ಸಾರಾಂಶ
ಹುಬ್ಬಳ್ಳಿ:
ನಗರದಲ್ಲಿದ್ದ ಡಾ.ಗಂಗೂಬಾಯಿ ಹಾನಗಲ್ ಗುರುಕುಲ ಮೈಸೂರಿನ ಸಂಗೀತ ವಿವಿಗೆ ಹಸ್ತಾಂತರಿಸಿರುವುದರಿಂದ ಇಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿರುವುದು ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಭರವಸೆ ನೀಡಿದರು.ಅವರು ಉಣಕಲ್ಲಿನಲ್ಲಿರುವ ಡಾ. ಗಂಗಾಬಾಯಿ ಹಾನಗಲ್ಲ ಗುರುಕುಲವನ್ನು ಮೈಸೂರಿಗೆ ಹಸ್ತಾಂತರಿಸಿರುವ ಕ್ರಮ ಖಂಡಿಸಿ ಸೋಮವಾರ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಗುರುಕುಲಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಇಲ್ಲಿನ ಅವ್ಯವಸ್ಥೆ, ಹಾಗೂ ಆಗಿರುವ ಸಮಸ್ಯೆ ಕುರಿತು ವಿದ್ಯಾರ್ಥಿಗಳೊಂದಿಗೆ ಸುದೀರ್ಘವಾದ ಸಮಾಲೋಚನೆ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಂಕಷ್ಟಗಳನ್ನು ಜಿಲ್ಲಾಧಿಕಾರಿಗಳ ಮುಂದೆ ತೋರ್ಪಡಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಸರ್ಕಾರದ ಸೂಚನೆಯ ಮೇರೆಗೆ ಫೆಬ್ರವರಿಯಲ್ಲಿ ನಗರದ ಗುರುಕುಲವನ್ನು ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ಲ ವಿವಿಗೆ ಹಸ್ತಾಂತರಿಸಲಾಗಿತ್ತು. ಆದರೆ, ಇಲ್ಲಿ 19 ವಿದ್ಯಾರ್ಥಿಗಳು ಗುರುಕುಲದ ಶಿಕ್ಷಣ ಪಡೆಯುತ್ತಿದ್ದಾರೆ. ಇವರಿಗೆ ಈಗ ಸಮಸ್ಯೆಯಾಗಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಮಕ್ಕಳ ಸಮಸ್ಯೆ ಆಲಿಸಿದ್ದೇನೆ. ಯಾವುದೇ ಕಾರಣಕ್ಕೂ ಮಕ್ಕಳಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಲಾಗುತ್ತದೆ ಎಂದರು.ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರು ನಗರಕ್ಕೆ ಆಗಮಿಸುತ್ತಿದ್ದು, ಅವರೊಂದಿಗೆ ಈ ಕುರಿತು ಚರ್ಚಿಸಲಾಗುವುದು. ಆದಷ್ಟು ಬೇಗನೆ ಉನ್ನತ ಶಿಕ್ಷಣ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ಆಗಿರುವ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಲಾಗುವುದು. ಶೀಘ್ರವೇ ಸಚಿವರೊಂದಿಗಿನ ಸಭೆಯ ದಿನಾಂಕ ವಿದ್ಯಾರ್ಥಿಗಳಿಗೆ ಹಾಗೂ ಎಬಿವಿಪಿ ಕಾರ್ಯಕರ್ತರಿಗೆ ತಿಳಿಸುವುದಾಗಿ ಭರವಸೆ ನೀಡಿದರು.
ವಿದ್ಯಾರ್ಥಿಗಳಿಗೆ ಊಟ, ವಸತಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ಗುರುಕುಲದಿಂದ ವಿದ್ಯಾರ್ಥಿಗಳನ್ನು ಹೊರಹಾಕದಂತೆ ವಿವಿ ಕುಲಪತಿಗಳಿಗೆ ನಿರ್ದೇಶನ ನೀಡಲಾಗುವುದು ಎಂದರು.ಈ ಸಂದರ್ಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಎಪಿನಿಪಿ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ, ಅರುಣ ಅಮರಗೋಳ ಸೇರಿದಂತೆ ಗುರುಕುಲದ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.
ನಾವಿಲ್ಲಿ ಸರ್ಟಿಫಿಕೇಟ್‌ಗಾಗಿ ಬಂದಿಲ್ಲ:ಮೇಡಂ ನಾವು ಈ ಗುರುಕುಲಕ್ಕೆ ಸರ್ಟಿಫಿಕೇಟ್ ಪಡೆಯಲು ಬಂದಿಲ್ಲ. ಗುರುಗಳ ಹತ್ತಿರವಿದ್ದು, ಅವರ ಸೇವೆ ಮಾಡುತ್ತ ಅವರಲ್ಲಿರುವ ವಿದ್ಯೆ ಕಲಿಯಲು ಬಂದಿದ್ದೇವೆ. ನಮಗೆ ಯಾವುದೇ ಸರ್ಟಿಫಿಕೇಟ್ ಬೇಕಿಲ್ಲ. ಮತ್ತೇ ಮೊದಲಿನಂತೆ ನಮ್ಮನ್ನು ನಮ್ಮ ಗುರುಗಳ ಬಳಿ ಸಂಗೀತ ಕಲಿಯಲು ಅವಕಾಶ ಕಲ್ಪಿಸಿಕೊಡಿ ಎಂದು ಗುರುಕುಲದ ವಿದ್ಯಾರ್ಥಿ ಓಂಕಾರ ಪತ್ತಾರ, ಮಹಾರಾಷ್ಟ್ರದ ಯಶ್‌ರಾಜ್ ಹಾಗೂ ಲಾಥೋರನ ಸಚಿನ್ ಹಾಗೂ ಗುರುಕುಲದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು. ಗುರುಕುಲ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಟೆಂಗಿನಕಾಯಿ
ಯಾವುದೇ ಕಾರಣಕ್ಕೂ ಹುಬ್ಬಳ್ಳಿಯಲ್ಲಿರುವ ಗುರುಕುಲವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಜಿಲ್ಲಾಧಿಕಾರಿಗಳೊಂದಿಗೆ ಗುರುಕುಲಕ್ಕೆ ಭೇಟಿ ನೀಡಿ ಮಾತನಾಡಿ, ಹುಬ್ಬಳ್ಳಿಯಲ್ಲಿ ಗುರುಕುಲವಿರುವುದು ನಮ್ಮೆಲ್ಲರ ಹೆಮ್ಮೆ. ಇದನ್ನು ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ಲ ವಿವಿಗೆ ಹಸ್ತಾಂತರಿಸಿರುವುದರಿಂದ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಅಧಿವೇಶನದಲ್ಲಿ ಹಾಗೂ ಮುಖ್ಯಮಂತ್ರಿಗಳ ಬಳಿಯೂ ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳೂ ಮೌಖಿಕ ಭರವಸೆ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ತಮ್ಮ ಇಲಾಖೆ ಅಧೀನಕ್ಕೆ ತೆಗೆದುಕೊಳ್ಳುವ ಕುರಿತು ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ. ಆದಷ್ಟು ಬೇಗನೆ ಸಮಸ್ಯೆ ಇತ್ಯರ್ಥಗೊಳ್ಳುವ ವಿಶ್ವಾಸವಿದೆ ಎಂದರು.