ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಅನರ್ಹ ಬಿಪಿಎಲ್ ಫಲಾನುಭವಿಗಳನ್ನು ಪತ್ತೆ ಹಚ್ಚಿ ತೆಗೆದು ಹಾಕಿ, ಅರ್ಹರಿಗೆ ಸರ್ಕಾರಿ ಸೌಲಭ್ಯಗಳನ್ನು ದೊರಕಿಸುವ ಸದುದ್ದೇಶದಿಂದ ಗ್ರಾಮ ಮಟ್ಟದಲ್ಲಿ ಸಮಿತಿ ರಚನೆ ಮಾಡುವುದಾಗಿ ಅಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.ವಿಧಾನಸಭೆ ಅಧಿವೇಶನದಲ್ಲಿ ಎಂಎಲ್ಸಿ ಸಿ.ಟಿ.ರವಿ ಪ್ರಶ್ನೆಗೆ ಉತ್ತರಿಸಿದ ಅವರು, ಅಧಿವೇಶನ ಮುಗಿದ ಬಳಿಕ ಮೊದಲು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು. ನಂತರ ಗ್ರಾಪಂ ಮಟ್ಟದಲ್ಲಿ ಕಂದಾಯ ನಿರೀಕ್ಷಕರು ಗ್ರಾಪಂ ಪಿಡಿಒಗಳು, ಲೆಕ್ಕಾಧಿಕಾರಿಗಳು ಸೇರಿದಂತೆ ಮತ್ತಿತರರ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.
ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳು ಸಿಗಬೇಕೆಂಬುವುದು ಸರ್ಕಾರದ ಉದ್ದೇಶ. ಸದನದಲ್ಲಿನ ಎಲ್ಲ ಸದಸ್ಯರು ಸಹಕಾರ ನೀಡಿದರೆ ಬಿಪಿಎಲ್ ಪಡೆದು ಅನರ್ಹ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ಪ್ರಾರಂಭವಾಗಲಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದರು.ಈ ಹಿಂದೆ ಪರಿಷ್ಕರಣೆ ಮಾಡಲು ಹೊರಟಾಗ ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ೯೯ ಎಪಿಎಲ್ ಕಾರ್ಡುಗಳು ಬಿಪಿಎಲ್ ಗೆ ಸೇರ್ಪಡೆಯಾದರೆ ಯಾರೂ ಕೇಳುವುದಿಲ್ಲ, ಆದರೆ ಒಂದೇ ಒಂದು ಬಿಪಿಎಲ್ ಕಾರ್ಡ್ ಬಿಟ್ಟು ಹೋದರೂ ದೊಡ್ಡ ವಿವಾದವೇ ಉಂಟು ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಿಜವಾದ ಫಲಾನುಭವಿಗಳು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಬಾರದೆಂಬುದು ನಮ್ಮ ಉದ್ದೇಶವಾಗಿದೆ. ನಾವೂ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ. ಹೀಗಾಗಿ ಪರಿಷ್ಕರಣೆ ಮಾಡಲು ಮುಂದಾಗುತ್ತಿದ್ದೇವೆ ಎಂದು ಸಚಿವ ಮುನಿಯಪ್ಪ ಪ್ರತಿಪಾದಿಸಿದರು.ನಮಗೆ ಕೇಂದ್ರ ಸರ್ಕಾರ ೧.೧೦ ಲಕ್ಷ ಫಲಾನುಭವಿಗಳನ್ನು ಮಾತ್ರ ಪಟ್ಟಿಗೆ ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಿದೆ. ರಾಜ್ಯದಲ್ಲಿ ಒಟ್ಟು ೪,೫ ಕೋಟಿ ಫಲಾನುಭವಿಗಳಿಗೆ ಸವಲತ್ತು ನೀಡಲಾಗುತ್ತಿದೆ. ಬಿಪಿಎಲ್ ಪಟ್ಟಿಯಲ್ಲಿರುವ ೨೫ ಲಕ್ಷ ಪಡಿತರ ಚೀಟಿಗಳನ್ನು ತೆಗೆದು ಹಾಕ ಬೇಕಾಗಿದೆ. ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ಕೆಲವು ಗೊಂದಲಗಳು ಉಂಟಾಗುವುದು ಸಹಜ. ಅನರ್ಹರನ್ನು ತೆಗೆದು ಹಾಕಿ ಆರ್ಹರಿಗೆ ಸೌಲಭ್ಯ ಸಿಗಬೇಕೆಂಬುದು ನಮ್ಮ ಏಕೈಕ ಗುರಿಯಾಗಿದೆ. ಜನಪ್ರತಿನಿಧಿಗಳು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಬಾಕ್ಸ್:ರಾಜ್ಯದಲ್ಲಿ ಒಟ್ಟು ೨.೯೫ ಕೋಟಿ ಬಿಪಿಎಲ್ ಪಡಿತರ ಫಲಾನುಭವಿಗಳಿದ್ದು, ಇದರಲ್ಲಿ ಪ್ರಸ್ತುತ ೨.೪೦ ಕೋಟಿ ಫಲಾನುಭವಿಗಳು ಸರ್ಕಾರದ ಸವಲತ್ತು ಪಡೆಯುತ್ತಿದ್ದಾರೆ. ಪರಿಷ್ಕರಣೆ ನಂತರ ಎಪಿಎಲ್ ಗೆ ಸೇರ್ಪಡೆಯಾಗಲಿದ್ದಾರೆ. ಸರ್ವ ಪಕ್ಷಗಳ ಸಹಕಾರವಿಲ್ಲದೆ ಇದನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಮುಖ್ಯ ಮಂತ್ರಿಯವರು ಯಾವುದೇ ಕಾರಣಕ್ಕೂ ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಕ್ರಮವಹಿಸಿ ಎಂದು ಸೂಚನೆ ಕೊಟ್ಟಿದ್ದಾರೆ.
ಏಕಕಾಲದಲ್ಲಿ ಈ ಕ್ರಿಯೆ ನಡೆಯುವುದರಿಂದ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತದೆ. ಸರ್ವರ್, ಕಂಪ್ಯೂಟರ್ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ, ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.