ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಪಟ್ಟಣದ ಸ್ವಚ್ಚತೆ ಕಾಪಾಡಿಕೊಂಡು ಸುಂದರ ನಗರ ಮಾಡುವ ಉದ್ದೇಶದಿಂದ ಹಲವು ಕಠಿಣ ಕ್ರಮ ಕೈಗೊಳ್ಳವ ನಿರ್ದಾರ ಮಾಡಿದ್ದು, ಎಲ್ಲ ಸದಸ್ಯರು ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಸಹಕಾರ ನೀಡಬೇಕೆಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ ಹೇಳಿದರು.ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾದ ಮೇಲೆ ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಪ್ರಥಮ ಸಭೆಯನ್ನು ನಡೆಸಿದ ಅವರು ಮಾತನಾಡಿ, ಹಾಲಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಎಸೆಯುತ್ತಿರುವ ಕಸ, ಮನೆ ಬಾಗಿಲಿಗೆ ನಿತ್ಯ ಹೋಗಬೇಕಾದ ಕಸ ವಿಲೇವಾರಿ ವಾಹನ ವಾರಕ್ಕೂಮ್ಮೆ ಹೋಗುತ್ತಿರುವ ಅವ್ಯವಸ್ಥೆ, ರಸ್ತೆ ಅತಿಕ್ರಮಣ, ಪುಟ್ ಪಾತ್ ಅಂಗಡಿ, ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದು ಬಗ್ಗೆ ಕೆಲವು ಕಠಿಣ ಕ್ರಮ ಕೈಗೊಳ್ಳಬೇಕಾಗಿದ್ದು ,ಯಾರು ಒತ್ತಡ ಹೇರದೆ ನಮ್ಮ ಕಾರ್ಯಾಚರಣೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಪ್ಲಾಸ್ಟಿಕ್ ನಿಯಂತ್ರಣಕ್ಕೆ ಕ್ರಮಪಟ್ಟಣದ ಹೋಟೆಲ್ ಬೇಕರಿ,ತರಕಾರಿ ಹಾಗೂ ಮಾಂಸ ಮಾರಾಟ ಮಳಿಗೆಗಳಲ್ಲಿ ಯಥೇಚ್ಚವಾಗಿ ಪ್ಲಾಸ್ಟಿಕ್ ಬಳಸುತ್ತಿರುವುದನ್ನು ಸಂಪೂರ್ಣ ನಿಯಂತ್ರಿಸಲು ಪರಿಣಾಮಕಾರಿ ಕಾರ್ಯಾಚರಣೆ ಅವಶ್ಯವಾಗಿದ್ದು, ಇದಕ್ಕಾಗಿ ಪ್ಲಾನ್ ಸಹ ಮಾಡಲಾಗಿದೆ. ಪಟ್ಟಣದಲ್ಲಿ ದೊಡ್ಡ ದೊಡ್ಡ ವಾಣಿಜ್ಯ ಮಳಿಗೆಗಳು, ಮಾಲ್ ಗಳು ಪುರಸಭೆ ಸಲ್ಲಿಸಬೇಕಾದ ತೆರಿಗೆಯನ್ನು ವಂಚಿಸುತ್ತಿರುವುದು ಕಂಡು ಬಂದಿದ್ದು, ಶೀಘ್ರವಾಗಿ ಈ ಸಂಬಂಧ ಕಾರ್ಯಾಚರಣೆ ನಡೆಸಲಾಗುವುದು ಎಂದರು.
ರಸ್ತೆಯನ್ನು ಆಕ್ರಮಿಸಿ ವ್ಯಾಪಾರ ಮಾಡುತ್ತಿರುವ ಬೀದಿ ವ್ಯಾಪಾರಗಳ ಒತ್ತುವರಿ ತೆರವುಗೊಳಿಸುವ ಜತೆಯಲ್ಲಿ ನಿಗದಿತ ಜಾಗದಲ್ಲಿ ಮಾತ್ರ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಲಾಗುವುದು ಎಂದ ರಾಜಪ್ಪ ಪ್ರತಿ ಬೀದಿ ವ್ಯಾಪಾರಸ್ಥರು ತಮ್ಮ ಅಂಗಡಿಗಳ ಮುಂದೆ ಹಸಿ ಕಸ ಒಣ ಕಸಕ್ಕೆ ಡಬ್ಬಿ ಇಡುವುದನ್ನು ಕಡ್ಡಾಯ ಮಾಡಲಾಗುವುದು ಎಂದರು.ಕಸ ವಿಲೇವಾರಿ ಘಟಕ ಸ್ಥಾಪನೆ
ಮುಖ್ಯಾಧಿಕಾರಿ ಪ್ರದೀಪ್ ಕುಮಾರ್ ಮಾತನಾಡಿ, ಇನ್ನೆರಡು ತಿಂಗಳಲ್ಲಿ ಕಸ ವಿಲೇವಾರಿ ಘಟಕ ಪ್ರಾರಂಭಗೊಳ್ಳಲಿದ್ದು ,ಪಟ್ಟಣ ದ ಕಸ ವಿಲೇವಾರಿಯ ಸಮಸ್ಯೆ ಬಗೆ ಹರಿಯಲಿದೆ. ಸಮಸ್ಯೆಯ ಅಗರವಾಗಿರುವ ಒಳಚರಂಡಿ ವ್ಯವಸ್ಥೆ ನರ‍್ವಹಣೆಗೆ ತಂಡವನ್ನು ರಚಿಸಲಾಗುತ್ತಿದ್ದು,ಇನ್ನೂ ಮುಂದೆ ಒಳಚರಂಡಿ ವ್ಯವಸ್ಥೆಗೆ ಸಂಬಂಧಿಸಿದಂತೆ ಬರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ ಎಂದರು.ಹಿರಿಯ ಆರೋಗ್ಯ ಅಧಿಕಾರಿ ಶ್ರೀನಿವಾಸ್,ಪುರಸಭೆ ಸದಸ್ಯರಾದ ವೇಮನ,ಮುನಿರಾಜು ,ಚೈತ್ರ ರವಿ ,ಹೇಮಾ,ಭಾರತಮ್ಮ,ಮಂಜುಳ ಇದ್ದರು.