.ಜನರ ಸಮಸ್ಯೆ ಅರಿಯಲು ಅವರಿರುವ ಕಡೆಗಳಲ್ಲೇ ತೆರಳಿ ಅವರ ಅಹವಾಲು ಆಲಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಆದ್ಯತೆ ನೀಡಲಾಗುವುದು. ಉಳಿದ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುವುದು ಎಂದರು.
ಈ ವೇಳೆ ಇಒ ಶಿವಕುಮಾರ್, ಪಿಡಿಒ ಪದ್ಮ, ಗ್ರಾಮ ಲೆಕ್ಕಾಧಿಕಾರಿಗಳಾದ ಪುಟ್ಟಸ್ವಾಮಿ, ವಿದ್ಯಾ, ಎಇಇ ಶಂಕರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಗಂಗಾಧರ್, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಮುಖಂಡರಾದ ಡಿ.ಎಂ.ವಿಶ್ವನಾಥ್, ಡಿ.ಆರ್.ಭಗತ್‌ರಾಮ್, ಡಿ.ಕೆ.ಕಾಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುನಿಲ್‌ಕುಮಾರ್, ಪ್ರಮೋದ್, ಚಂದ್ರಸಾಗರ್, ವೆಂಕಟೇಶ್, ಶ್ರೀನಿವಾಸ್ ಇತರರಿದ್ದರು.ಪೊಟೋ೭ಸಿಪಿಟಿ೨:
ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಮಾತನಾಡಿದರು.