ಸಾರಾಂಶ
ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಹಂತ ಹಂತವಾಗಿ ಪೋಡಿ ಮುಕ್ತ ಅಭಿಯಾನ ಕೈಗೊಂಡು ವರ್ಷದಲ್ಲಿ ಬಾಗಲಕೋಟೆ ಜಿಲ್ಲೆಯನ್ನು ಪೋಡಿ ಮುಕ್ತ ಜಿಲ್ಲೆಯನ್ನಾಗಿಸಲು ಕ್ರಮಕೈಗೊಳ್ಳಲಾಗುತ್ತಿದೆ: ಜಿಲ್ಲಾಧಿಕಾರಿ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಹಂತ ಹಂತವಾಗಿ ಪೋಡಿ ಮುಕ್ತ ಅಭಿಯಾನ ಕೈಗೊಂಡು ವರ್ಷದಲ್ಲಿ ಬಾಗಲಕೋಟೆ ಜಿಲ್ಲೆಯನ್ನು ಪೋಡಿ ಮುಕ್ತ ಜಿಲ್ಲೆಯನ್ನಾಗಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಭೂಮಾಪನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಪೋಡಿ ಮುಕ್ತ ಅಭಿಯಾನದಡಿಯಲ್ಲಿ ಮೊದಲ ಹಂತದಲ್ಲಿ ಸಪ್ಟೆಂಬರ್ 2015ರಿಂದ ಜುಲೈ 2019ರ ಅಂತ್ಯಕ್ಕೆ ಒಟ್ಟು 590 ಗ್ರಾಮಗಳ ಬಹುಮಾಲೀಕತ್ವದ ಹಿಡುವಳಿದಾರರ ಜಮೀನುಗಳನ್ನು ಪೋಡಿ ಮಾಡಿ, 60476 ಪಹಣಿಗಳನ್ನು ನೀಡಲಾಗಿರುವುದಾಗಿ ತಿಳಿಸಿದರು.
ಎರಡನೇ ಹಂತದ ಪೋಡಿ ಮುಕ್ತ ಅಬಿಯಾನ ಕೈಗೊಳ್ಳಲಾಗಿದ್ದು, ಈ ಅಭಿಯಾನದಡಿ 64 ಗ್ರಾಮಗಳಲ್ಲಿ ಒಟ್ಟು 1733 ಬ್ಲಾಕ್‌ಗಳ ಪೋಡಿ ಪ್ರಕರಣಗಳ ವಿಲೇವಾರಿ ಮಾಡಲಾಗಿದೆ. ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಹಂತ ಹಂತವಾಗಿ ಅಭಿಯಾನ ಕೈಗೊಂಡು ಜಿಲ್ಲೆಯನ್ನು ಪೋಡಿ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲ ರೀತಿಯ ಕ್ರಮವಹಿಸಲಾಗುತ್ತಿದೆ. ಪೋಡಿಗೆ ಬಾಕಿ ಉಳಿದವುಗಳ ಬಗ್ಗೆ ಮಾಹಿತಿ ನೀಡಬೇಕು. ಬಾಕಿ ಉಳಿಯಲು ಕಾರಣವೇನು ಎಂಬುದನ್ನು ಸಹ ತಾಲೂಕವಾರು ಪಟ್ಟಿಮಾಡಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಜಿಲ್ಲೆಯಲ್ಲಿ ಈವರೆಗೆ 38 ಹೊಸ ಕಂದಾಯ ಗ್ರಾಮಗಳನ್ನಾಗಿ ಗುರುತಿಸಿದ್ದು, ಅವುಗಳಲ್ಲಿ 17 ಗ್ರಾಮಗಳ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 12 ಗ್ರಾಮಗಳ ಅಂತಿ ಅಧಿಸೂಚನೆಯ ಪ್ರಸ್ತಾವನೆಗಳನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಲಾಗಿದೆ. ಉಳಿದ ಗ್ರಾಮಗಳ ಅಧಿಸೂಚನೆ ಕಾರ್ಯ ಪ್ರಗತಿಯಲ್ಲಿರುವುದಾಗಿ ತಿಳಿಸಿದರು.
ಅಲ್ಲದೇ ಜಿಲ್ಲೆಯಲ್ಲಿ ಒಟ್ಟು 268 ಕೆರೆಗಳ ಅಳತೆ ಕಾರ್ಯವನ್ನು ಪೂರೈಸಲಾಗಿದೆ. ಒತ್ತುವರಿ ತೆರವು ಕುರಿತು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಮಾಹಿತಿ ನೀಡಲಾಗಿರುತ್ತದೆ. ಬಾಗಲಕೋಟೆ ತಾಲೂಕಿನಲ್ಲಿ ನಗರಾಸ್ತಿ ಮಾಲೀಕತ್ವದ ದಾಖಲೆ ಯೋಜನೆ ಜಾರಿಯಲ್ಲಿದ್ದು, ಆಧುನಿಕ ತಂತ್ರಜ್ಞಾನ ಡ್ರೋಣ್ ಮೂಲಕ ಒಟ್ಟು 43195 ಆಸ್ತಿಗಳ ಅಳತೆ ಕಾರ್ಯ ಕೈಗೊಳ್ಳಲಾಗಿದೆ. ಈಗಾಗಲೇ 30392 ಆಸ್ತಿಗಳ ಕರಡು ನಗರಾಸ್ತಿ ಪತ್ರ ನೀಡಿದ್ದು, 9379 ಆಸ್ತಿಗಳ ಅಂತಿಮ ನಗರಾಸ್ತಿ ದಾಖಲೆಗಳನ್ನು ಸೃಜೀಸಲಾಗಿರುತ್ತದೆ. ಸಾರ್ವಜನಿಕರಿಂದ ಸ್ವೀಕೃತಿಯಾದ ಆಕ್ಷೇಪಣೆಗಳನ್ನು ವಿಚಾರಣಾಧಿಕಾರಿಗಳು 1388 ಅರ್ಜಿಗಳನ್ನು ಇತ್ಯರ್ಥಪಡಿಸಿದ್ದಾರೆ. ಇನ್ನುಳಿದ ಆಸ್ತಿಗಳಲ್ಲಿ ಅಂತಿಮ ನಗರಾಸ್ತಿ ದಾಖಲೆಗಳನ್ನು ಪೂರೈಸಲು ಶೀಘ್ರ ಕ್ರಮ ಕೈಗೊಳ್ಳಲು ಸೂಚಿಸಿದರು.ಭೂದಾಖಲೆಗಳ ಉಪನಿರ್ದೇಶಕ ರವಿಕುಮಾರ ಎಂ.ಮೋಜಣಿ, ಪಹಣಿ ತಿದ್ದುಪಡಿ, ಪೋಡಿಮುಕ್ತ ಅಭಿಯಾನ, ಕಂದಾಯ ಗ್ರಾಮಗಳ ರಚನೆ, ಕೆರೆ ಅಳತಿ ಕೈಗೊಂಡ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಸಭೆಯಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕ ಚೇತನ, ರವಿಕುಮಾರ ಹಾದಿಮನಿ ಸೇರಿದಂತೆ ಎಸ್.ಪಿ.ಕಿರಗಿ, ಎ.ಜೆ.ಶೇಖ, ಕೊಡತಗೇರಿ, ಆರ್.ಪಿ.ಪಾಟೀಲ, ಎಸ್.ವಿ.ನೀಲನೂರ, ಡಿ.ಎಂ.ಚವ್ಹಾನ, ಎಂ.ಎಂ.ಮದಬಾವಿ, ಎಸ್.ಬಿ.ಹಜೇರಿ, ಬಿ.ಬಿ.ಮುಲ್ಲಾ ಹಾಗೂ ಇತರರು ಉಪಸ್ಥಿತರಿದ್ದರು.