ಸೂಳೆಕೆರೆಯ ಹೂಳೆತ್ತುವ ಕೆಲಸ ಅತಿ ಶೀಘ್ರವಾಗಿ ನಡೆಯಬೇಕು. ೮೪೫ ಎಕರೆಯಷ್ಟು ವಿಶಾಲವಾದ ಕೆರೆಯ ಜಾಗದಲ್ಲಿ ೩೦೦ ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಒತ್ತುವರಿ ತೆರವಿನಿಂದ ಅತಿ ಹೆಚ್ಚು ನೀರು ಕೆರೆಯಲ್ಲಿ ಸಂಗ್ರಹವಾಗಲಿದೆ. ಕೆರೆಯಲ್ಲಿ ತುಂಬಿರುವ ಹೂಳನ್ನು ಸುಮಾರು ೩೦ ಇಟಾಚಿ ಯಂತ್ರಗಳ ಮೂಲಕ ಹಗಲು-ರಾತ್ರಿ ಕೆಲಸ ನಿರ್ವಹಿಸಿ ತೆರವುಗೊಳಿಸಲಾಗುವುದು.
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಅತಿ ದೊಡ್ಡ ಕೆರೆಯಾಗಿರುವ ಮದ್ದೂರು ತಾಲೂಕಿನ ಸೂಳೆಕೆರೆಯನ್ನು ಸಮಗ್ರವಾಗಿ ಜೀರ್ಣೋದ್ಧಾರಗೊಳಿಸಿ ವರ್ಷವಿಡೀ ನೀರು ನಿಲ್ಲುವಂತೆ ಮಾಡಲಾಗುವುದು ಎಂದು ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.ಭಾನುವಾರ ೩೪ ಕೋಟಿ ರು. ವೆಚ್ಚದಲ್ಲಿ ಸೂಳೆಕೆರೆಯನ್ನು ಜೀರ್ಣೋದ್ಧಾರಗೊಳಿಸುವ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಸೂಳೆಕೆರೆಯ ಹೂಳೆತ್ತುವ ಕೆಲಸ ಅತಿ ಶೀಘ್ರವಾಗಿ ನಡೆಯಬೇಕು. ೮೪೫ ಎಕರೆಯಷ್ಟು ವಿಶಾಲವಾದ ಕೆರೆಯ ಜಾಗದಲ್ಲಿ ೩೦೦ ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ಒತ್ತುವರಿ ತೆರವಿನಿಂದ ಅತಿ ಹೆಚ್ಚು ನೀರು ಕೆರೆಯಲ್ಲಿ ಸಂಗ್ರಹವಾಗಲಿದೆ. ಕೆರೆಯಲ್ಲಿ ತುಂಬಿರುವ ಹೂಳನ್ನು ಸುಮಾರು ೩೦ ಇಟಾಚಿ ಯಂತ್ರಗಳ ಮೂಲಕ ಹಗಲು-ರಾತ್ರಿ ಕೆಲಸ ನಿರ್ವಹಿಸಿ ತೆರವುಗೊಳಿಸಲಾಗುವುದು. ರೈತರು ಕೆರೆಯ ಮಣ್ಣನ್ನು ತಮ್ಮ ಜಮೀನುಗಳಿಗೆ ತೆಗೆದುಕೊಳ್ಳಬಹುದು. ಟ್ರ್ಯಾಕ್ಟರ್, ಟಿಪ್ಪರ್, ಎತ್ತಿನಗಾಡಿ ತಂದರೂ ಉಚಿತವಾಗಿ ಮಣ್ಣನ್ನು ಒದಗಿಸಲಾಗುವುದು ಎಂದರು.
ಸೂಳೆಕೆರೆಯಿಂದ ಮುಂದೆ ಇರುವ ಗ್ರಾಮಗಳು ಬೇಸಾಯಕ್ಕೆ ಹಾಗೂ ಕುಡಿಯುವ ನೀರಿಗೆ ಹಾಹಾಕಾರ ಎದುರಿಸುತ್ತಿವೆ. ಇದಕ್ಕಾಗಿ ಬನ್ನಹಳ್ಳಿ ಏತ ನೀರಾವರಿ ಯೋಜನೆಗೂ ಚಾಲನೆ ನೀಡಲಾಗಿದೆ. ಈ ಭಾಗದ ರೈತರು ಬೇಸಾಯ ಪದ್ಧತಿ ಬದಲಾವಣೆ ಮಾಡಿಕೊಳ್ಳಬೇಕು. ವ್ಯವಸಾಯಕ್ಕೆ ಎಷ್ಟು ನೀರು ಬೇಕೋ ಅಷ್ಟನ್ನು ಬಳಸಿಕೊಳ್ಳಬೇಕು. ಉಳಿದ ನೀರನ್ನು ಮುಂದಿನ ರೈತರು ಬೇಸಾಯ ಮಾಡಲು ಅನುಕೂಲವಾಗುವಂತೆ ಬಿಟ್ಟುಕೊಡುವ ಉದಾರತೆ ಬೆಳೆಸಿಕೊಳ್ಳಬೇಕು ಎಂದು ನುಡಿದರು.ಹಿಂದೆ ಕೆಆರ್‌ಎಸ್‌ನಿಂದ ಈ ಭಾಗಕ್ಕೆ ನೀರು ಹರಿದುಬರುವುದಕ್ಕೆ ೧೫ ದಿನಗಳಾಗುತ್ತಿತ್ತು. ಈಗ ಒಂದೇ ದಿನಕ್ಕೆ ಬರುತ್ತಿದೆ. ಹಿಂದಿನ ಶಾಸಕರು ತಮ್ಮ ಅವಧಿಯಲ್ಲಿ ಕೆರೆಯನ್ನು ಜೀರ್ಣೋದ್ಧಾರ ಮಾಡಲಿಲ್ಲ. ಜೆಡಿಎಸ್ ಪಕ್ಷದ ಅಧಿಕಾರವಧಿಯಲ್ಲೂ ಕೆಲಸ ಕೈಗೊಳ್ಳಲಿಲ್ಲ. ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆರೆ ಅಭಿವೃದ್ಧಿಗೊಳ್ಳುತ್ತಿದ್ದರೂ ಸಹಿಸುತ್ತಿಲ್ಲ ಎಂದು ಟೀಕಿಸಿದರು.
ಮದ್ದೂರು ಭಾಗದ ಇನ್ನೂ ಹಲವು ನಾಲೆಗಳ ಆಧುನೀಕರಣಕ್ಕೆ ಸರ್ಕಾರದ ಎದುರು ಪ್ರಸ್ತಾವನೆ ಸಲ್ಲಿಸಿದ್ದೇವೆ. ಸರ್ಕಾರವನ್ನು ಕಾಡಿ ಬೇಡಿ ಅನುದಾನ ತರಲಿದ್ದೇವೆ. ಜನರಲ್ಲಿ ಉಪಕಾರ ಸ್ಮರಣೆ ಇರಬೇಕು. ನಿಜವಾದ ಅಭಿವೃದ್ಧಿ ಯಾರಿಂದ ಆಗುತ್ತಿದೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ಯಾರೋ ಸುರಿಸುವ ಕಣ್ಣೀರಿಗೆ ಮರುಳಾಗಬಾರದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ಕುಟುಕಿದರು.ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಮಾತನಾಡಿ, ಗುತ್ತಲು ಕೆರೆಯನ್ನು ೩೦ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಕೊಳಚೆ ನೀರು ಸೂಳೆಕೆರೆ ಸೇರದಂತೆ ಕ್ರಮ ವಹಿಸಲಾಗಿದೆ ಎಂದು ಭರವಸೆ ನೀಡಿದರು.
ರಾಜಕೀಯ ಮಾಡುವುದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ನಾಲೆಯಲ್ಲಿ ನೀರು ಹರಿಯಬೇಕು. ಬೆಳೆಗಳಿಗೆ ಸಕಾಲದಲ್ಲಿ ನೀರು ಸಿಗಬೇಕು. ಮೈಷುಗರ್ ಕಾರ್ಯಾಚರಣೆಯಲ್ಲಿದ್ದಾಗ ಮಾತ್ರ ರೈತ ನೆಮ್ಮದಿಯಿಂದ ಇರಲು ಸಾಧ್ಯ. ಅದು ಅಭಿವೃದ್ಧಿಯ ಸಂಕೇತವಾಗಿರುತ್ತದೆ ಎಂದರು.ಮಣ್ಣಿನ ಮಕ್ಕಳು ಎಂದೆಲ್ಲಾ ಹೇಳಿಕೊಂಡು ಓಡಾಡುತ್ತಾರೆ. ಆದರೆ, ಮಣ್ಣಿನ ಮಕ್ಕಳಿಂದ ಏನೂ ಸಿಗಲೇ ಇಲ್ಲ. ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಕರ್ನಾಟಕಕ್ಕೆ ೧.೫೩ ಲಕ್ಷ ಕೋಟಿ ಕೈಗಾರಿಕೆ ಸ್ಥಾಪಿಸಿದ್ದಾರೆ. ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರದ್ದು ಕೇವಲ ಮಾತಾಗಿದೆಯೇ ವಿನಃ ಇದುವರೆಗೆ ಜಿಲ್ಲೆಗೆ ಯಾವ ಕೈಗಾರಿಕೆಯನ್ನೂ ತರಲಿಲ್ಲ. ಅಭಿವೃದ್ಧಿಯನ್ನೂ ಮಾಡಲಿಲ್ಲ ಎಂದು ಜರಿದರು.
ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ ಮಾತನಾಡಿ, ಕೆಆರ್‌ಎಸ್ ಹಿನ್ನೀರಿನ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿರುವುದರಿಂದ ಅಣೆಕಟ್ಟೆಯಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗಲಿದೆ. ಕೊನೆಯ ಭಾಗಕ್ಕೂ ನೀರು ತಲುಪಲಿದೆ. ತಮಿಳುನಾಡಿಗೆ ವಾರ್ಷಿಕ ೧೭೭ ಟಿಎಂಸಿ ನೀರು ಹರಿಸಬೇಕಿದ್ದರೂ ಈ ಬಾರಿ ಉತ್ತಮ ಮಳೆಯಿಂದ ೩೧೮ ಟಿಎಂಸಿ ನೀರು ಹರಿದಿದೆ. ಜಿಲ್ಲೆಯ ೯೭೪ ಕೆರೆಗಳು ಭರ್ತಿಯಾಗಿವೆ ಎಂದರು.ವಿರೋಧಪಕ್ಷದವರು ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದರೂ ಅದನ್ನು ಟೀಕಿಸುವುದನ್ನು ಮಾತ್ರ ಬಿಟ್ಟಿಲ್ಲ. ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲವೆಂದಾದರೆ ನಾಲೆಗಳ ಆಧುನೀಕರಣ, ಕೆರೆಯ ಜೀರ್ಣೋದ್ಧಾರಕ್ಕೆ ಹಣ ಹೇಗೆ ಕೊಡುತ್ತಿದ್ದರು. ಇದರ ಬಗ್ಗೆ ಜನರು ಆಲೋಚಿಸಬೇಕು. ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಬರುತ್ತಿರುವುದರಿಂದ ಕಾಂಗ್ರೆಸ್‌ಗೆ ಶಕ್ತಿ ತುಂಬುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ನಿರ್ದೇಶಕ ಸಂದರ್ಶ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಬಿ.ಬಸವರಾಜು, ಚಾಂಷುಗರ್ ಉಪಾಧ್ಯಕ್ಷ ಮಣಿ, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಮುಖಂಡರಾದ ಅಜ್ಜಹಳ್ಳಿ ರಾಮಕೃಷ್ಣ, ಬೋರಾಪುರ ಶಂಕರೇಗೌಡ, ದಾಸೇಗೌಡ, ಕದಲೂರು ರಾಮಕೃಷ್ಣ, ಮಾನಸ ವಳಗೆರೆಹಳ್ಳಿ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ನಂಜುಂಡೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಶಾಂತ್, ಸಹಾಯಕ ಅಭಿಯಂತರ ಅವಿನಾಶ್ ಇದ್ದರು.೪೦೧ ಎಂಸಿಎಫ್‌ಟಿ ನೀರು ಸಂಗ್ರಹ ಸಾಮರ್ಥ್ಯಕ್ಕೆ ಏರಿಕೆಸೂಳೆಕೆರೆಯ ನೀರು ಸಂಗ್ರಹ ಸಾಮರ್ಥ್ಯವನ್ನು ಹಾಲಿ ಇರುವ ೨೮೫.೪೫ ಎಂಸಿಎಫ್‌ಟಿಯಿಂದ ೪೦೧.೬೭ ಎಂಸಿಎಫ್‌ಟಿಗೆ ಏರಿಸಲಾಗುವುದು. ಕೆರೆಯ ಸುತ್ತಳತೆ ೧೨.೫೦ ಕಿ.ಮೀ. ಇದ್ದು, ಕೆರೆ ಏರಿಯ ಉದ್ದ ೧.೧೦ ಕಿ.ಮೀ. ಕೆರೆ ಕೋಡಿಯ ಉದ್ದ ೧೧೦ ಮೀಟರ್ ಇದೆ. ಸುಮಾರು ೬೬೩೦ ಎಕರೆ ಕೆರೆ ಅಚ್ಚುಕಟ್ಟು ಪ್ರದೇಶವಿದೆ. ಹೂಳು ತೆಗೆಯುವುದು, ಪೂರಕ ಕಾಲುವೆಗಳ ಅಭಿವೃದ್ಧಿ, ಕೆರೆ ಏರಿಯ ಅಭಿವೃದ್ಧಿ, ಕೆರೆಯ ಗಡಿ ಅಭಿವೃದ್ಧಿ, ಹೆಬ್ಬಳ್ಳ ಹಳ್ಳಕ್ಕೆ ೪೫೦ ಮೀ. ತಡೆಗೋಡೆ ನಿರ್ಮಾಣ, ಸೌಂದರೀಕರಣ ಕಾಮಗಾರಿ ಮಾಡಲಾಗುವುದು. ಕೆರೆಯಂಗಳದ ಗ್ರಾಮಗಳಾದ ಅಂಬರಹಳ್ಳಿ ೩೦೭.೧ ಎಕರೆ, ಮಾದರಹಳ್ಳಿ ೩೮೪.೩೫ ಎಕರೆ, ಶಿಂಗಟಗೆರೆ ೨೨.೨೫ ಎಕರೆ, ಹೆಮ್ಮಿಗೆ ೮೭.೨೭ ಎಕರೆ, ಕನ್ನಲಿ ೪೩.೨೬ ಎಕರೆ ಸೇರಿ ೮೪೫ ಎಕರೆ ೩೪ ಗುಂಟೆ ಪ್ರದೇಶವನ್ನು ಒಳಗೊಂಡಿದೆ. ಒಟ್ಟು ೯೯ ಹಳ್ಳಿಗಳು ಸೂಳೆಕೆರೆಯ ನೀರನ್ನು ಅವಲಂಬಿಸಿವೆ.