ಅಪೂರ್ಣಗೊಂಡ ನಗರೋತ್ಥಾನ ಕಾಮಗಾರಿ ಮುಗಿಸಲು ಕ್ರಮ: ಲಾಡ್

| Published : Jun 25 2024, 12:35 AM IST

ಅಪೂರ್ಣಗೊಂಡ ನಗರೋತ್ಥಾನ ಕಾಮಗಾರಿ ಮುಗಿಸಲು ಕ್ರಮ: ಲಾಡ್
Share this Article
  • FB
  • TW
  • Linkdin
  • Email

ಸಾರಾಂಶ

ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆಗಳು ಮಂಜೂರಾಗಿದ್ದು, ಈ ಕೆಲಸ ಸಹ ಅಪೂರ್ಣಗೊಂಡಿದೆ. ಅವುಗಳನ್ನು ಕೂಡಲೇ ಪೂರ್ಣಗೊಳಿಸಬೇಕು.

ಧಾರವಾಡ:

ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಸೋಮವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಪಡೆದರು.

ನಗರೋತ್ಥಾನ ಕಾಮಗಾರಿ ಅಪೂರ್ಣಗೊಂಡಿದ್ದು, ಅದನ್ನು ಕೂಡಲೇ ಮುಗಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ನಿಗದಿ ಸಮಯದಲ್ಲಿ ಕಾಮಗಾರಿ ಮುಗಿಸಬೇಕು. ಇಲ್ಲದೇ ಹೋದಲ್ಲಿ ವಿವಿಧ ರೀತಿಯಲ್ಲಿ ತೊಂದರೆ ಆಗಲಿದೆ ಎಂದರು.

ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆಗಳು ಮಂಜೂರಾಗಿದ್ದು, ಈ ಕೆಲಸ ಸಹ ಅಪೂರ್ಣಗೊಂಡಿದೆ. ಅವುಗಳನ್ನು ಕೂಡಲೇ ಪೂರ್ಣಗೊಳಿಸಲು ಸೂಚನೆ ನೀಡಿದ ಸಚಿವರು, ಇದೇ ವೇಳೆ ಮನೆಗಳ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಮನೆ ಇಲ್ಲದವರ ಪಟ್ಟಿ ಮಾಡಿ ಅವರಿಗೆ ಸಿದ್ಧ ಮನೆಗಳನ್ನು ನೀಡಲು ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.

ಪಟ್ಟಣದಲ್ಲಿ ವಾರಕ್ಕೊಮ್ಮೆ ಸಂತೆ ನಡೆಯುತ್ತಿದ್ದು, ಅದಕ್ಕೆ ಸೂಕ್ತ ಜಾಗದ ಕೊರತೆ ಇದೆ. ಎಲ್ಲೆಂದರಲ್ಲಿ ರಸ್ತೆಯಲ್ಲಿ ವ್ಯಾಪಾರ ಮಾಡುವಂತಾಗಿದೆ. ಆದ್ದರಿಂದ ಎಪಿಎಂಸಿಯಲ್ಲಿ ಜಾಗವಿದ್ದು, ಮಾರುಕಟ್ಟೆಗೆ ವರದಿ ನೀಡಿದರೆ ಸರ್ಕಾರಕ್ಕೆ ಕಳುಹಿಸಲಾಗುವುದು. ಈ ಮೂಲಕ ಪಟ್ಟಣಕ್ಕೆ ಉತ್ತಮ ಮಾರುಕಟ್ಟೆ ಸ್ಥಾಪಿಸಬಹುದು ಎಂದರು.

ಪಟ್ಟಣದ ಓಣಿಯೊಂದರಲ್ಲಿ ಕಸಾಯಿಖಾನೆಯಿಂದ ತೊಂದರೆಯಾಗುತ್ತಿದ್ದು, ಜನರು ಈ ಬಗ್ಗೆ ದೂರಿದ್ದಾರೆ. ಆದ್ದರಿಂದ ಕಸಾಯಿಖಾನೆಯನ್ನು ಸ್ಥಳಾಂತರ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು ಸಲಹೆ-ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ವಿ.ಜಿ. ಅಂಗಡಿ, ಸದಸ್ಯರು ಇದ್ದರು.